ಶಾಲೆಯ ಆವರಣದಲ್ಲಿ ಹಾಕಿದ್ದ ಪೆಂಡಾಲ್ ಗಾಳಿಗೆ ಹಾರಿ, ವಿದ್ಯುತ್ ತಂತಿಗೆ ತಗುಲಿದ್ದು, ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ. ಘಟನೆಯಲ್ಲಿ 18 ಮಂದಿಗೆ ಸುಟ್ಟ ಗಾಯಗಳಾಗಿವೆ.
ಗೌರಿಬಿದನೂರಿನ ಶ್ರೀರಾಮಕೃಷ್ಣ ಶಾರದಾದೇವಿ ವಿದ್ಯಾ ಮಂದಿರದಲ್ಲಿ ಶನಿವಾರ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕ್ರೀಡಾಕೂಟ ನೋಡಲು ಹಲವಾರು ಪೋಷಕರು ಮತ್ತು ವಿದ್ಯಾರ್ಥಿಗಳು ಪೆಂಡಾಲ್ ಕೆಳಗೆ ಜಾಮಾಯಿಸಿದ್ದರು. ಮಧ್ಯಾಹ್ನದ ವೇಳೆ, ರಭಸವಾಗಿ ಗಾಳಿ ಬೀಸಿದ್ದು, ಶಾಲಾ ಆವರಣದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ಪೆಂಡಾಲ್ ತಗುಲಿದೆ. ಪೆಂಡಾಲ್ ಹಿಡಿಯಲು ಧಾವಿಸಿದವರಿಗೆ ವಿದ್ಯುತ್ ಸ್ಪರ್ಶವಾಗಿದೆ.
ಘಟನೆಯಲ್ಲಿ ಮಧುಗಿರಿ ತಾಲೂಕಿನ ನಾಗೇನಹಳ್ಳಿ ಗ್ರಾಮದ ನಿವಾಸಿ ರಾಘವೇಂದ್ರ (45) ಎಂಬುವರು ಸಾವನ್ನಪ್ಪಿದ್ದಾರೆ. 18 ಮಂದಿ ಗಾಯಗೊಂಡಿದ್ದು, ಅವರಿಲ್ಲಿ ಇಬ್ಬರು ಮಕ್ಕಳು, ಮೂವರು ಪೋಷಕರು ಮತ್ತು ಐವರು ಶಿಕ್ಷಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಅಪಾಯದಿಂದ ಪಾರಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಶಿಕ್ಷಕರಲ್ಲಿ ತಹಶೀನ್ (25) ಎಂಬವರ ಸ್ಥಿತಿ ಗಂಭೀರವಾಗಿದೆ. ಇತರರು ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳೊಂದಿಗೆ ಮಾತನಾಡಿರುವ ಇಂಧನ ಸಚಿವ ಕೆ.ಜೆ ಜಾರ್ಜ್, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.