- ಶಿಡ್ಲಘಟ್ಟ ವೃತ್ತದಲ್ಲಿ ಸಿಎಂ ರಾಜೀನಾಮೆಗೆ ಆಗ್ರಹಿಸಿ ಆಯೋಜಿಸಿದ್ದ ಪ್ರತಿಭಟನೆ
- ದಾರಿಯಲ್ಲಿ ಸಾಗುತ್ತಿದ್ದ ರೈತನ ಎಮ್ಮೆ ಎಳೆದು ತಂದ ಬಿಜೆಪಿ ಕಾರ್ಯಕರ್ತರು
ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲಿ ಸಾಗುತ್ತಿದ್ದ ರೈತನ ಎಮ್ಮೆಯನ್ನು ಹಿಡಿದು ಎಳೆತಂದು ಪುಂಡಾಟ ಪ್ರದರ್ಶಿಸಿದ ಘಟನೆ ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಂಡುಬಂತು.
ಸಿಎಂ ರಾಜೀನಾಮೆಗೆ ಆಗ್ರಹಿಸಿ ಶಿಡ್ಲಘಟ್ಟದಲ್ಲಿ 11 ಗಂಟೆಗೆ ನಿಗದಿಯಾಗಿದ್ದ ಪ್ರತಿಭಟನೆ 11.30ರ ಸುಮಾರಿಗೆ ಆರಂಭವಾಯಿತು. ಮೊದಲಿಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಬ್ಯಾನರ್ ಹಾಗೂ ಪೋಸ್ಟರ್‌ಗಳನ್ನು ಹಿಡಿದು ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು, ಪ್ರತಿಭಟನೆಯ ವೇಳೆ ಅದೇ ಮಾರ್ಗವಾಗಿ ಸಾಗುತ್ತಿದ್ದ ರೈತನೋರ್ವನ ಎಮ್ಮೆಯನ್ನು ಬಲವಂತವಾಗಿ ಎಳೆದುತಂದು ಪ್ರತಿಭಟನೆ ನಡೆಸಿ, ಪೋಟೋಗೆ ಪೋಸ್ ನೀಡಿದರು.
ಬಿಜೆಪಿ ಕಾರ್ಯಕರ್ತರ ದಿಢೀರ್ ಪುಂಡಾಟದಿಂದ ಬೆಚ್ಚಿಬಿದ್ದ ರೈತ ಎಷ್ಟೇ ಗೋಗರೆದರೂ ಮೊದಲು ಬಿಡಲಿಲ್ಲ. ಬಳಿಕ ಬಿಜೆಪಿಗರ ಕೈಯಿಂದ ಬಿಡಿಸಿ ಹೇಗೋ ತಪ್ಪಿಸಿಕೊಂಡು ಹೋಗಿದ್ದಾನೆ.

ಬಳಿಕ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಬಿಜೆಪಿ ಕಾರ್ಯಕರ್ತರು ಕೆಲಕಾಲ ಕಾಂಗ್ರೆಸ್ ಸರಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು. ಲುಚ್ಚ ಸಿದ್ದರಾಮಯ್ಯ, 420 ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು ಎಂದೂ ಸಹ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ರಾಜ್ಯ ಕಂಡ ಅತ್ಯಂತ ಭಂಡ ಮುಖ್ಯಮಂತ್ರಿ ಎಂಬ ಕುಖ್ಯಾತಿಗೆ ಒಳಗಾಗಿರುವ ಸಿದ್ಧರಾಮಯ್ಯ ಅವರಿಗೆ ನೈತಿಕತೆಯಿದ್ದರೆ ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ, ತನಿಖೆ ಎದುರಿಸಬೇಕು ಎಂದು ಆಗ್ರಹಿಸಿದರು.
ಮುಡಾ ಹಗರಣ 5 ಸಾವಿರ ಕೋಟಿಗೂ ಅಧಿಕ ಮೊತ್ತದ ಹಗರಣವಾಗಿದ್ದು, ಇದರ ಬಗ್ಗೆ ರಾಜ್ಯಪಾಲರು ತೆಗೆದುಕೊಂಡ ಕ್ರಮ ಸಂವಿಧಾನಬದ್ಧವಾಗಿದೆ. ಮುಖ್ಯಮಂತ್ರಿಗಳು ತನಿಖೆ ಎದುರಿಸಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ನೀಡಿರುವ ತೀರ್ಪನ್ನು ಸ್ವಾಗತಿಸಿರುವ ಬಿಜೆಪಿಯು, ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸುತ್ತಿದೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯದ ಉದ್ದಗಲಕ್ಕೂ ಏಕಕಾಲಕ್ಕೆ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಇದೇ ವಿಚಾರದಲ್ಲಿ ಮೈಸೂರು ಚಲೋ ಹಮ್ಮಿಕೊಂಡು ರಾಜೀನಾಮೆಗೆ ಆಗ್ರಹಿಸಿದ್ದೆವು. ಆಗಲೂ ಕೂಡ ನಾನು ಸ್ವಚ್ಛ ಪಾರದರ್ಶಕ ಆಡಳಿತ ನೀಡಿದ ಮುಖ್ಯಮಂತ್ರಿ ಎಂದು ಬೊಗಳೆ ಬಿಡುವ ಸಿದ್ಧರಾಮಯ್ಯ ಅವರು ರಾಜೀನಾಮೆ ನೀಡುವ ಬದಲು ಅಧಿಕಾರಕ್ಕೆ ಅಂಟಿಕೊಂಡು ಕೂತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕುಟುಕಿದರು.

ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು. ಎಲ್ಲರಿಗೂ ಒಂದೇ ನ್ಯಾಯ. ಸಿಎಂ ಸಿದ್ದರಾಮಯ್ಯ ಅವರು ತಪ್ಪು ಮಾಡಿಲ್ಲ ಎಂದಾದರೆ ತನಿಖೆ ಎದುರಿಸಲಿ. ರಾಜ್ಯಪಾಲರ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದಾದರೂ ಯಾಕೆ?. ಏನೇ ಅಗಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಗುಡುಗಿದರು.
ಬಿಜೆಪಿ ಮುಖಂಡ ಸೀಕಲ್ ಆನಂದ್ ಗೌಡ ಮಾತನಾಡಿ, ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಸಿದ್ಧರಾಮಯ್ಯ ಅವರು ಧೀಮಂತ ನಾಯಕರಾಗಿದ್ದರೆ ಹೈಕೋರ್ಟಿನ ತೀರ್ಪಿಗೆ ತಲೆಬಾಗಿ ರಾಜೀನಾಮೆ ನೀಡಬೇಕು. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಭಂಡತನ ಪ್ರದರ್ಶನ ಮಾಡುವುದು ತಪ್ಪು. ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿ ಆಗಿರುವ ನಿಮಗೆ ಇದು ಶೋಭೆ ತರುವುದಿಲ್ಲ ಎಂದು ಆಕ್ರೋಶಗೊಂಡರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಂಡೇನಹಳ್ಳಿ ಮುರುಳಿ ಮಾತನಾಡಿ, ಬಿಜೆಪಿ ಪಕ್ಷವನ್ನು ಶೇ.40 ಪರ್ಸೆಂಟ್ ಸರಕಾರ ಎಂದು ಮೂದಲಿಸುತ್ತಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಎರಡನೇ ಅವಧಿಯ ಸರಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದಕ್ಕೆ ವಾಲ್ಮೀಕಿ ಹಗರಣ, ಮುಡಾ ಹಗರಣವೇ ಸಾಕ್ಷಿ. ರಾಜ್ಯಪಾಲರ ಆದೇಶ ಧಿಕ್ಕರಿಸಿ ಹೈಕೋರ್ಟಿಗೆ ದೂರು ನೀಡಿದ್ದರು. ಹೈಕೋರ್ಟ್ ಕೂಡ ರಾಜ್ಯಪಾಲರ ಆದೇಶ ಸರಿ ಎಂದು ಇವರ ಅರ್ಜಿ ವಜಾಗೊಳಿಸಿದೆ. ನೀವು ಸತ್ಯಹರೀಶ್ಚಂದ್ರ ಆಗಿದ್ದರೆ ತನಿಖೆಗೆ ಭಯಪಡುತ್ತಿರುವುದಾದರೂ ಯಾಕೆ? ಎಂದು ಪ್ರಶ್ನಿಸಿದರು.
ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ಮುಖಂಡ ಎಸ್‌ಆರ್‌ಎಸ್ ದೇವರಾಜ್ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ಸರಕಾರ ಎಮ್ಮೆ ಚರ್ಮದ ಸರಕಾರವಾಗಿದೆ. ಇವರಿಗೆ ಜನಸಾಮಾನ್ಯರ ಕೂಗಾಗಲಿ, ವಿರೋಧ ಪಕ್ಷಗಳ ಆಗ್ರಹವಾಗಲಿ, ರಾಜ್ಯಪಾಲರು, ಹೈಕೋರ್ಟಿನ ನಿರ್ದೇಶನವಾಗಲಿ ಬೇಗನೆ ಅರ್ಥವಾಗುವುದಿಲ್ಲ. ಬೀದಿಗಿಳಿದು ಹೋರಾಟ ಮಾಡಿ ಎಚ್ಚರಿಕೆ ನೀಡುತ್ತಿದ್ದರೂ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿಕೆ ನೀಡುವುದು ಸರಿಯಲ್ಲ. ಇವರು ಇನ್ನೆಷ್ಟು ದಿನ ಅಧಿಕಾರಕ್ಕೆ ಅಂಟಿಕೊಂಡು ಕೂರುತ್ತಾರೋ ನಾವು ನೋಡಿಯೇ ಬಿಡುತ್ತೇವೆ. ಇಂದಲ್ಲ ನಾಳೆ ರಾಜೀನಾಮೆ ಕೊಡುವುದು ಅನಿವಾರ್ಯ ಎಂಬ ಸತ್ಯವನ್ನು ಮನಗಂಡು ಕೂಡಲೇ ರಾಜೀನಾಮೆ ನೀಡಿ ಮರ್ಯಾದೆ ಉಳಿಸಿಕೊಳ್ಳಿ ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಭಾವಚಿತ್ರವುಳ್ಳ ಪೋಸ್ಟರ್ ಸುಟ್ಟು ಪ್ರತಿಭಟನೆ :
ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಭಾವಚಿತ್ರವುಳ್ಳ ಪೋಸ್ಟರ್‌ಗಳನ್ನು ದಹಿಸಿ ಧಿಕ್ಕಾರ ಕೂಗಿದರು. ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿದರು.

ಪೊಲೀಸರೊಂದಿಗೆ ವಾಗ್ವಾದ :
ನಿಗದಿತ ಸಮಯಕ್ಕೆ ಪ್ರತಿಭಟನೆ ಮುಗಿಸದ ಹಿನ್ನೆಲೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆಯಿತು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಬಿಜೆಪಿ ಕಾರ್ಯಕರ್ತರು ಪಟ್ಟುಹಿಡಿದ ನಂತರ ಪೊಲೀಸರು ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟರು.

ಸಂಸದ ಡಾ.ಕೆ.ಸುಧಾಕರ್ ಗೈರು :
ಚಿಕ್ಕಬಳ್ಳಾಪುರದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಘಟಕ ಕಾಂಗ್ರೆಸ್ ಸರಕಾರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಂಸದ ಕೆ.ಸುಧಾಕರ್ ಗೈರಾಗಿದ್ದರು. ಕೇವಲ 50-60 ಮಂದಿ ಕಾರ್ಯಕರ್ತರು ಮಾತ್ರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಪ್ರತಿಭಟನೆಯಲ್ಲಿ ಹೆಚ್.ಎಸ್ ಮುರಳೀಧರ್, ಮಧು ಸೂರ್ಯನಾರಾಯಣ್, ಮರಳುಕುಂಟೆ ಕೃಷ್ಣಮೂರ್ತಿ, ಸುರೇಂದ್ರಗೌಡ, ಲಕ್ಷ್ಮೀ ನಾರಾಯಣಗುಪ್ತ, ಲಕ್ಷ್ಮೀಪತಿ, ಜಿಲ್ಲಾ ಕಾರ್ಯದರ್ಶೀ ಅಶೋಕ್, ಚಿಕ್ಕಬಳ್ಳಾಪುರ ಗ್ರಾಮಾಂತರ ಮಂಡಳಾಧ್ಯಕ್ಷ ಸಂತೋಷ್, ಕಾರ್ಯದರ್ಶಿ ರಾಮಕೃಷ್ಣ, ರಾಜ್ಯಕಾರ್ಯಕರಣಿ ಸದಸ್ಯೆ ನಿರ್ಮಲ, ಬೈರೇಗೌಡ, ರಾಮಣ್ಣ, ಬಾಲಕೃಷ್ಣ ಮತ್ತಿತರರು ಇದ್ದರು.