ಚಿಕ್ಕಬಳ್ಳಾಪುರ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ(ಟಿಎಪಿಸಿಎಂಎಸ್) ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಸಾರ್ವಜನಿಕ ವಲಯದಲ್ಲಿ ಟಿಎಪಿಸಿಎಂಎಸ್ ಯಾರ ಪಾಲಾಗುತ್ತದೆ ಎಂಬ ಕುತೂಹಲ ಕೆರಳಿಸಿದೆ.
ಹೌದು, ಕಳೆದ ಎರಡು ದಶಕಗಳಿಂದಲೂ ಕಾಂಗ್ರೆಸ್ ವಶವಾಗಿರುವ ಟಿಎಪಿಸಿಎಂಎಸ್ ಈ ಬಾರಿ ಭಾರೀ ಕುತೂಹಲ ಮೂಡಿಸಿದೆ. ಸಂಸದ ಸುಧಾಕರ್ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದರು. ಇದೀಗ ಅವರು ಬಿಜೆಪಿ ಪಕ್ಷದಲ್ಲಿದ್ದಾರೆ. ಅವರೊಂದಿಗೆ ಈ ಹಿಂದೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಸೇರಿದಂತೆ ಹಲವು ಮಂದಿ ನಿರ್ದೇಶಕರು ಬಿಜೆಪಿಯತ್ತ ವಾಲಿದ್ದಾರೆ.
ಈ ಹಿಂದೆ ನಗರಸಭೆ, ಪಿಎಲ್‌ಡಿ ಚುನಾವಣೆಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿರುವ ಸಂಸದ ಡಾ.ಕೆ.ಸುಧಾಕರ್ ಅವರು, ಬಿಜೆಪಿ ಸೇರಿದ ಮೇಲೆ ನಡೆಯುತ್ತಿರುವ ಮೊದಲ ಟಿಎಪಿಸಿಎಂಎಸ್ ಚುನಾವಣೆಯಲ್ಲೂ ಜಯ ಸಾಧಿಸಬಹುದು ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿವೆ.
ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಎರಡೂ ಪಕ್ಷದ ಕಾರ್ಯಕರ್ತ ಮುಖಂಡರು ಸಾಲು ಸಾಲು ಸಭೆಗಳನ್ನು ನಡೆಸಿ ಗೆಲುವಿನ ತಂತ್ರಕ್ಕೆ ಸಿದ್ಧರಾಗುತ್ತಿದ್ದಾರೆ. ಸಂಸದ ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ಇಬ್ಬರೂ ಆಯಾ ಪಕ್ಷಗಳ ಮುಖಂಡರ ಸಭೆಗಳನ್ನು ನಡೆಸಿ ಸೋಲು ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ.
ಶಾಸಕರಿಗೆ ಅನುಭವ ಕೊರತೆ :
ಸಂಸದ ಸುಧಾಕರ್ ಅವರಿಗೆ ಹೋಲಿಸಿದರೆ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಚುನಾವಣ ರಾಜಕಾರಣದ ಅನುಭವ ಕಡಿಮೆ. ಇದು ಅವರ ಮೊದಲ ಚುನಾವಣೆಯಾಗಿದೆ. ಸುಧಾಕರ್ ಅವರು ಅನುಭವಿ ರಾಜಕಾರಣಿಯಾದ ಕಾರಣ ಸಂಘದಲ್ಲಿರುವ ಎರಡೂ ಪಕ್ಷಗಳ ಸದಸ್ಯರ ಆಂತರಿಕ ಲೆಕ್ಕಾಚಾರ ಬಲ್ಲವರಾಗಿದ್ದಾರೆ. ಶಾಸಕರಿಗೆ ಅನುಭವದ ಕೊರತೆಯ ಕಾರಣ ದಶಕಗಳಿಂದ ಕಾಂಗ್ರೆಸ್ ಹಿಡಿತದಲ್ಲಿರುವ ಟಿಎಪಿಸಿಎಂಎಸ್ ಈ ಬಾರಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
3558 ಸದಸ್ಯರು, 14 ಸ್ಥಾನ, 26 ಮಂದಿ ಸ್ಪರ್ಧೆ :
ಏ.27ರ ಭಾನುವಾರ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಟಿಎಪಿಸಿಎಂಎಸ್ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯಲಿದ್ದು, 3558 ಮಂದಿ ಸದಸ್ಯರು ಮತದಾನ ಮಾಡಲಿದ್ದಾರೆ. 14 ಮಂದಿ ನಿರ್ದೇಶಕ ಸ್ಥಾನಗಳಿಗೆ, ಹಿಂದುಳಿದ ಪ್ರವರ್ಗ ಎ, ಹಿಂದುಳಿದ ಪ್ರವರ್ಗ ಬಿ, ಪ.ಜಾತಿ, ಪ.ಪಂಗಡ, ಸಾಮಾನ್ಯ ಕ್ಷೇತ್ರ ಸೇರಿದಂತೆ ಮಹಿಳಾ ಮೀಸಲು ಕ್ಷೇತ್ರಗಳಿಗೆ ಒಟ್ಟು 26 ಮಂದಿ ಸ್ಪರ್ಧಿಸಿದ್ದಾರೆ. ಸಾಮಾನ್ಯ ಎ ವರ್ಗದ 5 ಸ್ಥಾನಗಳಿಗೆ 8 ಮಂದಿ ಸ್ಪರ್ಧಿಸಿದ್ದು, ಸಾಮಾನ್ಯ ವರ್ಗದ 3 ಸ್ಥಾನಗಳಿಗೆ 7 ಮಂದಿ ಸ್ಪರ್ಧಿಸಿದ್ದಾರೆ. ಇನ್ನು ಹಿಂದುಳಿದ ಪ್ರವರ್ಗ ಎ, ಪ್ರವರ್ಗ ಬಿ, ಪ.ಜಾತಿ, ಪ.ಪಂಗಡದ ತಲಾ ಒಂದು ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮಹಿಳಾ ಮೀಸಲು ಕ್ಷೇತ್ರದ 2 ಸ್ಥಾನಗಳಿಗೆ ಮೂವರು ಸ್ಪರ್ಧಿಸಿದ್ದಾರೆ.
ಇತಿಹಾಸ ನೋಡಿದರೆ ಚಿಕ್ಕಬಳ್ಳಾಪುರ ಟಿಎಪಿಸಿಎಂಎಸ್ ಇದುವರೆಗೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಎ ಎನ್ ಶ್ರೀನಿವಾಸ್, ಜಿ ಆರ್ ಶ್ರೀನಿವಾಸ್, ಆವಲರೆಡ್ಡಿ, ನಾರಾಯಣಸ್ವಾಮಿ ಸೇರಿದಂತೆ ಇವರೆಲ್ಲರೂ ಕಾಂಗ್ರೆಸ್ ಪಕ್ಷದಿಂದಲೇ ಗೆದ್ದಿದ್ದಾರೆ. ಚುನಾವಣೆ ಹಿನ್ನೆಲೆ ಈಗಾಗಲೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖಂಡರ ಸಭೆಗಳು ನಡೆದಿವೆ. ಆದರೆ, ಶಾಸಕರು ಸಭೆಗಳಿಗೆ ಬಂದಿಲ್ಲ. ಬೆಂಗಳೂರಿನಲ್ಲಿ ಮುಖಂಡರೊಂದಿಗೆ ಮಾತುಕತೆ ನಡೆದಿದೆ ಎಂದು ಹೇಳುತ್ತಿದ್ದಾರೆ. ಸುಧಾಕರ್ ಅವರು ಅನುಭವವುಳ್ಳವರು, ನಮ್ಮ ಶಾಸಕರ ಹೊಸಬರು. ಆದಾಗ್ಯೂ, ಈ ಬಾರಿಯೂ ಕಾಂಗ್ರೆಸ್ ಜಯಭೇರಿ ಸಾಧಿಸಲಿದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ಕಾಂಗ್ರೆಸ್ ಮುಖಂಡ ಪಟ್ರೇನಹಳ್ಳಿ ಕೃಷ್ಣ.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ವ್ಯಾಲಿ ನೀರು ಜಿಲ್ಲೆಯ ದುರಂತ ಎಂದ ಶಾಸಕ…ಸಚಿವ ಸುಧಾಕರ್ ಗರಂ
ಒಟ್ಟಾರೆಯಾಗಿ, ಟಿಎಪಿಸಿಎಂಎಸ್ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಎರಡೂ ಪಕ್ಷಗಳಿಂದಲೂ ತಂತ್ರ, ಪ್ರತಿತಂತ್ರಗಳು ಜೋರಾಗಿವೆ. ಎರಡು ದಶಕಗಳಿಂದ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಟಿಎಪಿಸಿಎಂಎಸ್ ಈ ಬಾರಿ ಯಾರ ಪಾಲಾಗುತ್ತದೆ ಎಂಬ ಚರ್ಚೆಗಳು ಎದ್ದಿವೆ. ಸಂಸದ ಸುಧಾಕರ್ ಅವರ ಅನುಭವ ಚಾಣಾಕ್ಷತೆಯ ಮುಂದೆ ಪ್ರದೀಪ್ ಈಶ್ವರ್ ಅವರ ಶಾರ್ಟ್ ಟರ್ಮ್ ತಂತ್ರಗಾರಿಕೆ ಫಲಿಸುತ್ತದೆಯೇ ಎಂಬುದನ್ನು ಚಿಕ್ಕಬಳ್ಳಾಪುರ ಜನತೆ ಕಾದುನೋಡಬೇಕಿದೆ.

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು.