ಸಂವಿಧಾನ ಉಳಿವು ಅಗತ್ಯ, ಬಿಜೆಪಿಗರು ಸಂವಿಧಾನ ವಿರೋಧಿಗಳು. ಬಿಜೆಪಿಗರು ಸಂವಿಧಾನವನ್ನು ನಾಶಗಳಿಸಲು ಮುಂದಾಗಿದ್ದಾರೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಬೇಕು. ಸಂವಿಧಾನದ ವಿನಾಶಕ್ಕೆ ಅವಕಾಶ ಕೊಡಬಾರದು. ಅದಕ್ಕಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಚಿಂತಾಮಣಿ ತಾಲೂಕಿನಲ್ಲಿ ಬುಧವಾರ (ಮಾ.13) ಆಯೋಜಿಸಿದ್ದ ಕಾಂಗ್ರೆಸ್ ಗ್ಯಾರಂಟಿ ಸಮಾವೇಶ ಮತ್ತು 431 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಸರ್ಕಾರ ಐದು ಗ್ಯಾರಂಟಿಗಳ ಕೊಡುಗೆ ನೀಡುವ ಮೂಲಕ ರಾಜ್ಯದ ಬಡ ಜನರ ಆರ್ಥಿಕ ಸುಧಾರಣೆಗೆ ಒತ್ತು ನೀಡಿದೆ. ನಿರುದ್ಯೋಗಿ ಪದವೀಧರರಿಗೆ 2 ವರ್ಷಗಳ ಕಾಲ 3 ಸಾವಿರ ಮತ್ತು ಡಿಪ್ಲೊಮಾ ಪದವೀಧರರಿಗೆ 1500 ಹಣ ನೀಡುತ್ತಿದೆ. ನಿರುದ್ಯೋಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೌಶಲ್ಯ ತರಬೇತಿಯನ್ನು ಸಹ ಕೊಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ ಜನರ ಯೂನಿವರ್ಸಲ್ ಬೇಸಿಕ್ ಇನ್ಕಮ್ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ ಜನರಿಗೆ ಕೊಂಡುಕೊಳ್ಳುವ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ಹಂಚಲಾಯಿತು. ಅಂತೆಯೇ 2023ರ ಮೇ 20ರಂದು ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು ಎಂದು ಪ್ರತಿಪಾದಿಸಿದರು.
ಎಂ.ಸಿ.ಸುಧಾಕರ್ ಉತ್ತಮ ರಾಜಕಾರಣಿ. ರಾಜ್ಯ ಮತ್ತು ಕ್ಷೇತ್ರದ ಅಭಿವೃದ್ಧಿ ಕನಸು ಹೊಂದಿದ್ದಾರೆ. ಕ್ಷೇತ್ರದ ಜನತೆ ಉತ್ತಮ ನಾಯಕನನ್ನು ಆಯ್ಕೆ ಮಾಡಿದ್ದಾರೆ ಎಂದು ಹೊಗಳಿದರು.
ಬಯಲು ಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳ ಅಭಿವೃದ್ದಿಗಾಗಿ, ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ನೀರಾವರಿ ಯೋಜನೆಗೆ 3 ಸಾವಿರ ಕೋಟಿ ವ್ಯಯ ಮಾಡಲಾಗಿದೆ ಎಂದು ಹೇಳಿದರು.
15 ಪೈಸೆಯನ್ನೂ ಕೊಡದ ಮೋದಿ ಸುಳ್ಳು ಹೇಳಿದ್ದಾರೆ:
ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕಪ್ಪುಹಣ ಹೊರತಂದು ರಾಜ್ಯದ ಜನರಿಗೆ 15 ಲಕ್ಷ ಹಣ ಕೊಡುತ್ತೇವೆ ಎಂದು ಮೋದಿ ಸುಳ್ಳು ಹೇಳಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ 15 ಪೈಸೆಯನ್ನೂ ಸಹ ಕೊಡಲಿಲ್ಲ ಎಂದು ಟೀಕಿಸಿದರು.
ಸಮಾವೇಶದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಸುಧಾಕರ್, ಸಚಿವ ಮಹದೇವಪ್ಪ, ಚಿಕ್ಕಬಳ್ಳಾಪುರ ನಗರ ಶಾಸಕ ಪ್ರದೀಪ್ ಈಶ್ವರ್ ಸೇರಿದಂತೆ ಇತರೆ ಗಣ್ಯರು, ಕಾರ್ಯಕರ್ತರು ಹಾಗೂ ಅಧಿಕಾರಿ ವರ್ಗದವರು ಹಾಜರಿದ್ದರು.