ಹೊಸ ವರ್ಷಾಚರಣೆ ಆರಂಭಕ್ಕೆ ಇನ್ನೇನು 5 ದಿನಗಳು ಬಾಕಿ ಉಳಿದಿವೆ. ಇನ್ನು ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿಬೆಟ್ಟದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಡಿಸೆಂಬರ್ 31ರ ಸಂಜೆ 6 ರಿಂದ ಜನವರಿ 1ರ ಬೆಳಗ್ಗೆ 6 ಗಂಟೆವರೆಗೆ ನಂದಿಗಿರಿಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಡಿಸಿ ರವೀಂದ್ರ ಅವರು ಆದೇಶ ಹೊರಡಿಸಿದ್ದಾರೆ.
2024ರ ಜನವರಿ 1ರಂದು ಹೊಸ ವರ್ಷಾಚರಣೆಯ ಪ್ರಯುಕ್ತ ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿಗಿರಿಧಾಮದಲ್ಲಿ ಆಗಮಿಸುವ ಅತಿಥಿಗಳು ಮತ್ತು ಸಾರ್ವಜನಿಕರು ರಾತ್ರಿ ವೇಳೆಯಲ್ಲಿ ಮದ್ಯಪಾನ ಮತ್ತು ಧೂಮಪಾನ ಮಾಡಿ ಅಸಭ್ಯ ವರ್ತನೆ ತೋರುವುದು. ಮಹಿಳೆಯರೊಂದಿಗೆ ಅನುಚಿತ ವರ್ತನೆಗಳು ತೋರುವ ಸಂಭವವಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತೊಂದರೆಯಾಗುವ ಸಾಧ್ಯತೆಯಿವೆ.
“ಹೊಸ ವರ್ಷಾಚರಣೆಯ ಪ್ರಯುಕ್ತ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ನಂದಿಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲು ಹಾಗೂ ಪ್ರವಾಸಿಗರಿಗೆ ಅತಿಥಿ ಗೃಹಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸುವುದನ್ನು ರದ್ದುಗೊಳಿಸುವುದು ಸೂಕ್ತವೆಂದು ಮನಗಂಡು ಈ ಆದೇಶ ಹೊರಡಿಸಲಾಗಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹೊಸ ವರ್ಷಾಚರಣೆ | ಮಧ್ಯರಾತ್ರಿ 1 ಗಂಟೆವರೆಗೆ ಸಂಭ್ರಮಾಚರಣೆಗೆ ಅವಕಾಶ: ಆಯುಕ್ತ ಬಿ.ದಯಾನಂದ್
2023ರ ಹೊಸ ವರ್ಷದ ಮೊದಲ ದಿನದಂದೂ ಸಹ ಜಿಲ್ಲಾಡಳಿತ ನಂದಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧಿಸಿತ್ತು. ಜತೆಗೆ ಈ ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರ ಓಡಾಟ ನಿರ್ಬಂಧಿಸಲು ಚೆಕ್ ಪೋಸ್ಟ್ ತೆರೆದಿತ್ತು.