ಬಡಾವಣೆ ನಿರ್ಮಾಣಗೊಂಡು ಬರೋಬ್ಬರಿ 19 ವರ್ಷಗಳೇ ಕಳೆದಿವೆ. ಆದರೆ, ಅಗತ್ಯವಿರುವ ಮೂಲಭೂತ ಸೌಕರ್ಯಗಳು ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿವೆ. ವಸತಿ ವಂಚಿತರು ಸರ್ಕಾರ ನೀಡಿದ ಬಡಾವಣೆಯಲ್ಲಿನ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆದರೆ, ಅಗತ್ಯ ಮೂಲ ಸೌಕರ್ಯಗಳಿಲ್ಲದೆ ಪರಾಡುತ್ತಿದ್ದಾರೆ – ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೆಪಲ್ಲಿಯ ಹೊಸ ಬಡಾವಣೆಯ ಪರಿಸ್ಥಿತಿ.
ವಸತಿ ವಂಚಿತರಿಗಾಗಿ 19 ವರ್ಷಗಳ ಹಿಂದೆ ಬಾಗೆಪಲ್ಲಿಯ ತಿಮ್ಮಾಕಲಪಲ್ಲಿ ಬಳಿ ಈ ಹೊಸ ಬಡಾವಣೆಯನ್ನು ನಿರ್ಮಾಣ ಮಾಡಲಾಗಿತ್ತು. ಬಡಾವಣೆಯಲ್ಲಿ ಸುಮಾರು 400 ನಿವೇಶನಗಳನ್ನು ನಿರ್ಮಿಸಿ, ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವನ್ನೂ ಸರ್ಕಾರ ನೀಡಿತ್ತು. ಈ ಪೈಕಿ, 300 ನಿವೇಶನಗಳಲ್ಲಿ ವಸತಿ ವಂಚಿತರು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆದರೆ, ಬಡಾವಣೆಗೆ ಅಗತ್ಯ ಮೂಲ ಸೌಕರ್ಯಗಳನ್ನು ಬಾಗೆಪಲ್ಲಿ ಪುರಸಭೆ ಒದಗಿಸಿಲ್ಲ ಎಂಬ ಆರೋಪಗಳಿವೆ.
ಪಟ್ಟಣದ ಹೊರವಲಯದಲ್ಲೇ ಇರುವ ಬಡಾವಣೆಗೆ ಸರಿಯಾದ ರಸ್ತೆ ಮಾರ್ಗವಿಲ್ಲ. ಬೀದಿದೀಪಗಳೂ ಇಲ್ಲ. ಮನೆಗಳಿಗೂ ವಿದ್ಯುತ್ ಸಂಪರ್ಕವಿಲ್ಲ. ಕುಡಿಯುವ ನೀರಿಗಾಗಿ ಒಂದು ಕಿ.ಮೀ ಹೋಗಿ ನೀರು ತರಬೇಕಾದ ಪರಿಸ್ಥಿತಿಯಿದೆ. ಕೊಳಚೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯೂ ಇಲ್ಲ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ಬಡಾವಣೆಗೆ ಸರಿಯಾಗ ವಿದ್ಯುತ್ ಸೌಕರ್ಯವಿಲ್ಲದ ಕಾರಣ, ರಾತ್ರಿ ವೇಳೆ ಹೊರ ಬರುವುದೇ ಕಷ್ಟವಾಗಿದೆ. ಹಾಲು, ಚೇಳುಗಳ ಕಾಟವಿದ್ದು, ರಾತ್ರಿ ವೇಳೆ ಕಚ್ಚಿದರೆ ಏನು ಗತಿ ಎಂಬ ಆತಂಕವಿದೆ” ಎಂದು ಬಡಾವಣೆಯ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಡಾವಣೆಯಲ್ಲಿ 1,500ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದರೂ, ಅಂಗನವಾಡಿ, ಸರ್ಕಾರಿ ಶಾಲೆಯೂ ಇಲ್ಲ. ಹೀಗಾಗಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಅಲ್ಲಿನ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
“ಬಡಾವಣೆಯ ಅಭಿವೃದ್ಧಿಗೆ 1ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ಆದರೆ ಬಡಾವಣೆ ಪುರಸಭೆ ವ್ಯಾಪ್ತಿಯಲ್ಲಿವೆ. ಜಮೀನು ಪರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿವೆ. ಹೀಗಾಗಿ, ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪ್ರತ್ಯೇಕವಾಗಿ ಗೆಜಟ್ ನೋಟಿಫಿಕೆಷನ್ ಮಾಡಿಸಿ, ಎಲ್ಲ ಸೌಕರ್ಯಗಳನ್ನು ಒದಗಿಸುತ್ತೇವೆ” ಎಂದು ಶಾಸಕ ಎಸ್.ಎಸ್ ಸುಬ್ಬಾರೆಡ್ಡಿ ಹೇಳಿದ್ದಾರೆ.