“ರೈತರೇ, ಯಾವುದೇ ಕಾರಣಕ್ಕೂ ಕೃಷಿ ಭೂಮಿಯನ್ನು ಕೈಗಾರಿಕಾಭಿವೃದ್ಧಿಗೆ ಬಿಟ್ಟು ಕೊಡಬೇಡಿ. ಅದೇನಾಗುತ್ತದೋ ನೋಡಿಯೇ ಬಿಡೋಣ” ಎಂದು ಕರ್ನಾಟಕ ರಾಜ್ಯ ರೈತಸಂಘ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸವಾಲೆಸೆದಿದ್ದಾರೆ.
ಚಿಕ್ಕಬಳ್ಳಾಪುರ ನಗರ ಹೊರವಲಯದ ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ನಡೆಸಿದ ಬೃಹತ್ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, “ನಾನು ರೈತ ಸಂಘದ ಹೋರಾಟಗಾರನಾಗಿದ್ದರೂ ಕೂಡ ಕೈಗಾರಿಕಾ ನೀತಿಯನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದೇನೆ. ಸಿ ಮತ್ತು ಡಿ ವಲಯದ ಭೂಮಿಯನ್ನು ಮಾತ್ರ ಕೈಗಾರಿಕಾಭಿವೃದ್ದಿಗೆ ಬಳಸಬೇಕು ಎಂದು ಅದರಲ್ಲಿ ಸ್ಪಷ್ಟವಾದ ನಿರ್ದೇಶನವಿದೆ. ಯಾವುದೇ ಕಾರಣಕ್ಕೂ ಕೃಷಿಭೂಮಿಯನ್ನು ಬಳಸಬಾರದು ಎಂದಿರುವುದನ್ನು ಕೈಗಾರಿಕಾ ಮಂತ್ರಿಗಳು ಮತ್ತು ಸರಕಾರ ಸಂಪೂರ್ಣವಾಗಿ ಮರೆತಂತೆ ಕಾಣುತ್ತಿದೆ” ಎಂದು ಸರಕಾರದ ವಿರುದ್ಧ ಹರಿಹಾಯ್ದರು.
“ಜಿಲ್ಲೆಯಲ್ಲಿ 6 ಸಾವಿರ ಎಕರೆಯಷ್ಟು ಕೃಷಿಭೂಮಿಯನ್ನು ಕೈಗಾರಿಕಾಭಿವೃದ್ಧಿಗಾಗಿ ಸ್ವಾಧೀನಪಡಿಸಿಕೊಳ್ಳಲು ಸರಕಾರ ಮತ್ತು ಜಿಲ್ಲಾಡಳಿತ ಮುಂದಾಗಿರುವುದು ರೈತ ವಿರೋಧಿ ನಡೆ. ಯಾವುದೇ ಕಾರಣಕ್ಕೂ ಜಂಗಮಕೋಟೆ ನಂದಿ ಹೋಬಳಿಯಲ್ಲಿ ಭೂಮಿ ವಶಪಡಿಸಿಕೊಳ್ಳಲು ಅವಕಾಶ ಮಾಡಿಕೊಡುವುದಿಲ್ಲ” ಎಂದು ಕಿಡಿಕಾರಿದರು.
ರೈತರ ಭೂಮಿ ಮುಟ್ಟುವ ಮುನ್ನ ಭೂಮಿಯನ್ನು ಸರ್ವೆ ಮಾಡಿಸಿ ನಂತರ ಮುಂದುವರೆಯಬೇಕು. ಸಿ ಮತ್ತು ಡಿ ವಲಯದ ಭೂಮಿ ಇಲ್ಲ ಎಂದೇಳಿದರೆ ನಾನೇ ಮುಂದೆ ನಿಂತು ರೈತರ ಭೂಮಿ ಕೊಡಿಸುತ್ತೇನೆ ಎಂದ ಕೋಡಿಹಳ್ಳಿ ಚಂದ್ರಶೇಖರ್, “ರೈತರು 1 ಲೀಟರ್ ಹಾಲಿನ ಉತ್ಪಾದನೆಗೆ ಎಷ್ಟು ಖರ್ಚು ಮಾಡುತ್ತಾರೆ ಎಂಬುದರ ಬಗ್ಗೆ ನ್ಯಾಯಯುತವಾಗಿ ಲೆಕ್ಕ ಹಾಕಬೇಕು. ಈ ಕೆಲಸ ಮಾಡದೆ ಇಳುವರಿ ಹೆಚ್ಚಾಗಿದೆ ಎಂದು ಬೆಲೆ ಇಳಿಸುವುದು ಅವೈಜ್ಞಾನಿಕ. ರೈತರಿಗೆ ಲೀಟರ್ ಮೇಲೆ ಕಡಿತ ಮಾಡಿರುವ 2 ರೂಪಾಯಿ ನೀಡಲೇಬೇಕು. ಜಿಲ್ಲೆಗೆ ಕೃಷ್ಣಾನದಿ ನೀರು ಹರಿಸಲು ಕ್ರಮವಹಿಸಬೇಕು” ಎಂದು ಸರಕಾರಕ್ಕೆ ಆಗ್ರಹಿಸಿದರು.
ಕೈಗಾರಿಕಾಭಿವೃದ್ಧಿ ವಿರೋಧಿಸುವುದಿಲ್ಲ
ಜಿಲ್ಲಾ ಉಸ್ತುವಾರಿ ಮಂತ್ರಿಗಳೇ, ನಾವು ಕೈಗಾರಿಕಾಭಿವೃದ್ಧಿ ವಿರೋಧಿಸುವುದಿಲ್ಲ. ಕೈಗಾರಿಕಾಭಿವೃದ್ದಿಗೆ ಯಾವ ಭೂಮಿ ಬಳಸುತ್ತಾರೆ ಎಂಬುದನ್ನರಿತು ಮುನ್ನಡೆಯಿರಿ. ಇಲ್ಲವಾದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ. ಕೃಷಿ ಭೂಮಿ ಲೋಕದ ಜನರ ಹಸಿವನ್ನು ನೀಗಿಸಲು ಇರುವ ಅಕ್ಷಯ ಪಾತ್ರೆ. ಇದನ್ನು ಬಳಕೆ ಮಾಡಲು ರೈತರಿಗೆ ಮಾತ್ರ ಹಕ್ಕಿದೆಯೇ ವಿನಃ ಸರಕಾರಕ್ಕಾಗಲಿ, ಮಂತ್ರಿಗಳಿಗಾಗಲಿ ಇಲ್ಲ. ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಕೃಷಿ ಭೂಮಿಯನ್ನು ಕೆಐಎಡಿಬಿಗೆ ಬಳಕೆ ಮಾಡಬಾರದು. ಮಾಡುವುದೇ ನಿಜವಾದರೆ ಭೂಮಿಯ ಆಡಿಟ್ ಮಾಡಿಸಿ ವರದಿ ತನ್ನಿ. ಅದು ನ್ಯಾಯಸಮ್ಮತವಾಗಿದ್ದರೆ ನಾವೇ ಮುಂದೆ ನಿಂತು ಭೂಮಿ ಕೊಡಿಸುತ್ತೇವೆ ಎಂದು ಕೋಡಿಹಳ್ಳಿ ಹೇಳಿದರು.
ರೈತರನ್ನು ಒಕ್ಕಲೆಬ್ಬಿಸಬಾರದು
ಅರಣ್ಯ ಭೂಮಿ ಹೆಸರಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ರೈತರಿಂದ ಸಾಗುವಳಿ ಭೂಮಿಯನ್ನು ಕಿತ್ತುಕೊಂಡು ಅವರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಸರಕಾರ ಮತ್ತು ಜಿಲ್ಲಾಡಳಿತ ಸೇರಿ ಮಾಡುತ್ತಿದೆ. ಈ ನಡೆಯು ಕೂಡ ಸುಪ್ರಿಂ ಕೋರ್ಟ್ ನಿರ್ದೇಶನಕ್ಕೆ ವಿರುದ್ಧವಾಗಿದೆ. ಅರಣ್ಯದಂಚಿನಲ್ಲಿ ಯಾರಾದರೂ ರೈತರು 3 ಎಕರೆಯಷ್ಟು ಸಣ್ಣ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ ಅಂತಹ ಭೂಮಿ ಕಿತ್ತುಕೊಳ್ಳಬಾರದು ಎಂದು ಸುಪ್ರಿಂ ಕೋರ್ಟ್ ಹೇಳಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಮಂಗಳೂರಿನಲ್ಲಿ ಉಷ್ಣಸ್ಥಾವರ ಸ್ಥಾಪನೆ ಮಾಡಿ ಅಲ್ಲಿಂದ ಕೇರಳಕ್ಕೆ ವಿದ್ಯುತ್ ನೀಡಲು ಇಲ್ಲಿ ಅರಣ್ಯ ಬೆಳೆಸಬೇಕು ಎನ್ನುವುದು ಮೂರ್ಖತನದ ಪರಮಾವಧಿಯಾಗಿದೆ. ಯಾರಿಗೋ ಲಾಭ ಮಾಡಲು ಇನ್ಯಾರನ್ನೋ ಬಲಿ ಹಾಕುವಂತಿದೆ. ಈ ನೀತಿಯನ್ನು ಸರಕಾರ ಕೂಡಲೇ ಕೈಬಿಡಬೇಕು ಎಂದು ರೈತರು ಒತ್ತಾಯಿಸಿದರು.
ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, “ಶಾಂತಿಯುತವಾಗಿ ಹೋರಾಟ ಮಾಡಲು ಬಂದ ರೈತರನ್ನು ಜಿಲ್ಲಾಡಳಿತ ಭವನಕ್ಕೆ ಬಿಡದಂತೆ ಪೊಲೀಸ್ ಬಲ ಉಪಯೋಗಿಸಿ ತಡೆದಿದ್ದು ತಪ್ಪು. ಜಿಲ್ಲೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಹೆಸರಿದೆ. ದ್ರಾಕ್ಷಿ, ಟೊಮೆಟೋ, ದಾಳಿಂಬೆ, ಗೋಡಂಬಿ ಅಷ್ಟೇ ಬೆಳೆಯದೆ, ವಿದೇಶಿ ಹಣ್ಣು ಹಂಪಲುಗಳಾದ ಕರ್ಜೂರ, ಸೇಬು, ಡ್ರಾಗನ್ ಫ್ರೂಟ್ ಹಣ್ಣುಗಳನ್ನು ಕೂಡ ಬೆಳೆದು ಕೊಡುವ ಜಿಲ್ಲೆ ನಮ್ಮದು. ಇಲ್ಲಿನ ಕೃಷಿ ಭೂಮಿಯಾದ ಅಕ್ಷಯ ಪಾತ್ರೆಗೆ ಕೈ ಹಾಕಿದರೆ ಸರ್ಕಾರ ಬೀಳಿಸುತ್ತೇವೆ ಎಂದು ಗುಡುಗಿದರು.
ರೈತರ ಸಂಘವು ಅಭಿವೃದ್ಧಿಪರ ಯೋಜನೆಗಳಿಗೆ ಎಂದೂ ಕೂಡ ವಿರೋಧವಿಲ್ಲ. ಮೊದಲು ರೈತರ ಕಷ್ಟವನ್ನು ಪರಿಹರಿಸಿ, ಪ್ರೋತ್ಸಾಹದನ ಬಿಡುಗಡೆ ಮಾಡಿ ಎಂದರು. ಹೆಚ್‌ಎನ್ ವ್ಯಾಲಿ ನೀರನ್ನು ಜಿಲ್ಲೆಯಲ್ಲಿ ನಿಗದಿಪಡಿಸಿದ ಎಲ್ಲಾ ಕೆರೆಗಳಿಗೆ ಸಮವಾಗಿ ಹಂಚಿಕೆ ಮಾಡಿ, ಶಿಡ್ಲಘಟ್ಟ ತಾಲೂಕಿನಲ್ಲಿ ಹಿಪ್ಪುನೇರಳೆ ಸೊಪ್ಪಿಗೆ ರೋಗ ಕಾಣಿಸಿಕೊಂಡಿದೆ. ಇದರಿಂದಾಗಿ ರೈತರ ಆದಾಯಕ್ಕೆ ತೊಂದರೆಯಾಗಿ, ಬದುಕು ಮೂರಾಬಟ್ಟೆಯಾಗುತ್ತಿದೆ. ಇದನ್ನು ಪರಿಹರಿಸಲು ಯಾವೊಬ್ಬ ಅಧಿಕಾರಿಯೂ ಕೂಡ ಮುಂದಾಗಿಲ್ಲ ಎಂದು ದೂರಿದರು.
ಬೆಳಗ್ಗೆ 12 ಗಂಟೆಯಿಂದ ಸಂಜೆ 4 ಗಂಟೆವರೆಗೂ ನೂರಾರು ಟ್ರಾಕ್ಟರ್‌ಗಳಲ್ಲಿ ಬಂದಿದ್ದ ರೈತರು ಪ್ರತಿಭಟನೆ ನಡೆಸಿ ಸರಕಾರದ ನಡೆಯ ವಿರುದ್ದ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ರೈತರ ಮನವಿ ಸ್ವೀಕರಿಸಿ, ಸರಕಾರಕ್ಕೆ ಕಳಿಸಿಕೊಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ಸು ಪಡೆಯಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ವೀರಾಪುರ ಮುನಿನಂಜಪ್ಪ, ಮರಳುಕುಂಟೆ ರಾಮಾಂಜನಪ್ಪ, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಚಿಕ್ಕಬಳ್ಳಾಪುರ ತಾಲೂಕು ಕಾರ್ಯದರ್ಶಿ ನೆಲಮಾಕನಹಳ್ಳಿ ಗೋಪಾಲ್, ಚಿಕ್ಕಬಳ್ಳಾಪುರ ತಾಲೂಕು ಉಪಾಧ್ಯಕ್ಷರು ಕೊಳವನಹಳ್ಳಿ ಅಶ್ವತಪ್ಪ, ಶಿಡ್ಲಘಟ್ಟ ತಾಲೂಕು ಪ್ರಧಾನ ಕಾರ್ಯದರ್ಶಿ ಚಿಮಂಗಲ ಬಸವರಾಜ್, ಕಸಬಾ ಹೋಬಳಿ ಅಧ್ಯಕ್ಷ ಕನ್ಮಂಗಲ ನಾಗರಾಜು, ಉಪಾಧ್ಯಕ್ಷ ಬೀರಪ್ಪ, ಹಿತ್ತಲಹಳ್ಳಿ ರಮೇಶ್, ನೆಲಮಾಕನಹಳ್ಳಿ ಗಂಗಾಧರ್, ನಾರಾಯಣಸ್ವಾಮಿ ಭಾಗವಹಿಸಿದ್ದರು.
