ಚಿಕ್ಕಬಳ್ಳಾಪುರ ನಗರದ ಜಿಲ್ಲಾಸ್ಪತ್ರೆ, ಮುನ್ಸಿಪಲ್ ಕಾಲೇಜು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಜಿಲ್ಲಾ ತಂಬಾಕು ಉತ್ಪನ್ನಗಳ ನಿಯಂತ್ರಣ ಘಟಕ ದಾಳಿಮಾಡಿ ದಂಡ ವಿಧಿಸಿದೆ.
ಬುಧವಾರ (ಮಾ.20) ಜಿಲ್ಲಾ ತಂಬಾಕು ಉತ್ಪನ್ನಗಳ ನಿಯಂತ್ರಣ ಘಟಕ, ಡಿಎಚ್ಒ ಡಾ.ಮಹೇಶ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ 20 ಪ್ರಕರಣ ದಾಖಲಿಸಿ 1,600 ರೂ. ದಂಡ ವಿಧಿಸಿದ್ದಾರೆ.
ಈ ವೇಳೆ ಮಾತನಾಡಿದ ಡಿಎಚ್ಒ ಡಾ.ಮಹೇಶ್ ಕುಮಾರ್, ಅಂಗಡಿ ಮಾಲೀಕರು ಸಾರ್ವಜನಿಕ ಸ್ಥಳಗಳಲ್ಲಿ ಪರವಾನಗಿ ಇಲ್ಲದೇ ತಂಬಾಕು ಉತ್ಪನ್ನಗಳ ಮಾರಾಟ ಮಾಡಬಾರದು. ನಿಯಮ ಮೀರಿ ತಂಬಾಕು ಉತ್ಪನ್ನಗಳ ಮಾರಾಟ ಮಾಡಿದರೆ ಕೋಟ್ಪ-2003 ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಕಾಯ್ದೆ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ವೈದ್ಯಾಧಿಕಾರಿ ರಮೇಶ್, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ರಾಘವೇಂದ್ರ, ಮಂಜುನಾಥ, ಚೌಡರೆಡ್ಡಿ, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯ ಗಂಗಾಧರ್, ಪೊಲೀಸ್ ಸಿಬ್ಬಂದಿ ಇದ್ದರು.
