“ಕೇಂದ್ರದ ಮೋದಿ ಸರಕಾರ ಅಂಬೇಡ್ಕರ್ ವಿರೋಧಿ, ಸಂವಿಧಾನ ವಿರೋಧಿ, ದಲಿತ ವಿರೋಧಿ ಸರಕಾರವಾಗಿದೆ, ಬಹಿಷ್ಕೃತ ಅಮಿತ್ ಶಾಗೆ ಅಂಬೇಡ್ಕರ್ ಕುರಿತು ಮಾತಾಡುವ ನೈತಿಕತೆ ಇಲ್ಲ, ಹೆಜ್ಜೆಹೆಜ್ಜೆಗೂ ಸಂವಿಧಾನದ ಮೇಲೆ ದಾಳಿ ಮಾಡುತ್ತಿರುವ ಮನುಸಂತಾನ. ಕೋಮುವಾದಿ ಅಮಿತ್ ಶಾ ರಾಜೀನಾಮೆ ಕೊಡಬೇಕು, ಕೆಟ್ಟ ಮನಸ್ಥಿತಿಯ ಅಮಿತ್ ಶಾನನ್ನು ಸಂಪುಟದಿಂದ ವಜಾಗೊಳಿಸಬೇಕು.”
ಲೋಕಸಭೆಯಲ್ಲಿ ಗೃಹಸಚಿವ ಅಮಿತ್ ಶಾ ಅಂಬೇಡ್ಕರ್ ಅವರ ವಿರುದ್ಧವಾಗಿ ನಾಲಿಗೆ ಹರಿಬಿಟ್ಟಿರುವುದನ್ನು ವಿರೋಧಿಸಿ ಚಿಕ್ಕಬಳ್ಳಾಪುರ ನಗರದಲ್ಲಿ ಗುರುವಾರ ದಲಿತ ಮುಖಂಡರಿಂದ ವ್ಯಕ್ತವಾದ ಖಂಡನೆಯ ಮಾತುಗಳಿವು.
“ಅಂಬೇಡ್ಕರ್..ಅಂಬೇಡ್ಕರ್..ಅಂಬೇಡ್ಕರ್..ಇದೊಂದು ಫ್ಯಾಷನ್ ಆಗಿದೆ. ಇಷ್ಟು ಬಾರಿ ದೇವರ ಹೆಸರು ಹೇಳಿದ್ದರೆ, ಅವರಿಗೆ ಸ್ವರ್ಗದಲ್ಲಿ ಸ್ಥಾನವಾದರೂ ದೊರೆಯುತ್ತಿತ್ತು” ಎಂದು ಹೇಳುವ ಮೂಲಕ ಅಮಿತ್ ಷಾ ಬಾಬಾ ಸಾಹೇಬರಿಗೆ ಅಪಮಾನ ಮಾಡಿದ್ದಾರೆ. ಪ್ರಧಾನಿ ಮೋದಿ ಕೂಡಲೇ ಅವರನ್ನು ಸಂಪುಟದಿಂದ ವಜಾಗೊಳಿಸಿ ದೇಶದ ಜನರಿಗೆ ಕ್ಷಮೆಯಾಚಿಸಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ‘ಅಂಬೇಡ್ಕರ್’- ಅಮಿತ್ ಶಾ ಆಡಿದ ಮಾತಲ್ಲ, ಹೊಟ್ಟೆಯೊಳಗಿನ ಹೊಲಸು
ಸುದ್ದಿಗಾರರೊಂದಿಗೆ ಮಾತನಾಡಿದ ದಲಿತ ಮುಖಂಡ ಸುಧಾ ವೆಂಕಟೇಶ್, ಬಿಜೆಪಿ ಸರಕಾರ ಮನುವಾದಿ ಸರಕಾರ ಎಂಬುದನ್ನು ಪದೇ ಪದೇ ಸಾಬೀತು ಮಾಡುತ್ತಿದೆ. ಸಂವಿಧಾನವನ್ನು ಬದಲಾವಣೆ ಮಾಡುವುದಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಅಂದಿನ ಸಂಸದ ಅನಂತಕುಮಾರ್ ಹೆಗ್ಗಡೆ ಹೇಳಿದ್ದರು. ಈಗ ಶಾಸನ ಮಾಡುವ ಲೋಕಸಭೆಯಲ್ಲಿಯೇ ಪದೇ ಪದೇ ಅಂಬೇಡ್ಕರ್ ಹೆಸರೇಳುವುದು ತಪ್ಪು. ಬದಲಿಗೆ ದೇವರ ಹೆಸರು ಹೇಳಿ ಎಂದು ಪರೋಕ್ಷವಾಗಿ ಗೃಹಸಚಿವರೇ ಹೇಳುತ್ತಿದ್ದಾರೆ. ಇದನ್ನು ಪ್ರತಿಪಕ್ಷಗಳು ಖಂಡಿಸಿದರೆ ಪ್ರಧಾನಿ ಮೋದಿ, ಶಾ ಹೇಳಿಕೆಯಲ್ಲಿ ತಪ್ಪಿಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ. ಕೇಂದ್ರದ ಮೋದಿ ಸರಕಾರ ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ, ಸಂವಿಧಾನ ವಿರೋಧಿ ಸರಕಾರವಾಗಿದೆ. ಇಲ್ಲಿರುವ ಮನುವಾದಿಗಳಿಂದ ಇದನ್ನಲ್ಲದೆ ಬೇರೇನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಅಂಬೇಡ್ಕರ್ ವಿಶ್ವಶ್ರೇಷ್ಠ ಸಂವಿಧಾನವನ್ನು ಭಾರತಕ್ಕೆ ಕೊಡುಗೆ ನೀಡಿದ್ದರೂ, ಇದರ ಮೂಲಕವೇ ಅಧಿಕಾರಕ್ಕೆ ಬಂದಿರುವ ಬಿಜೆಪಿಯ ಮನುಸಂತಾನ ಹೆಜ್ಜೆಹೆಜ್ಜೆಗೂ ಸಂವಿಧಾನದ ಮೇಲೆ ದಾಳಿ ಮಾಡುತ್ತಲೇ ಬಂದಿದೆ. ಇದನ್ನು ಗ್ರಹಿಸಿಯೇ ದೇಶಕ್ಕೆ ಸಂವಿಧಾನ ಸಮರ್ಪಣೆ ಮಾಡುವ ಸಂದರ್ಭದಲ್ಲಿ ಬಾಬಾ ಸಾಹೇಬರು, “ನಾನು ಭಾರತ ದೇಶಕ್ಕೆ ಒಪ್ಪುವ ಉತ್ತಮ ಸಂವಿಧಾನವನ್ನೇ ನೀಡಿದ್ದೇನೆ. ಆದರೆ ಇದನ್ನು ಜಾರಿಮಾಡುವ ಸ್ಥಾನದಲ್ಲಿ ಕುಳಿತುಕೊಳ್ಳುವ ಜನ ಒಳ್ಳೆಯವರಿದ್ದರೆ, ಒಳ್ಳೆಯದೇ ಆಗಲಿದೆ. ಕೆಟ್ಟವರಿದ್ದರೆ ಕೆಟ್ಟದ್ದೇ ಆಗಲಿದೆ” ಎಂದು ಮಾತೊಂದನ್ನು ಹೇಳಿದ್ದರು. ಅಂಬೇಡ್ಕರ್ ಹೇಳಿರುವ ಮಾತು ಇಂದಿಗೆ ನಿಜವಾಗಿದೆ. ಗುಜರಾತ್‌ನಲ್ಲಿ ಹಲವು ಕೇಸುಗಳನ್ನು ಮೈಮೇಲೆ ಹಾಕಿಸಿಕೊಂಡು ಜೈಲಿಗೆ ಹೋಗಿಬಂದಿದ್ದ, ಗಡಿಪಾರು ಆಗಿದ್ದ ಅಮಿತ್ ಶಾ ಇಂದು ದೇಶದ ಗೃಹಮಂತ್ರಿಯಾಗಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಇಂತಹ ಕೆಟ್ಟ ವ್ಯಕ್ತಿಯನ್ನು ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯಲು ಬಿಡದೆ ರಾಜೀನಾಮೆ ಪಡೆಯಬೇಕು ಎಂದು ಪ್ರಧಾನಿಗಳನ್ನು ಒತ್ತಾಯಿಸಿದರು.
ಮಾಜಿ ನಗರಸಭೆ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಬಹಿಷ್ಕೃತರಾಗಿರುವ ಅಮಿತ್ ಶಾ ಅವರಿಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಅವರ ಪಾದದೂಳಿಗೂ ಸಮನಿಲ್ಲದ ಈ ವ್ಯಕ್ತಿ ಅಂಬೇಡ್ಕರ್ ಅವರ ಹೆಸರೇಳುವುದನ್ನು ಸಹಿಸಲ್ಲ ಎಂದರೆ ಎಂತಹ ಕೆಟ್ಟ ಮನುಷ್ಯ ಎನ್ನುವುದು ದೇಶದ ಜನತೆಗೆ ಇದೀಗ ಅರಿವಾಗಿದೆ. ಈತನ ಮಾತನ್ನು ನಾವು ಒಪ್ಪುವುದಿಲ್ಲ. ನೀವು ಕೂಡಲೇ ರಾಜೀನಾಮೆ ಕೊಡಲಿಲ್ಲ ಎಂದರೆ ದೇಶಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ದಸಂಸ ರಾಜ್ಯ ಸಂಚಾಲಕ ಬಿ.ವಿ.ಆನಂದ್ ಮಾತನಾಡಿ, ದಲಿತರು ಅಂಬೇಡ್ಕರ್ ಅವರ ಧ್ಯಾನ ಮಾಡದೆ ಇನ್ನಾರನ್ನು ಧ್ಯಾನ ಮಾಡಲು ಸಾಧ್ಯ. ಪ್ರಧಾನಿ ವಿದೇಶಗಳಿಗೆ ಹೋದಾಗ ನಾವು ಬುದ್ದನ ನಾಡಿನಿಂದ ಬಂದಿದ್ದೇವೆ ಎಂದು ಹೇಳುವ ಇವರು ದೇಶದಲ್ಲಿ ಅಂಬೇಡ್ಕರ್ ವಿರುದ್ದ ನಡೆದುಕೊಳ್ಳುತ್ತಿರುವುದು ಖಂಡನೀಯ. ದಸಂಸ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಇವರು ಗುಜರಾತ್ ಸರಕಾರದಲ್ಲಿ ಗೃಹಮಂತ್ರಿ ಆಗಿದ್ದಾಗ ಗಡಿಪಾರಾಗಿ, ಜೈಲುವಾಸ ಅನುಭವಿಸಿ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದು ಕೇಂದ್ರದಲ್ಲಿ ಗೃಹಮಂತ್ರಿ ಆಗಿದ್ದಾರೆ. ಇವರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಬೇಕು. ಅಲ್ಲಿಯವರೆಗೆ ದಸಂಸ ವಿರಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಜಾಗೃತಿ ಕೊರತೆಯಿಂದ ಮಾನವ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ : ನ್ಯಾ.ನೇರಳೆ ವೀರಭದ್ರಯ್ಯ ಭವಾನಿ
ಈ ವೇಳೆ ಮುಖಂಡರಾದ ಕಂಗಾನಹಳ್ಳಿ ನಾರಾಯಣಸ್ವಾಮಿ, ವೆಂಕಟೇಶ್, ರಮಣಪ್ಪ, ಸಾಗರ್ ಮತ್ತಿತರರಿದ್ದರು.