ಖಾಸಗಿ ಶಾಲಾ ಕಾಲೇಜುಗಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ದಾಖಲಾತಿಗೆ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ದುಬಾರಿ ಶುಲ್ಕ ನಿಯಂತ್ರಣಕ್ಕೆ ಸರ್ಕಾರ ಕೂಡಲೇ ‘ಶುಲ್ಕ ನಿಯಂತ್ರಣ ಪ್ರಾಧಿಕಾರ’ ರಚನೆ ಮಾಡಬೇಕು ಎಂದು ಚಿಕ್ಕಬಳ್ಳಾಪುರ ಎಎಪಿ ಜಿಲ್ಲಾಧ್ಯಕ್ಷ ಭೈರರೆಡ್ಡಿ ಒತ್ತಾಯಿಸಿದರು.
ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. “ಎಸ್‌ಎಸ್‌ಎಲ್ ಮತ್ತು ಪಿಯುಸಿ ಫಲಿತಾಂಶಗಳು ಹೊರಬಿದ್ದಿವೆ. ಶಾಲಾ ಕಾಲೇಜುಗಳಲ್ಲಿ ದಾಖಲಾತಿ ಆರಂಭವಾಗಿದೆ. ಈ ಬಾರಿ ಶೇ.30ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ. ಇದರಿಂದ ಬಡ, ಮಧ್ಯಮ ವರ್ಗದ ಜನರಿಗೆ ಆರ್ಥಿಕ ಸಂಕಷ್ಟ ಶುರುವಾಗಿದೆ. ಸರಕಾರಿ ಶಾಲೆ ಕಾಲೇಜುಗಳಲ್ಲಿ ಸರಿಯಾದ ಮೂಲಭೂತ ಸೌಲಭ್ಯ ಇಲ್ಲದ ಕಾರಣ ಜನರು ಖಾಸಗಿ ಶಾಲಾ ಕಾಲೇಜು ಮೊರೆ ಹೋಗುತ್ತಿದ್ದಾರೆ. ಇದು ನಮ್ಮ ರಾಜ್ಯದ ದುರಂತ” ಎಂದು ಹೇಳಿದರು.
“ರಾಜ್ಯದಲ್ಲಿ ಸಂಸದರು ಹಾಗೂ ಶಾಸಕರು ಸಾಕಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಪ್ರಸ್ತುತ ಶಿಕ್ಷಣ ಉದ್ಯಮವಾಗಿದೆ. ಇದರಿಂದ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆ ಆಗುತ್ತಿಲ್ಲ. ಬಡ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಸರಕಾರ ಕೂಡಲೇ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆ ಮಾಡಬೇಕು” ಎಂದು ಒತ್ತಾಯಿಸಿದರು.
“ಸರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ವಸೂಲಿ ಕ್ರಮಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ದೆಹಲಿ ಮಾದರಿಯಲ್ಲಿ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ವಾರ್ಷಿಕ ಲೆಕ್ಕಪರಿಶೋಧನೆ ನಡೆಸಬೇಕು. ಹಾಗೆಯೇ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಎಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೀಪಕ್ ರಾವ್, ಕಾರ್ಯದರ್ಶಿ ನಾಸಿರ್ ಅಲಿ, ತಾಲೂಕು ಸಂಚಾಲಕರಾದ ಅಬ್ಬಾಸ್, ಅಶೋಕ್ ವಿ, ಸಂಶುದ್ದೀನ್ ಇದ್ದರು.