ಕೋಚಿಮುಲ್‌ನಲ್ಲಿ ಪ್ರಸ್ತುತ ಇರುವ ಆಡಳಿತ ಮಂಡಳಿಯನ್ನು ಕೊನೆಗೊಳಿಸಿ ಕೂಡಲೇ ಚುನಾವಣೆ ನಡೆಸಬೇಕು ಎಂದು ಮೈತ್ರಿ ಪಕ್ಷಗಳ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಚಿಕ್ಕಬಳ್ಳಾಪುರ ನಗರದ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ಕೋಚಿಮುಲ್ ಆಡಳಿತ ಮಂಡಳಿಯ ಅಧಿಕಾರವಧಿ ಮೇ 12ಕ್ಕೆ ಮುಕ್ತಾಯವಾಗಿದ್ದು, ನೆಪಗಳನ್ನು ಹೇಳದೆ ಕೂಡಲೇ ಚುನಾವಣೆ ನಡೆಸಿ ಹೊಸ ಆಡಳಿತ ನಡೆಸಬೇಕು” ಎಂದು ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಮುನಿಯಪ್ಪ ಮಾತನಾಡಿ, “ಕಾನೂನನ್ನು ಅರಿತಿರುವ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರಿಗೆ ಕೋಚಿಮುಲ್ ಚುನಾವಣೆ ಬಗ್ಗೆ ಅರಿವಿಲ್ಲವೇ?. ರಾಜ್ಯಾದ್ಯಂತ ಇದೇ ರೀತಿ ಸಹಕಾರಿ ಹಾಲು ಒಕ್ಕೂಟಗಳ ಚುನಾವಣೆಯನ್ನು ಮುಂದೂಡಿ, ಆಡಳಿತ ಮಂಡಳಿ ಹಾಗೂ ಪದಾಧಿಕಾರಿಗಳ ಅವಧಿಯನ್ನು ಮುಂದುವರೆಸಿರುವುದು ಖಂಡನೀಯ. ಪ್ರಜಾಪ್ರಭುತ್ವದ ಉಳಿವಿಗಾಗಿ ಕೂಡಲೇ ಚುನಾವಣೆ ನಡೆಸಿ ಹಾಲು ಉತ್ಪಾದಕರ ಅಭಿವೃದ್ಧಿಗೆ ಸಹಕರಿಸಬೇಕು” ಎಂದರು.
ಬಿಜೆಪಿ ಮುಖಂಡ ಕೆ ವಿ ನಾಗರಾಜು ಮಾತನಾಡಿ, “ಸಹಕಾರಿ ಕ್ಷೇತ್ರ ಪ್ರಜಾಪ್ರಭುತ್ವದ ವ್ಯವಸ್ಥೆಯಿಂದ ದೂರ ಸರಿಯುತ್ತಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಆಡಳಿತ ಮಂಡಳಿ, ಪದಾಧಿಕಾರಿಗಳ ಅವ್ಯವಹಾರದ ಕುರಿತು ಇ.ಡಿ ತನಿಖೆ ನಡೆಸಿ ವರದಿ ಸಲ್ಲಿಸಿದೆ. ಸರ್ಕಾರ ಸಬೂಬುಗಳನ್ನು ಹೇಳಿ ಪ್ರಸ್ತುತ ಇರುವ ಆಡಳಿತ ಮಂಡಳಿಯನ್ನು ಒಂದು ವರ್ಷದವರೆಗೆ ಮುಂದುವರೆಸಿ ಮತ್ತೊಮ್ಮೆ ಡೆಲಿಗೇಟ್ಸ್‌ಗಳನ್ನು ನೇಮಿಸುವ ಹುನ್ನಾರ ನಡೆಸಿದೆ. ಹಾಗಾಗಿಯೇ ಚುನಾವಣೆಯನ್ನು ಮುಂದೂಡಲಾಗುತ್ತಿದೆ” ಎಂದು ಕಿಡಿಕಾರಿದರು.
“ಈಗಾಗಲೇ ಸಹಕಾರಿ ಒಕ್ಕೂಟದ ಸದಸ್ಯ ಸಂಘಗಳಿಂದ(ಕೊಲಾರ 782, ಚಿಕ್ಕಬಳ್ಳಾಪುರ 799) ಡೆಲೆಗೇಟ್ಸ್‌ಗಳನ್ನು ನೇಮಿಸಲಾಗಿದ್ದು, ತುರ್ತಾಗಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಬೇಕು” ಎಂದು ಒತ್ತಾಯಿಸಿದರು.
ಕೋಚಿಮುಲ್ ಮಾಜಿ ಅಧ್ಯಕ್ಷ ರಮೇಶ್ ಮಾತನಾಡಿ, “ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಹಾಲು ಉತ್ಪಾದನೆಯಾಗುವುದು ನಮ್ಮ ಕೋಚಿಮುಲ್ ಒಕ್ಕೂಟದಲ್ಲಿ ಮಾತ್ರ. ಲೋಕಸಭೆ ಚುನಾವಣೆ ಮುಗಿದರೂ ಹಾಲು ಒಕ್ಕೂಟದ ಚುನಾವಣೆ ನಡೆಸದಿರುವುದು ಸರಿಯಲ್ಲ. ಹಿರಿಯ ಸಚಿವ ರಾಜಣ್ಣ ಅವರು ಪಕ್ಷದ ಹಿತಾಸಕ್ತಿಗಾಗಿ ರಾಜಕೀಯ ಒತ್ತಾಯಕ್ಕೆ ಮಣಿಯುತ್ತಿರುವುದು ಸರಿಯಲ್ಲ. ಕೂಡಲೇ ಚುನಾವಣೆ ನಡೆಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಹಬ್ಬಗಳು ತ್ಯಾಗ ಮತ್ತು ಭ್ರಾತೃತ್ವದ ಸಂಕೇತ: ಡಾ ವಿನ್ಸೆಂಟ್ ಆಳ್ವಾ
ಸುದ್ದಿಗೋಷ್ಟಿಯಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ರಮೇಶ್, ನಾರಾಯಣಸ್ವಾಮಿ, ಅಶ್ವತಪ್ಪ, ಮಾಜಿ ನಿರ್ದೇಶಕಿ ಪ್ರೇಮಕುಮಾರಿ, ರಾಮಣ್ಣ, ಚಿಂತಾಮಣಿ ಗೋಪಾಲಕೃಷ್ಣ ಸೇರಿದಂತೆ ಇತರರು ಇದ್ದರು.
