ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ತಡರಾತ್ರಿ ಯುವಕನನ್ನು ಅಟ್ಟಾಡಿಸಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಐಪಿಎಲ್ ಸಂಭ್ರಮಾಚರಣೆ ವೇಳೆ ನಡೆದ ಗಲಾಟೆ ಯುವಕನ ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಅಂಗಡಿಯೊಂದರ ಬೇಸ್ಮೆಂಟ್ನಲ್ಲಿ ಯುವಕನ ಶವ ಪತ್ತೆಯಾಗಿದೆ. ಮೃತ ಯುವಕ ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಕಾಲೊನಿಯ ಶ್ರೀಕಾಂತ್ ಎಂದು ತಿಳಿದುಬಂದಿದೆ.
ಮೃತದೇಹ ಪತ್ತೆಯಾಗಿರುವ ಸ್ಥಳದ ಹಿಂದಿನ ರಸ್ತೆಯಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಕೊಲೆ ಮಾಡಿರುವ ದುಷ್ಕರ್ಮಿಗಳು ಶವವನ್ನು ಬೇರೆ ಸ್ಥಳದಲ್ಲಿ ಎಸೆದು ಹೋಗಿದ್ದಾರೆಂಬುದು ಪೊಲೀಸ್ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ಯುವಕನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಕಳೆದ ರಾತ್ರಿ ಮನೆಗೆ ಬಂದಿರಲಿಲ್ಲ, ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.
ಈ ಸುದ್ದಿ ಓದಿದ್ದೀರಾ? ತೀವ್ರ ಸ್ವರೂಪ ಪಡೆಯುತ್ತಿರುವ ʼಹೇಮಾವತಿʼ ಹೋರಾಟ; ಎಸ್ಪಿ ಕಚೇರಿ ಮುಂದೆ ಬಿಜೆಪಿ ಶಾಸಕರ ಧರಣಿ
ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಕಟ್ಟಡ ಬೇಸ್ಮೆಂಟ್ನಲ್ಲಿ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ. ಶವದ ಗುರುತು ಪತ್ತೆಯಾಗಿದ್ದು, 29 ವರ್ಷದ ಶ್ರೀಕಾಂತ್ ಎಂದು ತಿಳಿದುಬಂದಿದೆ. ಶವದ ಪಕ್ಕದಲ್ಲಿ ಕಲ್ಲು ಪತ್ತೆಯಾಗಿದೆ. ಇದರಿಂದ ಕಲ್ಲಿನಿಂದ ಜಜ್ಜಿ ಸಾಯಿಸಿರುವುದು ಕಂಡುಬರುತ್ತದೆ. ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಾಗಿದೆ. ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲನೆ ಮಾಡಲಾಗಿದೆ. ಮರಣೋತ್ತರ ಪರೀಕೆಗೆ ಶವವನ್ನು ಕಳುಹಿಸಲಾಗಿದೆ. ಶೀಘ್ರವೇ ಆರೋಪಿಗಳ ಪತ್ತೆ ಮಾಡಲಾಗುವುದು” ಎಂದು ತಿಳಿಸಿದ್ದಾರೆ.