ಪಶ್ಚಿಮ ಬಂಗಾಳದ ಸರ್ಕಾರಿ ಆರ್.ಜಿ.ಕಾರ್ ವೈದ್ಯಕೀಯ ಕಾಲೇಜಿನಲ್ಲಿ ಆಗಸ್ಟ್ 9 ರಂದು ನಡೆದಿರುವ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಚಿಕ್ಕಬಳ್ಳಾಪುರ ನಗರ ಸೇರಿದಂತೆ ತಾಲ್ಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಆಸ್ಪತ್ರೆಗಳನ್ನು ಬಂದ್ ಮಾಡುವ ಮೂಲಕ ಬೀದಿಗಿಳಿದು ಪ್ರತಿಭಟನಾ ರ್ಯಾಲಿ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಕಿಡಿಗೇಡಿಗಳ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು.
ಆಸ್ಪತ್ರೆಗಳಲ್ಲಿ ಮಹಿಳಾ ವೈದ್ಯರಿಗೆ ಸೂಕ್ತ ಭದ್ರತೆ ಇಲ್ಲವಾಗಿದೆ. ವೈದ್ಯರ ಮೇಲೆ ಅತ್ಯಾಚಾರ, ಹಲ್ಲೆಗಳಂತ ದುಷ್ಕೃತ್ಯಗಳು ನಡೆಯುತ್ತಿರುವುದು ನಿಜಕ್ಕೂ ಅಕ್ಷಮ್ಯ. ಸರಕಾರ ಮಹಿಳಾ ವೈದ್ಯರು ಸೇರಿದಂತೆ ಎಲ್ಲಾ ವೈದ್ಯರಿಗೂ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ. ಜೀವ ಉಳಿಸುವ ವೈದ್ಯರಿಗೇ ಸೂಕ್ತ ಭದ್ರತೆಯಿಲ್ಲದಿರುವುದು ನಮ್ಮೆಲ್ಲರಾ ದುರ್ದೈವವೇ ಸರಿ ಎಂದು ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಆಗ್ರಹಿಸಿದರು.
ಚಿಂತಾಮಣಿ ತಾಲೂಕು ಆಸ್ಪತ್ರೆ ವೈದ್ಯರಾದ ಡಾ.ಮಹಬೂಬ್ ಪಾಷಾ, ಡಾ.ಜಯಂತಿ, ಡಾ.ಯಾಸ್ಮಿನ್ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲೇ ವೈದ್ಯಕೀಯ ವಿದ್ಯಾರ್ಥಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಹೇಯಕೃತ್ಯ. ಜತೆಗೆ ಸಾಕ್ಷ್ಯವನ್ನು ನಾಶಪಡಿಸಲು ಕಿಡಿಗೇಡಿಗಳು ಆಸ್ಪತ್ರೆಯ ಆವರಣಕ್ಕೆ ನುಗ್ಗಿ ಆಸ್ಪತ್ರೆಯ ಕಟ್ಟಡ, ತುರ್ತು ವಿಭಾಗ, ಶುಶ್ರೂಷೆ ಕೇಂದ್ರ, ವೈದ್ಯಕೀಯ ಯಂತ್ರೋಪಕರಣ, ಪೀಠೋಪಕರಣ, ಔಷಧ ಕೇಂದ್ರ, ಹೊರರೋಗಿ ವಿಭಾಗ ಹಾಗೂ ಇತರೆ ವೈದ್ಯಕೀಯ ಸಲಕರಣೆಗಳನ್ನು ಧ್ವಂಸಗೊಳಿಸಿದ್ದಾರೆ ಇದು ಅಲ್ಲಿನ ಸರಕಾರದ ವೈಫಲ್ಯ ಎಂದು ಕಿಡಿಕಾರಿದರು.
ಯಾರೋ ಒಬ್ಬರು ಮಾಡಿರುವ ಕೃತ್ಯವಲ್ಲ. ಇದೊಂದು ಪೂರ್ವನಿಯೋಜಿತ ಕೃತ್ಯ. ಕೃತ್ಯ ಎಸಗಿರುವ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಇಂದು ಖಾಸಗಿ ಆಸ್ಪತ್ರೆ, ಆಯುರ್ವೇದ, ದಂತವೈದ್ಯಕೀಯ, ಕ್ಲಿನಿಕ್, ಒಪಿಡಿ ಲ್ಯಾಬ್ ಸೇವೆಗಳನ್ನು ಬಂದ್ ಮಾಡಲಾಗಿದೆ. ಆದರೆ ಅಪಘಾತ ಅಥವಾ ತುರ್ತು ಚಿಕಿತ್ಸೆ ಸಂದರ್ಭಗಳಿಗಾಗಿ ಕೆಲವು ಆಸ್ಪತ್ರೆಗಳು ತೆರೆದಿವೆ. ವೈದ್ಯರು ಮತ್ತು ಕ್ಲಿನಿಕ್ ಗಳ ಮೇಲೆ ಹಿಂಸಾಚಾರ ಮತ್ತು ದುಷ್ಕೃತ್ಯಗಳನ್ನು ನಡೆಸುವವರಿಗೆ ಕಠಿಣ ಶಿಕ್ಷೆ ನೀಡುವ ಕಾನೂನು ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ಕೋಲ್ಕತ್ತಾ ಘಟನೆ ಖಂಡಿಸಿ ಖಾಸಗಿ ಆಸ್ಪತ್ರೆ, ಕ್ಲೀನಿಕ್‌ಗಳು ಇಂದು ಬಂದ್
ಪ್ರತಿಭಟನೆಯಲ್ಲಿ ಡಾ.ಅಫ್ತಾಬ್ ಬೇಗ್, ಡಾ.ಆಸಾದುಲ್ಲ ಬೇಗ್, ಡಾ.ಯಲ್ಲಪ್ಪ ಗೌಡ, ಡಾ.ವಾಣಿ ರೆಡ್ಡಿ, ಡಾ.ಮುನಿ ವೆಂಕಟರೆಡ್ಡಿ. ಡಾ.ದಕ್ಷಿಣೆ, ಡಾ.ಸಂತೋಷ್ ಕುಮಾರ್ ಸೇರಿದಂತೆ ಇತರೆ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.