ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ತಾಲೂಕಿನ ಕನಗಾನಕೊಪ್ಪ ಬಳಿ ನಡೆದ ರೈತನ ಮೇಲಿನ ಗುಂಡೇಟು ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಸಂಸದ ಸುಧಾಕರ್ ವಿರುದ್ಧ ಗುರುವಾರ ಕಾಂಗ್ರೆಸ್ ಕಾರ್ಯಕರ್ತರು ಉಗ್ರ ಪ್ರತಿಭಟನೆ ನಡೆಸಿದ್ದಾರೆ. ಸುಧಾಕರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಹೌದು, ಬುಧವಾರದಂದು ಕಲ್ಲಿನ ಕ್ವಾರಿಗೆ ರಸ್ತೆ ಬಿಡುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಬಿಜೆಪಿ ಮಾಜಿ ಎಂಎಲ್‌ಸಿ ವೈ ಎ ನಾರಾಯಣಸ್ವಾಮಿ ಸೋದರ ಸಂಬಂಧಿ ಸಕಲೇಶ್ ಎಂಬಾತ ತನ್ನ ರೌಡಿ ಪಟಾಲಂನೊಂದಿಗೆ ತೆರಳಿ ಮಂಚೇನಹಳ್ಳಿ ತಾಲೂಕಿನ ಕನಗಾನಕೊಪ್ಪ ಗ್ರಾಮದ ಚಿಕನ್ ರವಿ ಎಂಬಾತನ ಕಾಲಿಗೆ ಗುಂಡು ಹಾರಿಸಿ, ಹಲ್ಲೆ ನಡೆಸಿದ್ದ. ಈ ಮೂಲಕ ಪ್ರತಿಭಟಿಸಿದ ರೈತರನ್ನು ಬೆದರಿಸುವ ಪ್ರಯತ್ನ ನಡೆಸಿದ್ದ.

ಘಟನೆ ನಡೆದ ಬೆನ್ನಲ್ಲೇ ಸಂಸದ ಸುಧಾಕರ್ ಶಾಸಕ ಪ್ರದೀಪ್ ಈಶ್ವರ್ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ತಮ್ಮ ನಾಲಿಗೆ ಹರಿಬಿಟ್ಟಿದ್ದರು. ತೀವ್ರ ವಾಗ್ದಾಳಿ ನಡೆಸಿದ್ದರು.
ವಿಡಿಯೋದಲ್ಲಿ ಮಾತನಾಡಿರುವ ಸಂಸದ ಸುಧಾಕರ್, ಕನಗಾನಕೊಪ್ಪ ಗ್ರಾಮದ ಕ್ರಷರ್‌ಗೆ ಸಂಬಂಧಿಸಿದಂತೆ ಈ ಹಿಂದೆ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ 10 ವರ್ಷಗಳ ಕಾಲ ಅನುಮತಿ ಕೊಟ್ಟಿರಲಿಲ್ಲ. ಇದರಿಂದ ರಾಜಕೀಯವಾಗಿಯೂ ನಷ್ಟ ಅನುಭವಿಸಿದ್ದೆ. ಆದರೆ, ಈಗಿರುವ ಶಾಸಕರು ಗ್ರಾಮಕ್ಕೆ ತೆರಳಿ ಪೊಳ್ಳು ಭರವಸೆ ನೀಡಿ ತಮ್ಮನ್ನೇ ತಾವು ಮಾರಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಆಡಳಿತ ಹಳಿ ತಪ್ಪಿದೆ. 50 ವರ್ಷದಲ್ಲಿ ಇದುವರೆಗೆ ಇಂತಹ ಪ್ರಕರಣ ನಡೆದಿದ್ದೇ ಇಲ್ಲ. ಜಿಲ್ಲಾಡಳಿತ ಹಣಕ್ಕೆ ಮಾರಿಕೊಂಡಿದೆ. ನಿಮ್ಮ ಭ್ರಷ್ಟಾಚಾರದಿಂದ ಭ್ರಷ್ಟರಿಗೆ ದೈರ್ಯ ಬಂದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಸರಕಾರಕ್ಕೆ ಆಗ್ರಹಿಸುತ್ತೇನೆ. ಡಿಸಿಯವರು ಹಣ ಕೊಟ್ಟರೆ ಸಾಕು ಯಾವುದಕ್ಕೆ ಬೇಕಾದರೂ ಸಹಿ ಮಾಡುತ್ತಾರೆ. ಇಂತಹ ಅಧಿಕಾರಿಗಳನ್ನು ತಂದು ಬೆಳೆಸುತ್ತಿದ್ದಾರೆ. ಆಡಳಿತ ಸತ್ತು ಹೋಗಿದೆ ಎಂದೆಲ್ಲಾ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ರಸ್ತೆ ವಿಚಾರಕ್ಕೆ ಗಲಾಟೆ; ಕ್ರಷರ್ ಮಾಲೀಕನಿಂದ ವ್ಯಕ್ತಿ ಕಾಲಿಗೆ ಗುಂಡೇಟು
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಕ್ರಷರ್‌ಗೆ ಯಾರ ಕಾಲದಲ್ಲಿ ಪರವಾನಗಿ ನೀಡಲಾಗಿದೆ, ಯಾರ ಹೆಸರಲ್ಲಿದೆ ಎಂಬೆಲ್ಲಾ ಮಾಹಿತಿಯುಳ್ಳ ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಮೂಲಕ ಸುಧಾಕರ್‌ಗೆ ಟಾಂಗ್ ಕೊಟ್ಟಿದ್ದರು. ಪೋಸ್ಟರ್‌ನಲ್ಲಿ ಕ್ರಷರ್ ಲೀಸ್ ಪಡೆದಿರುವವರ ಹೆಸರು ಉಷಾ ನಂದಿನಿ ಬಿ ಎನ್, ಅನುಮತಿ ಪಡೆದ ವರ್ಷ 26-10-2021, 20 ವರ್ಷ ಅವಧಿ, ಬುಲ್ಡಿಂಗ್ ಸ್ಟೋನ್ ಎಂಬ ಇಲಾಖೆಯ ಶಿರೋನಾಮೆ ಹೊಂದಿರುವ ಪ್ರತಿಯನ್ನು ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು. ಈ ಮೂಲಕ ಕ್ರಷರ್ ಮಾಲೀಕರು ಬಿಜೆಪಿಯವರು, ಕ್ರಷರ್‌ಗೆ ಅನುಮತಿ ಕೊಟ್ಟವರು ಬಿಜೆಪಿಯವರು ಮತ್ತು ಗುಂಡು ಹೊಡೆದಿರುವ ವ್ಯಕ್ತಿ ಬಿಜೆಪಿಯವನು ಎಂಬಿತ್ಯಾದಿ ಮಾಹಿತಿಯನ್ನು ರವಾನಿಸಿದ್ದರು.
ಇದಾದ ಬಳಿಕ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ರೈತರ ಮೇಲೆ ಗುಂಡು ಹಾರಿಸಿರುವ ಸಕಲೇಶ್ ಎಂಬಾತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ಅವರಿಗೆ ಮನವಿ ಸಲ್ಲಿಸಿದರು. ರೈತ ಸಂಘಗಳಿಂದಲೂ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.
ಏಕವಚನದಲ್ಲೇ ವಾಗ್ದಾಳಿ :
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಸಂಸದರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಸುಧಾಕರ್ ನಿನಗೆ ತಾಕತ್ತಿದ್ದರೆ, ಬಹಿರಂಗ ಚರ್ಚೆಗೆ ಬಾ. ನೀನು ಮತ್ತು ನಿನ್ನ ಪಟಾಲಂ ಮಂಪರು ಪರೀಕ್ಷೆಗೆ ಬನ್ನಿ. ಸುಧಾಕರನ ಚಂಡಾಲ ಶಿಷ್ಯ ನಾರಾಯಣಸ್ವಾಮಿ, ನಾರಾಯಣಸ್ವಾಮಿಯ ಅಕ್ರಮ ಸಂತಾನ ಸಕಲೇಶ್. ಸಕಲೇಶನ ಮೇಲೆ ಈಗಾಗಲೇ ಎರಡು ಪ್ರಕರಣಗಳಿವೆ. ಆವಲಗುರ್ಕಿಯಲ್ಲಿ ಅಕ್ರಮವಾಗಿ 30 ಎಕರೆ ಜಮೀನು ಮಾಡಿದ್ದಾನೆ. ಈತನ ವಿರುದ್ಧ ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಮ್ಮ ಶಾಸಕರ ವಿರುದ್ಧ ಮಾತನಾಡುವ ಮುನ್ನ 2021ರಲ್ಲಿ ನಿಮ್ಮದೇ ಸರಕಾರ ಇತ್ತು. ಆಗ ಅನುಮತಿ ಕೊಟ್ಟಿರುವುದು ನೀವೇ. ಇದೆಲ್ಲವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಬೇಡಿ. ಶಾಸಕರ ಮೇಲೆ ವಿನಾಕಾರಣ ಗೂಬೆ ಕೂರಿಸಲು ಬಂದರೆ ಯುವ ಕಾಂಗ್ರೆಸ್ ತಕ್ಕ ಉತ್ತರ ಕೊಡಲಿದೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ, ಸಕಲೇಶ್ ಸೇರಿದಂತೆ ಒಟ್ಟು 5 ಜನರನ್ನು ಈಗಾಗಲೇ ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ. ಕ್ರಷರ್‌ಗೆ ನಿರ್ಮಿಸಿದ್ದ ದಾರಿಯನ್ನು ಬಂದ್ ಮಾಡಲಾಗಿದೆ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು.