ಗೌರಿಬಿದನೂರು ತಾಲೂಕಿನ ಸೊಣಗಾನಹಳ್ಳಿ ಗ್ರಾಮದ ಸುಮಾರು 1190 ರೈತರಿಗೆ ಫಸಲ್ ಭಿಮಾ ಯೋಜನೆಯ ವಿಮೆ ಹಣ ಬಂದಿಲ್ಲ. ಇದಿರಂದ ರೈತರಿಗೆ ಅನ್ಯಾಯ ಆಗಿದೆ. ಈ ಕುರಿತು ಶೀಘ್ರ ಪರಿಶೀಲನೆ ನಡೆಸಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಫಸಲ್ ಭಿಮಾ ಯೋಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ನೋಂದಾಯಿಸಲು ಜಿಲ್ಲೆಯಾದ್ಯಂತ ವ್ಯಾಪಕ ಅರಿವು ಮೂಡಿಸಲು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಸ್ತುತ ಫಸಲ್ ಭಿಮಾ ಯೋಜನೆಯಡಿ ಒಟ್ಟು 74,460 ರೈತರು ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯ ಒಟ್ಟು ರೈತರ ಸಂಖ್ಯೆಗೆ ಹೋಲಿಸಿದರೆ ಫಸಲ್ ಭಿಮಾ ಯೋಜನೆಗೆ ನೋಂದಾಯಿಸಿಕೊಂಡ ರೈತರ ಸಂಖ್ಯೆ ಕಡಿಮೆ ಇದೆ. ಆದ್ದರಿಂದ ಎರಡೂ ಇಲಾಖೆ ಅಧಿಕಾರಿಗಳು ಫಸಲ್ ಭಿಮಾ ನೋಂದಣಿಗೆ ಹೆಚ್ಚಿನ ಗಮನಹರಿಸಿ ಈ ಬಗ್ಗೆ ವ್ಯಾಪಕ ಜಾಗೃತಿಯನ್ನೂ ಮೂಡಿಸಬೇಕೆಂದರು.
ಬೀಚಗಾನಹಳ್ಳಿಯಲ್ಲಿ ಅಕ್ರಮ :
ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿಯಲ್ಲಿ ಹಳೆಯ ಓವರ್ ಹೆಡ್ ಟ್ಯಾಂಕ್‌ಗೆ ಸುಣ್ಣ ಬಳಿದು ಬಿಲ್ ಮಾಡಿಕೊಳ್ಳಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಂಸದರು, ಆ ರೀತಿ ಆಗಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ ಪ್ರಕಾಶ್ ಅವರಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು ಆ ರೀತಿ ಎಲ್ಲಿಯೂ ಆಗಿಲ್ಲ ಎಂದು ಉತ್ತರಿಸಿದರು.
ನರೇಗಾ ಗುರಿ ಸಾಧನೆಗೆ ಅಸಮಾಧಾನ :
ನರೇಗಾ ಕಾಮಗಾರಿ ಕುರಿತು ಪರಿಶೀಲನೆ ನಡೆಸಿದ ಸಂಸದರು, ನಮ್ಮ ಅವಧಿಯಲ್ಲಿ 31 ಲಕ್ಷ ಮಾನವ ದಿನಗಳ ಸೃಜನೆಯಾಗಿತ್ತು. ಆದರೆ, ಇದೀಗ 29ಲಕ್ಷ ಮತ್ತು 24ಲಕ್ಷಕ್ಕೆ ಕುಸಿದಿದೆ. ನನ್ನ ಅವಧಿಯಲ್ಲಿ ಇಒ ಮತ್ತು ಪಿಡಿಒಗಳಿಗೆ ಟಾರ್ಗೆಟ್ ನೀಡಿ ಕೆಲಸ ಮಾಡಿಸುತ್ತಿದ್ದೆ. ಆದರೆ, ಈಗ ಅದು ಸರಿಯಾಗಿ ಆಗುತ್ತಿಲ್ಲ. ನರೇಗಾ ಗುರಿಯನ್ನೇ ಕಡಿಮೆ ನೀಡಲಾಗಿದೆ. ಬೋರ್ವೆಲ್ ರೀಚಾರ್ಜ್ ಪಿಟ್ಸ್, ಸೋಕ್ ಪಿಟ್ಸ್ ಕಾಮಗಾರಿ ಜಾಸ್ತಿ ಮಾಡಿಸಿ. ಇದರಿಂದ ಗುರಿ ಸಾಧನೆ ಹೆಚ್ಚಳವಾಗುತ್ತೆ ಎಂದು ಸಲಹೆ ನೀಡಿದರು.
ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಗೆ 17 ಕಂತುಗಳಲ್ಲಿ ಒಟ್ಟು 361 ಕೋಟಿ ರೂಪಾಯಿ ಹಣ ರೈತರ ಖಾತೆಗೆ ನೇರವಾಗಿ ವರ್ಗಾವಣೆಯಾಗಿದೆ ಎಂದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮೀಣ ಭಾಗದ ಪ್ರತಿ ಮನೆಗೂ ನಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲು 1640 ಗ್ರಾಮಗಳಿಗೆ ಸರ್ಕಾರ 993 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ಯೋಜನೆ ಕೇಂದ್ರ ಸರ್ಕಾರದ ದೂರದೃಷ್ಟಿಯ ಮತ್ತು ಮಹತ್ವದ ಯೋಜನೆಯಾಗಿದೆ. ಆದರೆ, ಜಿಲ್ಲೆಯಲ್ಲಿ ಯೋಜನೆಯ ಕಾಮಗಾರಿ ವೇಗ ತೃಪ್ತಿಕರವಾಗಿಲ್ಲ. ಕಾಮಗಾರಿಯ ವೇಗವನ್ನು ಮತ್ತು ಗುಣಮಟ್ಟವನ್ನು ಹೆಚ್ಚಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಮಾನವ ದಿನಗಳನ್ನು 30 ಲಕ್ಷಕ್ಕೂ ಹೆಚ್ಚಿನ ಮಾನವ ದಿನ ಸೃಜನೆಯಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಕೇಂದ್ರ ಸರ್ಕಾರ ಶಿಕ್ಷಣ, ಆರೋಗ್ಯ ಮುಂತಾದ ಮೂಲಭೂತ ಸೌಕರ್ಯಗಳು ಅಡಿಗೆ ಒತ್ತು ನೀಡುತ್ತಿದೆ. ರೈತರ ಆದಾಯ ದ್ವಿಗುಣಗೊಳ್ಳುವ ನಿಟ್ಟಿನಲ್ಲಿ ಪ್ರಮಾಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದು ಹಾಗೂ ಶಾಶ್ವತವಾದಂತಹ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ದೇಶದಲ್ಲೆ ಚಿಕ್ಕಬಳ್ಲಾಪುರ ಜಿಲ್ಲೆಯನ್ನು ಮಾದರಿಯ ಜಿಲ್ಲೆಯಾಗಿಸಲಾಗುವುದು ಎಂದು ಸಂಸದರು ತಿಳಿಸಿದರು.
ಚಿಕ್ಕಬಳ್ಳಾಪುರ ನಗರದ ವಾರ್ಡ್ ನಂಬರ್ 30ರ (ಶಿಡ್ಲಘಟ್ಟ ರಸ್ತೆ) ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಅಗಲೀಕರಣ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಸಂಬಂಧ ಇರುವ ತೊಡಕುಗಳನ್ನು ರೈಲ್ವೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮತ್ತು ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಇದೇ ತಿಂಗಳ 13 ರಂದು ಸ್ಥಳ ಸಮೀಕ್ಷೆ ನಡೆಸಿ ದಶಕಗಳಿಂದ ಇರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ನಂದಿ ಉಪಚಾರ ಹೋಟೆಲ್ ಬಳಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗಡಿಯವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ 14 ಅಪಘಾತ ವಲಯಗಳನ್ನು ಗುರ್ತಿಸಲಾಗಿದೆ. ಈ ಭಾಗದಲ್ಲಿ ಅಪಘಾತಗಳನ್ನು ತಗ್ಗಿಸಲು ಹಲವು ಯುಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ವಿಸ್ ರಸ್ತೆ ಅಭಿವೃದ್ಧಿ, ಸೂಚನಾ ಫಲಕಗಳ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮವಹಿಸಲಾಗಿದೆ ಎಂದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಜೆಡಿಎಸ್ ಮುಖಂಡನ ಕೊಲೆ
ಸಭೆಯಲ್ಲಿ ಕೋಲಾರ ಸಂಸದ ಮಲ್ಲೇಶ್ ಬಾಬು, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಅಶ್ವಿನ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತಿಕ್ ಪಾಷ, ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ದಿಶಾ ಸಮಿತಿ ಸದಸ್ಯರಾದ ಶಿವಪ್ಪ, ವಿಕಾಸ್, ಎಸ್. ಬಿ ಗಣೇಶ್ ರೆಡ್ಡಿ, ಲಲಿತಮ್ಮ, ಕೆ ನಾಗಭೂಷಣ ರಾವ್, ಮಮತಾ, ಶಿವಕುಮಾರ್, ಬಿ.ವಿ ಕೃಷ್ಣ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.