ಸರಿಯಾದ ಪರಿಹಾರ ನೀಡದ, ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿದ್ದ ಉಪ ವಿಭಾಗಾಧಿಕಾರಿ (ಎಸಿ) ಕಚೇರಿಯ ಪೀಠೋಪಕರಣಗಳನ್ನು ದೂರುದಾರರು ಹೊತ್ತೊಯ್ದಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ದೂರುದಾರರು ತಮ್ಮ ಕಚೇರಿಯ ಎಲ್ಲ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದಾಗ ಉಪ ವಿಭಾಗಾಧಿಕಾರಿ ಮೂಕರಾಗಿ ನಿಂತಿದ್ದದ್ದು ಕಂಡುಬಂದಿದೆ.
2011ರಲ್ಲಿ ಬಾಗೇಪಲ್ಲಿಯ ಡಿವಿಜಿ ರಸ್ತೆ ಅಗಲೀಕರಣ ಕಾಮಗಾರಿ ನಡೆದಿತ್ತು. ಆಗ, ಬೀದಿ ಬದಿ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದವರನ್ನು ಒಕ್ಕಲೆಬ್ಬಿಸಲಾಗಿತ್ತು. ಜಾಗ ಕಳೆದುಕೊಂಡವರಿಗೆ ಒಂದು ಚದುರ ಅಡಿಗೆ ಕೇವಲ 240 ರೂ.ಗಳಂತೆ ಪರಿಹಾರ ನೀಡಲಾಗಿತ್ತು.
ಆ ಪರಿಹಾರದ ಮೊತ್ತವು ತೀರ ಕಡಿಮೆ. ಹೆಚ್ಚು ಪರಿಹಾರ ನೀಡಬೇಕೆಂದು ಜಾಗ ಕಳೆದುಕೊಂಡಿದ್ದವರು ಚಿಕ್ಕಬಳ್ಳಾಪುರ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ದರು. ಅವರ ಅಳಲು ಆಲಿಸಿದ್ದ ನ್ಯಾಯಾಲಯ, ಪ್ರತಿ ಚದುರ ಅಡಿಗೆ 890 ರೂ.ಗಳಂತೆ ಪರಿಹಾರ ಪಾವತಿಸಬೇಕೆಂದು ಕಳೆದ ಎರಡು ತಿಂಗಳ ಹಿಂದೆ ಆದೇಶಿಸಿತ್ತು. ಪರಿಹಾರ ಪಾವತಿಸಲು ಉಪ ವಿಭಾಗಾಧಿಕಾರಿ ಅಶ್ವಿನ್ ಅವರಿಗೆ ಸೂಚನೆ ನೀಡಿತ್ತು.
ಕೋರ್ಟ್ ತೀರ್ಪು ನೀಡಿ ಎರಡು ತಿಂಗಳು ಕಳೆದರೂ, ಉಪ ವಿಭಾಗಾಧಿಕಾರಿ ಅಶ್ಚಿನ್ ಅವರು ಪರಿಹಾರ ಪಾವತಿ ಮಾಡಿರಲಿಲ್ಲ. ಹೀಗಾಗಿ, ದೂರುದಾರರು ಮತ್ತೆ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿರುವ ಕೋರ್ಟ್, ಉಪ ವಿಭಾಗಾಧಿಕಾರಿ ಕಚೇರಿಯ ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ದೂರುದಾರರಿಗೆ ನಿರ್ದೇಶಿಸಿತ್ತು.
ನ್ಯಾಯಾಲಯದ ನಿರ್ದೇಶನದಂತೆ ದೂರುದಾರರು ಎಸಿ ಕಚೇರಿಯಲ್ಲಿದ್ದ ಪೀಠೋಪಕರಣಗಳು, ಕಂಪ್ಯೂಟರ್, ಟೇಬಲ್, ಪ್ರಿಂಟರ್, ಗಾಡ್ರೆಜ್, ಖುರ್ಚಿಗಳು ಸೇರಿದಂತೆ ಎಲ್ಲ ವಸ್ತುಗಳನ್ನು ಹೊತ್ತೋಯ್ದಿದ್ದಾರೆ.
ಬಳಿಕ, ಉಪವಿಭಾಗಾಧಿಕಾರಿಯು ಪರಿಹಾರ ಪಾವತಿಗೆ ಎರಡು ತಿಂಗಳ ಕಾಲಾವಕಾಶ ಕೇಳಿದ್ದು, ಪೀಠೋಪಕರಣಗಳನ್ನು ದೂರುದಾರರು ಹಿಂದಿರುಗಿಸಿದ್ದಾರೆ. ಎರಡು ತಿಂಗಳೊಳಗೆ ಪರಿಹಾರ ಪಾವತಿಸುವಂತೆ ನ್ಯಾಯಾಲಯ ಸೂಚನೆ ನೀಡಿದೆ.