ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಜೂನ್ 19 ರಂದು ನಡೆಯಬೇಕಿದ್ದ ಸಚಿವ ಸಂಪುಟ ಸಭೆ ಕೊನೆ ಕ್ಷಣದಲ್ಲಿ ವಿಧಾನಸೌಧಕ್ಕೆ ಸ್ಥಳಾಂತರ ಮಾಡಿದ್ದು ಬಯಲು ಸೀಮೆ ಜಿಲ್ಲೆಗಳ ಜನರಿಗೆ ತೀವ್ರ ನಿರಾಸೆ ತಂದಿದೆ ಎಂದು ಶಾಶ್ವತ ನೀರಾವರಿ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
“ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಮಾಡಿ ಬಯಲು ಸೀಮೆ ಜಿಲ್ಲೆಗಳ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾಗಿದ್ದ ಸರ್ಕಾರವು ಪಲಾಯನ ಮಾಡಿದ್ದು ಸರಿಯಲ್ಲ. ಇಲ್ಲಿ ಸಚಿವ ಸಂಪುಟ ಸಭೆ ಮಾಡಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಆದರೂ ಕೊನೆ ಕ್ಷಣದಲ್ಲಿ ಸ್ಥಳಾಂತರ ಮಾಡಿ ಈ ಭಾಗದ ಜಿಲ್ಲೆಗಳ ಜನರ ನಿರೀಕ್ಷೆಗಳನ್ನು ಹುಸಿ ಮಾಡಿದ್ದಾರೆ. ನಾವು ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಬಯಲುಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ನೀರಾವರಿ ಸಮಸ್ಯೆಗಳನ್ನು ಚರ್ಚೆ ಮಾಡಿ ಪರಿಹಾರ ನೀಡಬೇಕು, ಇಲ್ಲದಿದ್ದರೆ ಸಚಿವ ಸಂಪುಟ ಸಭೆ ಬಳಿಕ ನೀರಾವರಿ ಹೋರಾಟವನ್ನು ತೀವ್ರಗೊಳಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
“ಸಿಎಂ ತವರು ಜಿಲ್ಲೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಮಾಡಿದ್ದಾರೆ. ಆದರೆ, ನಂದಿ ಬೆಟ್ಟವು ವಿಶೇಷವಾದ ಸ್ಥಾನಮಾನ ಹೊಂದಿದೆ. ಇಲ್ಲಿಗೆ ಮಹಾತ್ಮ ಗಾಂಧಿ, ನೆಹರು, ಇಂದಿರಾಗಾಂಧಿ ಅವರೆಲ್ಲರೂ ಇಲ್ಲಿಗೆ ಭೇಟಿಯನ್ನು ನೀಡಿದ್ದರು. ಇಲ್ಲಿ ಸಚಿವ ಸಂಪುಟ ಸಭೆ ನಡೆದಿದ್ರೆ ಸರ್ಕಾರಕ್ಕೆ ಘನತೆ, ಗೌರವ ಹೆಚ್ಚಾಗುತ್ತಿತ್ತು. ಇಲ್ಲಿ ಸಭೆ ನಡೆದಿದ್ದರೆ ಬಯಲು ಸೀಮೆ ಭಾಗದ ಜನರಿಗೆ ಬಹಳ ಅನುಕೂಲವಾಗಲಿತ್ತು. ಆದರೆ ಹೀಗೆ ಮಾಡಿರುವ ಸರ್ಕಾರದ ಧೋರಣೆ ಸರಿಯಲ್ಲ” ಎಂದರು.
ಗೌರಿಬಿದನೂರು, ದೊಡ್ಡಬಳ್ಳಾಪುರದಲ್ಲಿ ಕೈಗಾರಿಕೆ ಸ್ಥಾಪನೆಯಾಗಿದೆ. ಆದರೆ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗುಡಿಬಂಡೆ, ಶಿಡ್ಲಘಟ್ಟ ಈ ಭಾಗದಲ್ಲಿ ಅಂತಹ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಇಲ್ಲಿಯೂ ಕೈಗಾರಿಕಾ ವಲಯ ಆಗಿದ್ರೆ ನಿರುದ್ಯೋಗ ಸಮಸ್ಯೆಯಾದರೂ ನಿವಾರಣೆಯಾಗುತ್ತಿತ್ತು. ಈ ಎಲ್ಲಾ ನೀರಿಕ್ಷೆಗಳನ್ನು ಹುಸಿಯಾಗಿಸಿರುವುದು ಈ ಭಾಗದ ಜನರಿಗೆ ಬೇಸರ ತರಿಸಿದೆ.
ಇದನ್ನು ಓದಿದ್ದೀರಾ…? ಸಚಿವ ಸಂಪುಟ ಸಭೆಯಲ್ಲಿ ಬಯಲುಸೀಮೆ ನೀರಿನ ಸಮಸ್ಯೆ ಕುರಿತ ಚರ್ಚೆಗೆ ಆಗ್ರಹ
ಚಿಕ್ಕಬಳ್ಳಾಪುರ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಆನಂದ್, “ಬಡವರ ಪರ ಇದ್ದೀವಿ ಎಂದು ಹೇಳಿಕೊಂಡು ಕಾಂಗ್ರೆಸ್ ಅಧಿಕಾರ ಹಿಡಿಯಿತು. ಆದರೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಹಾಗೂ ಸಚಿವರ ವಿರುದ್ಧ ಈ ಭಾಗದ ಜನರಿಗೆ ಬಹಳ ಬೇಸರ ಬಂದಿದೆ. ಸಚಿವ ಸಂಪುಟ ಸಭೆ ನಂದಿ ಬೆಟ್ಟದಲ್ಲಿ ವಿಧಾನಸೌಧಕ್ಕೆ ಸ್ಥಳಾಂತರ ಆಗಿದೆ. ಆ ಸಭೆಯಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡ್ಬೇಕು ಇಲ್ಲದಿದ್ದರೆ ಮುಂದಿನ ಸಚಿವ ಸಂಪುಟ ಕಡ್ಡಾಯವಾಗಿ ನಂದಿ ಬೆಟ್ಟದಲ್ಲಿಯೇ ಮಾಡಿದರೆ ಈ ಭಾಗದ ಜನರ ನಂಬಿಕೆಯನ್ನು ಅವರು ಉಳಿಸಿಕೊಳ್ಳುತ್ತಾರೆ ಇಲ್ಲ ಅಂದ್ರೆ ಈ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ. ಯಾವುದೇ ರೀತಿಯ ಅಡ್ಡಿ, ಆತಂಕಗಳು ಇರಲಿಲ್ಲ. ಇಲ್ಲಿಂದ ಯಾಕೆ ಶಿಫ್ಟ್ ಆಯಿತು ಎಂಬುದರ ಬಗ್ಗೆ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವರು ತಿಳಿಸಬೇಕು” ಎಂದು ಆಗ್ರಹಿಸಿದರು.