ಚುನಾವಣೆಯಲ್ಲಿ ಮತದಾರರಿಗೆ ಲಂಚ ನೀಡಲು ಮನೆಯೊಂದರಲ್ಲಿ ಅಕ್ರಮವಾಗಿ ಹಣ ದಾಸ್ತಾನು ಮಾಡಿದ್ದ ಪ್ರಕರಣದಲ್ಲಿ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು ನಗರದ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮನೆಯೊಂದರಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ 10 ಕೋಟಿ ರೂ. ಹಣ ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದ ಎಫ್.ಎಸ್.ಟಿ ಆದಾಯ ತೆರಿಗೆ ಅಧಿಕಾರಿಗಳ ತಂಡವು 4.8 ಕೋಟಿ ರೂ. ಅಕ್ರಮ ಹಣವನ್ನು ವಶಪಡಿಸಿಕೊಂಡಿದೆ. ನ್ಯಾಯಾಲಯದ ಆದೇಶದ ಮೇರೆಗೆ ಬೆಂಗಳೂರಿನ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದಲ್ಲದೆ ಜಿಲ್ಲಾ ಎಂ.ಸಿ.ಸಿ ನೋಡಲ್ ಅಧಿಕಾರಿ ಮುನೀಶ್ ಮೌಡ್ಗಿಲ್ ಅವರಿಗೆ ಕೆ.ಸುಧಾಕರ್ ಅವರು ವಾಟ್ಸಾಪ್ ಕರೆ ಮಾಡಿದ್ದು, “ps help will be great full to you” ಎಂದು ವಾಟ್ಸಾಪ್ ಸಂದೇಶವನ್ನು ಸಹ ಕಳಿಸಿದ್ದರು. ಈ ಎಲ್ಲಾ ಕಾರಣಗಳಿಗಾಗಿ RP ಕಾಯ್ದೆಯಡಿ ಅನುಚಿತ ಪ್ರಭಾವ, ಲಂಚ, ಭ್ರಷ್ಟಾಚಾರ ಪ್ರಯತ್ನಕ್ಕಾಗಿ ಕಲಂ 171B, 171C, 171E, 171F ಐ.ಪಿ.ಸಿ ಮತ್ತು 123 RP ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
