ರಸ್ತೆ ವಿಚಾರಕ್ಕೆ ಕ್ರಷರ್ ಮಾಲೀಕ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕ್ರಷರ್ ಮಾಲೀಕ ವ್ಯಕ್ತಿಯೋರ್ವನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಮಂಚೇನಹಳ್ಳಿ ತಾಲೂಕಿನ ಕಣಗಾನಕೊಪ್ಪ ಗ್ರಾಮದ ಬಳಿ ಬುಧವಾರ ನಡೆದಿದೆ.
ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಕಣಗಾನಕೊಪ್ಪ ಬಳಿ ಮಾಜಿ ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ ಸಂಬಂಧಿ ಸಕಲೇಶ್ ಎಂಬಾತ ಜಲ್ಲಿ ಕ್ರಷರ್ ಪರವಾನಗಿ ಪಡೆದಿದ್ದು, ದಾರಿಯ ವಿಚಾರವಾಗಿ ಸ್ಥಳೀಯರು ಮತ್ತು ಕ್ರಷರ್ ಮಾಲೀಕರ ನಡುವೆ ಹಲವು ದಿನಗಳಿಂದ ಗಲಾಟೆ ನಡೆಯುತ್ತಿತ್ತು.
ಕ್ರಷರ್‌ಗೆ ಅವಕಾಶ ಕೊಡಬಾರದು ಎಂದು ಸ್ಥಳೀಯರು ಹಲವು ಬಾರಿ ಪ್ರತಿಭಟನೆಯನ್ನು ನಡೆಸಿದ್ದರು. ಇದೇ ವಿಚಾರವಾಗಿ ಶಾಸಕ ಪ್ರದೀಪ್ ಈಶ್ವರ್, ಸ್ಥಳೀಯರು ಮತ್ತು ಕ್ರಷರ್ ಮಾಲೀಕರನ್ನು ಕರೆಸಿ ಸಂದಾನ ಸಭೆಯನ್ನೂ ನಡೆಸಿದ್ದರು ಎನ್ನಲಾಗಿದೆ.
ವಿಡಿಯೋ ಲಿಂಕ್ : https://www.facebook.com/share/v/15DkXUTsv3/
ಬುಧವಾರ ಮಧ್ಯಾಹ್ನದ ಸುಮಾರಿನಲ್ಲಿ ಕ್ರಷರ್ ಮಾಲೀಕ ಸಕಲೇಶ್ ಸಹಚರರು ಕ್ರಷರ್‌ಗೆ ದಾರಿ ಮಾಡಲು ಮುಂದಾಗಿದ್ದು, ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಕ್ರಷರ್ ಮಾಲೀಕ ಸಕಲೇಶ್ ರವಿ ಎಂಬಾತನ ಕಾಲಿಗೆ ತನ್ನ ಬಳಿಯಿದ್ದ ಬಂದೂಕಿನಿಂದ ಗುಂಡು ಹಾರಿಸಿ, ಸ್ಥಳೀಯರಿಗೆ ಬೆದರಿಕೆ ಹಾಕಿದ್ದಾನೆ.

ಗಾಯಾಳು ರವಿ ಎಂಬಾತನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಗುಂಡನ್ನು ಹೊರತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಕುಶಾಲ್ ಚೌಕ್ಸೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಮಂಚೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.