ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಾಸ್ಟೆಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದ(ಎಐಎಡಬ್ಲ್ಯೂಯು) ಮುಖಂಡರು ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ವೇಳೆ ಮಾತನಾಡಿದ ಎ.ಐ.ಎ.ಡಬ್ಲ್ಯೂ.ಯು ಮುಖಂಡರು, “ಕಳೆದ 15 – 20 ವರ್ಷಗಳಿಂದ ಅತಿ ಕಡಿಮೆ ಸಂಬಳಕ್ಕೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ವಸತಿ ನಿಲಯ, ಶಾಲಾ- ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆ ಸಹಾಯಕರು, ಸ್ವಚ್ಛತಾ ಸಿಬ್ಬಂದಿ, ಡಿ ದರ್ಜೆ ನೌಕರರಿಗೆ ಸೂಕ್ತ ಭದ್ರತೆ ಇಲ್ಲ. ಇದರಿಂದ ವಾರ್ಡನ್ ಸೇರಿದಂತೆ ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಂದ ಶೋಷಣೆಗೆ ಒಳಗಾಗುತ್ತಿದ್ದೇವೆ” ಎಂದು ಆರೋಪಿಸಿದರು.
“ವಸತಿ ನಿಲಯ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ನೇರವಾಗಿ ಇಲಾಖೆಯಿಂದಲೇ ವೇತನ ನೀಡಬೇಕು. ನಿವೃತ್ತಿಯವರೆಗೆ ಸೇವಾ ಭದ್ರತೆ ಒದಗಿಸಬೇಕು” ಎಂದು ಒತ್ತಾಯಿಸಿದರು.
10 ವರ್ಷ ಸೇವೆ ಸಲ್ಲಿಸಿರುವ ಹೊರಗುತ್ತಿಗೆ ನೌಕರರನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ತರಬೇಕು. ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಪರಿಷ್ಕರಣೆ ಸಮಿತಿ ಸಭೆ ಕರೆದು ಕನಿಷ್ಠ 31 ಸಾವಿರ ವೇತನ ನಿಗದಿ ಮಾಡಬೇಕು. ಕಾರ್ಮಿಕ ಇಲಾಖೆಯ ನಿಯಮದಂತೆ ವಾರದ ರಜೆ, ಕೆಲಸದ ಅವಧಿ, ನೇಮಕಾತಿ ಪತ್ರ, ಗುರುತಿನ ಚೀಟಿ, ಇ.ಎಸ್.ಐ ಮತ್ತು ಪಿ.ಎಫ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಅದಲ್ಲದೆ, ಪ್ರತಿ ತಿಂಗಳು 5ನೇ ತಾರೀಖು ವೇತನ ಕೊಡಬೇಕು. ಇದುವರೆಗೆ ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ನಿವೃತ್ತಿ ನಂತರ ಜೀವನ ನಿರ್ವಹಣೆಗೆ 10 ಲಕ್ಷ ಪರಿಹಾರ ಕೊಡಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಪಂ ಸಿಇಒಗೆ ಮನವಿ ಸಲ್ಲಿಸಲಾಯಿತು.
ಇದನ್ನು ಓದಿದ್ದೀರಾ? ತುಮಕೂರು | ಹೊರರಾಜ್ಯಕ್ಕೆ ಮಾರಾಟವಾಗಿದ್ದ 11 ವರ್ಷದ ಬಾಲಕಿಯ ರಕ್ಷಿಸಿದ ಅಧಿಕಾರಿಗಳು
ಪ್ರತಿಭಟನೆಯಲ್ಲಿ ಎ.ಐ.ಎ.ಡಬ್ಲ್ಯೂ.ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮೆ ಗೌಡ, ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಮುನಿವೆಂಕಟಪ್ಪ, ರವಿ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿಯಪ್ಪ ಕೆ, ಚೆನ್ನರಾಯಪ್ಪ, ಅಮರಾವತಮ್ಮ, ಮಂಜುಳಾ, ವರಲಕ್ಷ್ಮಿ, ನಾಗರತ್ನ, ಮಮತಾ, ಕಾಂತಮ್ಮ ಸೇರಿದಂತೆ ಮತ್ತಿತರರು ಹಾಜರಿದ್ದರು.
