ನಗರಸಭೆ ಸದಸ್ಯನ ಮೇಲೆ ಹಲ್ಲೆ ಖಂಡಿಸಿ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಪ್ರಗತಿಪರ ಸಂಘಟನೆಗಳು ಅಕ್ಟೋಬರ್ 18ರಂದು ಚಿಂತಾಮಣಿ ಬಂದ್ ಮಾಡಿ, ಪ್ರತಿಭಟನೆ ನಡೆಸಿವೆ.
ನಗರಸಭೆಯ ಜೆಡಿಎಸ್ ಸದಸ್ಯ ಅಗ್ರಹಾರ ಮುರುಳಿ ಮೇಲೆ ಅಕ್ಟೋಬರ್ 13ರ ರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮಾರಣಾಂತಕ ಹಲ್ಲೆ ಮಾಡಿದ್ದರು. ಘಟನೆಗೆ ಪೊಲೀಸ್ ವೈಫಲ್ಯ ಕಾರಣವೆಂದು ಆರೋಪಿಸಿ ವಿವಿಧ ಸಂಘಟನೆಗಳು ಚಿಂತಾಮಣಿ ಬಂದ್‌ಗೆ ಕರೆಕೊಟ್ಟಿದ್ದವು.
ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನೂರಾರು ಜನರು ದ್ವಿಚಕ್ರ ವಾಹನದ ಮೂಲಕ ಪ್ರತಿಭಟನಾ ರ್‍ಯಾಲಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಗರದಲ್ಲಿ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿ ಮಾಲೀಕರು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿದ್ದು, ಮೂವರು ಡಿವೈಎಸ್‌ಪಿ, ಹತ್ತು ಮಂದಿ ಸಬ್ ಇನ್‌ಸ್ಪೇಕ್ಟರ್, 48 ಸಹಾಯಕ ಸಬ್ ಇನ್‌ಸ್ಪೇಕ್ಟರ್, 400 ಮಂದಿ ಪೊಲೀಸ್ ಸಿಬ್ಬಂದಿ ಹಾಗೂ ನಾಲ್ಕು ಕೆಎಸ್‌ಆರ್‌ಪಿ ತುಕುಡಿಗಳನ್ನು ಬಂದೋಬಸ್ತಗಾಗಿ ನಿಯೋಜಿಸಲಾಗಿತ್ತು.