ಚಿಕ್ಕಬಳ್ಳಾಪುರ ಜಿಲ್ಲೆಯ ನೀರು ಕುಡಿಯಲು ಯೋಗ್ಯವಲ್ಲ ಎಂದು ಈಗಾಗಲೇ ಸಾಕಷ್ಟು ಅಧ್ಯಯನ ವರದಿಗಳು ಹೇಳಿವೆ. ಇದರ ನಡುವೆ ಇತ್ತೀಚೆಗಷ್ಟೇ ನಡೆದ ಅಧ್ಯಯನ ವರದಿಯೊಂದು ಜಿಲ್ಲೆಯ ಅಂತರ್ಜಲ ವಿಷಪೂರಿತವಾಗುತ್ತಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಸಾರ್ವಜನಿಕರಿಗೆ ಗುಣಮಟ್ಟದ ನೀರು ಪೂರೈಸುವ ಮೂಲಭೂತ ಕರ್ತವ್ಯವನ್ನು ಆಡಳಿತ ಸರಕಾರಗಳು, ಜನಪ್ರತಿನಿಧಿಗಳು ಮರೆತಂತೆ ಕಾಣುತ್ತಿದ್ದು, ಜಾಣಮೌನ ಪ್ರದರ್ಶಿಸುತ್ತಿರುವುದು ಜಿಲ್ಲೆಯ ಮತದಾರರ ದುರ್ದೈವವೇ ಸರಿ.
ಹೌದು, ಭಾರತೀಯ ಮಾನದಂಡಗಳ ಸಂಸ್ಥೆಯು (ಬಿ ಐ ಎಸ್) ಚಿಕ್ಕಬಳ್ಳಾಪುರ ನಗರ ಸೇರಿದಂತೆ ಗ್ರಾಮೀಣ ಭಾಗದ ಹಲವೆಡೆ ಕೊಳವೆ ಬಾವಿ, ತೆರೆದ ಬಾವಿ, ಕೈಪಂಪ್‌ಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿ 2021ರ ನವೆಂಬರ್ – ಡಿಸೆಂಬರ್ ತಿಂಗಳಲ್ಲಿ ಅಧ್ಯಯನ ನಡೆಸಿದ್ದು, ಜಿಲ್ಲೆಯ ಅಂತರ್ಜಲದಲ್ಲಿ ಕ್ಯಾನ್ಸರ್‌ನಂತ ಮಾರಕ ರೋಗ, ರುಜಿನಗಳಿಗೆ ಕಾರಣವಾಗುವ ವಿಷಕಾರಿ ಅಂಶಗಳು ದೊಡ್ಡಪ್ರಮಾಣದಲ್ಲಿ ಇರುವುದನ್ನು ಗುರುತಿಸಿದೆ.
ಬಿ ಐ ಎಸ್ ಸಂಸ್ಥೆಯು ಚಿಕ್ಕಬಳ್ಳಾಪುರ ನಗರದಲ್ಲಿ 41 ಹಾಗೂ ಗ್ರಾಮೀಣ ಭಾಗದಲ್ಲಿ 112 ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದು, ಅದರಲ್ಲಿ ನೈಟ್ರೇಟ್, ಫ್ಲೋರೈಡ್ ಹಾಗೂ ಯುರೇನಿಯಮ್‌ನಂತ ವಿಷಯುಕ್ತ ಅಂಶಗಳನ್ನು ಪತ್ತೆಹಚ್ಚಿದೆ. ಬಿ ಐ ಎಸ್ ಪ್ರಕಾರ ಒಂದು ಲೀಟರ್ ನೀರಿನಲ್ಲಿ 45 ಎಂಜಿ ನೈಟ್ರೇಟ್ ಸಾಂದ್ರತೆ ಹಾಗೂ 1 ಎಂಜಿ ಫ್ಲೋರೈಡ್ ಸಾಂದ್ರತೆ ಹೊಂದಿರಬೇಕು. ಆದರೆ, ಚಿಕ್ಕಬಳ್ಳಾಪುರ ಗ್ರಾಮೀಣ ಭಾಗದ ನೀರಿನ ಮಾದರಿಗಳಲ್ಲಿ ಶೇ.17ರಷ್ಟು ನೈಟ್ರೇಟ್ ಅಂಶ ಹೆಚ್ಚಾಗಿದೆ. ಜತೆಗೆ ನಗರ ಪ್ರದೇಶದ ನೀರಿನಲ್ಲಿ 41ರಷ್ಟು ಮತ್ತು ಗ್ರಾಮೀಣ ಭಾಗದ ನೀರಿನಲ್ಲಿ 40ರಷ್ಟು ಫ್ಲೋರೈಡ್‌ನ ಪ್ರಮಾಣವೂ ಹೆಚ್ಚಿದ್ದು, ಇದರಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಅಧ್ಯಯನ ನಡೆಸಿದ ಭಾಗಗಳಲ್ಲಿನ ಮುಂದಿನ ತಲೆಮಾರು ಹೆಚ್ಚು ಆರೋಗ್ಯ ಸಮಸ್ಯೆಗೆ ಗುರಿಯಾಗಲಿದೆ ಎಂದು ವರದಿ ಹೇಳಿದೆ.
ನೀರಿನಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಿರುವುದರಿಂದ ದಂತ, ನ್ಯೂರೋಟಾಕ್ಸಿಕ್ ಮತ್ತು ಅಸ್ಥಿಪಂಜರಗಳ ಫ್ಲೋರೋಸಿಸ್ ಸಮಸ್ಯೆಗೆ ಕಾರಣವಾಗುತ್ತದೆ. ನೈಟ್ರೇಟ್ ಪ್ರಮಾಣ ಅಧಿಕವಾದರೆ ಚಿಕ್ಕಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದ್ದು, ಮೆಥೆಮೊಗ್ಲೋಬಿನೆಮಿಯಾ ಕಾಯಿಲೆಗೆ ಕಾರಣವಾಗುತ್ತದೆ. ಇದು ಕ್ಯಾನ್ಸರ್‌ನ ಅಪಾಯ ಹೆಚ್ಚು ಎಂದು ವರದಿಯಲ್ಲಿ ತಿಳಿಸಲಾಗಿದೆ.

ನಗರದ ವಿವಿಧ ವಾರ್ಡ್‌ಗಳಲ್ಲೂ ಫ್ಲೋರೈಡ್‌ಯುಕ್ತ ನೀರು
ಚಿಕ್ಕಬಳ್ಳಾಪುರ ನಗರದ ವಾರ್ಡ್ ನಂಬರ್ 8, 10, 18, 19, 20, 22, 23, 25, 27, 28, 29, 30, 31ನೇ ವಾರ್ಡ್‌ಗಳಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಿರುವುದು ವರದಿಯಿಂದ ಬಹಿರಂಗವಾಗಿದೆ.
ಫ್ಲೋರೈಡ್ ಹೆಚ್ಚಿರುವ ಹಳ್ಳಿಗಳು
ಜಡಿಗೇನಹಳ್ಳಿ, ಗುಂತಪ್ಪನಹಳ್ಳಿ, ಅಗಲಗುರ್ಕಿ, ಜಡಲಾತಿಮ್ಮನಹಳ್ಳಿ, ದೊಡ್ಡಗಾನಹಳ್ಳಿ, ಯಲುವಳ್ಳಿ, ಕುಪ್ಪಹಳ್ಳಿ, ಮುಷ್ಟೂರು, ಅರಸನಹಳ್ಳಿ, ತಿರ್ನಹಳ್ಳಿ, ಚಿಕ್ಕಪ್ಯಾಲಗುರ್ಕಿ, ಕೋಡೂರು, ಲಿಂಗಶೆಟ್ಟಿಪುರ, ರಾಮಚಂದ್ರ ಹೊಸೂರು, ಲಕ್ಕಿನಾಯಕನಹಳ್ಳಿ, ಹೊನ್ನಪ್ಪನಹಳ್ಳಿ, ದೊಡ್ಡತಮ್ಮನಹಳ್ಳಿ, ಮಂಚನಬೆಲೆ, ಕಮ್ಮಗುಟ್ಟಹಳ್ಳಿ, ಬೊಮ್ಮನಹಳ್ಳಿ, ಪಾತೂರು, ದಾಸೇನಹಳ್ಳಿ, ಮರವೇನಹಳ್ಳಿ, ರೆಡ್ಡಿಹಳ್ಳಿ, ಕೆರೆನಹಳ್ಳಿ, ಕಾಚಕಡತ, ಗುಂಡ್ಲಮಂಡಿಕಲ್, ನವಿಲುಗುರ್ಕಿ, ಜೀಗನಹಳ್ಳಿ, ನಲ್ಲಪ್ಪನಹಳ್ಳಿ, ಸಿದ್ದಗಾನಹಳ್ಳಿ, ಆರೂರು ಸೇರಿದಂತೆ ಇತರೆ ಗ್ರಾಮಗಳಲ್ಲಿ ಪರಿಶೀಲಿಸಿದ ನೀರಿನಲ್ಲಿ ಹೆಚ್ಚಿನ ಫ್ಲೋರೈಡ್ ಅಂಶ ಇರುವುದು ಬೆಳಕಿಗೆ ಬಂದಿದೆ.
ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಅಧ್ಯಯನ
ಚಾಮರಾಜನಗರದ ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗ, ಬೆಂಗಳೂರಿನ ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮೀಜಿ ಇಂಜಿನಿಯರಿಂಗ್ ಕಾಲೇಜು, ಬೀದರ್‌ನ ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗ, ಐಐಎಚ್‌ಎಸ್(ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟ್ಲ್‌ಮೆಂಟ್ ಸಹಯೋಗದಲ್ಲಿ ಅಧ್ಯಯನ ನಡೆದಿದ್ದು, 2024ರಲ್ಲಿ ಅಧ್ಯಯನ ವರದಿಯನ್ನು ಅಂಗೀಕರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಶಯ ಪರಿಹರಿಸಿ, ನ್ಯಾಯಾಂಗದ ಘನತೆ ಎತ್ತಿ ಹಿಡಿದ ನ್ಯಾಯಮೂರ್ತಿ
ಒಟ್ಟಾರೆಯಾಗಿ, ಬಯಲುಸೀಮೆಗಳ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ ಭಾಗದ ಜನರು ಸೇರಿದಂತೆ ಭವಿಷ್ಯದ ಪೀಳಿಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಕುರಿತು ವರದಿಗಳು ಎಚ್ಚರಿಸಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರಗಳು ಬಯಲುಸೀಮೆ ಜಿಲ್ಲೆಗಳಿಗೆ ಗುಣಮಟ್ಟದ ಕುಡಿಯುವ ನೀರು ಪೂರೈಸುವತ್ತ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತು ಕುಡಿಯುವ ನೀರಿನ ಯೋಜನೆಗಳ ನೀಲನಕ್ಷೆ ತಯಾರಿಸಿ, ಸರಕಾರದ ಕಣ್ತೆರೆಸಬೇಕಿದೆ.
ಜನರಿಗೆ ವಿಷಯುಕ್ತ ನೀರಿನ ಕುರಿತು ಅರಿವಿಲ್ಲ. ಇದರಿಂದ ಮುಂದಿನ ತಲೆಮಾರು ಕಾಯಿಲೆಗಳಿಗೆ ತುತ್ತಾಗುತ್ತದೆ. ಸುರಕ್ಷಿತ ಕುಡಿಯುವ ನೀರು ಸರಬರಾಜು ಸರಕಾರಗಳ ಕತ್ಯವ್ಯ. ಜೀವಜಲ ವಿಷವಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರಗಳು ಮುಂದಾಗದಿರುವುದು ಇಂದಿನ ದುರಂತ. ಕುಡಿಯುವ ನೀರಿಗಾಗಿ ಮಳೆ ನೀರಿನ ಕೊಯ್ಲು ಮತ್ತು ಸಂಸ್ಕರಿಸಿದ ನದಿ ಮೂಲದ ನೀರನ್ನು ಕೊಡುವುದೇ ಇದಕ್ಕೆ ಸೂಕ್ತ ಪರಿಹಾರ. ಎತ್ತಿನಹೊಳೆ ಯೋಜನೆಯ ಭರವಸೆ ನೀಡಿ, ಇದೀಗ ಅದೂ ಕೈತಪ್ಪಿದೆ. ಕೋಟ್ಯಾಂತರ ರೂಪಾಯಿ ಈಗಾಗಲೇ ತಿಂದು ತೇಗಿದ್ದಾರೆ. ಜನಪ್ರತಿನಿಧಿಗಳು ಧ್ವನಿಕಳೆದುಕೊಂಡಿದ್ದಾರೆ ಎನ್ನುತ್ತಾರೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ.

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು.