ಸಮಸ್ಯೆ ಹೇಳಿಕೊಂಡು ಬಂದ ಪರಿಶಿಷ್ಟರನ್ನು ನಿಂದಿಸಿ, ಜಾತೀಯತೆ ಮೆರೆದಿರುವ ಚಿಕ್ಕಬಳ್ಳಾಪುರ ಎಸ್‌ಪಿ ನಾಗೇಶ್ ಅವರನ್ನು ಅಮಾನತು ಮಾಡಬೇಕು. ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಅಹಿಂದ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಹರಿರಾಮ್ ಒತ್ತಾಯಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸಾಂವಿಧಾನಿಕವಾಗಿ ನೇಮಕಗೊಂಡು ಅಧಿಕಾರದ ಗದ್ದುಗೆ ಏರುವ ಮೇಲಾಧಿಕಾರಿಗಳೇ ಜಾತೀಯತೆ ಆಚರಣೆ ಮಾಡಿದರೆ, ತಳವರ್ಗದ ಜನರ ಪಾಡು ಏನಾಗಬೇಕು” ಎಂದರು.
“ಪ್ರಕರಣವೊಂದರಲ್ಲಿ ಇನ್ಸ್‌ಪೆಕ್ಟರ್ ಅವರನ್ನು ರಕ್ಷಿಸಲು ಸಿಬ್ಬಂದಿಗಳ ತಲೆದಂಡ ಮಾಡುತ್ತಿದ್ದಾರೆ. ಇಬ್ಬರು ಪೇದೆಗಳನ್ನು 6 ತಿಂಗಳ ಕಾಲ ಅಮಾನತು ಮಾಡಿ ಮಾನಸಿಕ ಹಿಂಸೆ ಕೊಟ್ಟಿದ್ದಾರೆ. ಇದನ್ನು ಕೇಳಲು ಹೆಣ್ಣುಮಕ್ಕಳು ಎಸ್‌ಪಿ ಕಚೇರಿಗೆ ಹೋದಾಗ ಅವರ ವಿರುದ್ಧವೂ ಪ್ರಕರಣ ದಾಖಲಿಸುವುದಾಗಿ ನಾಗೇಶ್ ಬೆದರಿಕೆ ಹಾಕಿದ್ದಾರೆ. ಜಾತಿ ನಿಂದನೆ ಮಾಡಿದ್ದಾರೆ. ಅಧಿಕಾರಿಗಳ ದುರ್ವರ್ತನೆ ಖಂಡನೀಯ” ಎಂದರು.
“ದಿಬ್ಬೂರಹಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ರವಿಕುಮಾರ್ ಹಣ ಬದಲಾವಣೆ ಪ್ರಕರಣದ ಆರೋಪಿಗಳನ್ನು 3 ದಿನಗಳ ಕಾಲ ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿದ್ದರು. ಅದು ದೊಡ್ಡ ಅಪರಾಧ. ಇದು ಬೆಳಕಿಗೆ ಬಂದ ಬಳಿಕ, ಇನ್ಸ್‌ಪೆಕ್ಟರ್‍ನನ್ನು ರಕ್ಷಿಸಲು ಮುಖ್ಯಪೇದೆ ನರಸಿಂಹ ಮೂರ್ತಿ ಹಾಗೂ ಪೇದೆ ಅಶೋಕ್ ಎಂಬುವರನ್ನು ಅಮಾನತು ಮಾಡಲಾಗಿದೆ” ಎಂದು ದೂರಿದ್ದಾರೆ.
“ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಇನ್ಸ್‌ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಿದಂತೆ ದಲಿತರನ್ನು ಜಾತಿ ನಿಂದನೆ ಮಾಡಿದ ಎಸ್‌ಪಿ ವಿರುದ್ಧವೂ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಭಾಸ್ಕರ ಪ್ರಸಾದ್, ದಲಿತ್ ರಮೇಶ್, ಜನಾರ್ದನ, ನಾಗೇಶ್ ಇತರರಿದ್ದರು.