ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಸುತ್ತೋಲೆಯಲ್ಲಿ ಕೆಲ ನಿಯಮಗಳನ್ನು ಮಾರ್ಪಾಡು ಮಾಡಬೇಕೆಂದು ಒತ್ತಾಯಿಸಿ ಚಿಕ್ಕಬಳ್ಳಾಪುರ ಡಿಎಸ್‌ಎಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಚಿಕ್ಕಬಳ್ಳಾಪುರ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ದಲಿತ ಸಂಘರ್ಷ ಸಮಿತಿ ಮುಖಂಡರು ಜಿಲ್ಲಾಧಿಕಾರಿ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.
ಡಿಎಸ್‌ಎಸ್ ರಾಜ್ಯ ಮುಖಂಡ ಎನ್ ವೆಂಕಟೇಶ್ ಮಾತನಾಡಿ, “ಸರ್ಕಾರ ಮೇ.20ರಂದು ಹೊರಗುತ್ತಿಗೆ ನೇಮಕಾತಿಗಳಲ್ಲಿ ಮೀಸಲಾತಿ ನೀಡಬೇಕೆಂಬ ಆದೇಶ ನೀಡಿರುವುದರಿಂದ ಸಮುದಾಯದ ಲಕ್ಷಾಂತರ ಮಂದಿ ನಿರುದ್ಯೋಗಿಗಳಿಗೆ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಉತ್ತಮವಾಗಿದ್ದರೂ ಸುತ್ತೋಲೆ 1 ಮತ್ತು 6ನೇ ಷರತ್ತುಗಳು ದಲಿತರಿಗೆ ಮಾರಕವಾಗಿವೆ” ಎಂದು ದೂರಿದರು.
“1ನೇ ಷರತ್ತಿನಲ್ಲಿ ಹೊರಗುತ್ತಿಗೆ ಮೀಸಲಾತಿ ನೀತಿಯು 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿಗಳಿಗೆ ಅನ್ವಯಿಸುವುದಿಲ್ಲ ಎಂದಿದೆ. ಇದು ಮೀಸಲಾತಿ ವಿರೋಧಿಗಳಿಗೆ ಅನುಕೂಲಕರವಾಗಿದ್ದು, ಅದನ್ನು ರದ್ದುಪಡಿಸಿ ಎಷ್ಟೇ ಅವಧಿಯ ನೇಮಕಾತಿ ಮಾಡಿಕೊಂಡರೂ ಮೀಸಲಾತಿ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಆದೇಶಿಸಬೇಕು” ಎಂದು ಒತ್ತಾಯಿಸಿದರು.
“6ನೇ ಷರತ್ತಿನಲ್ಲಿ ಇಲಾಖೆಯಲ್ಲಿ ಕನಿಷ್ಟ 20ಮಂದಿ ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಸಂದರ್ಭದಲ್ಲಿ ಮಾತ್ರ ಮೀಸಲಾತಿಯು ಜಾರಿಗೊಳಿಸತಕ್ಕದ್ದು ಎಂದಿರುವುದು ಅವೈಜ್ಞಾನಿಕ ಮತ್ತು ದುರುದ್ದೇಶಪೂರಿತವಾಗಿದೆ. ಮೀಸಲಾತಿಯನ್ನು ವಂಚಿಸಿಲು ಸದಾ ಸಿದ್ಧ ಇರುವವರಿಗೆ ರತ್ನಗಂಬಳಿ ಹಾಸಿ ರಹದಾರಿ ಕಲ್ಪಿಸಿ ಕೊಟ್ಟಂತಾಗುತ್ತದೆ” ಎಂದು ಟೀಕಿಸಿದರು.
2008ರಲ್ಲಿ ಸ್ಥಾಪನೆಯಾದ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ 250 ವಿದ್ಯಾರ್ಥಿಗಳಿಗೆ 11 ಮಂದಿ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಿಸಿದ್ದು, 2008ರ ನಂತರ ಸ್ಥಾಪನೆಯಾದ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ವಿತ್ತೀಯ ಕೊರತೆ ನೀಗಿಸಲು 11 ಮಂದಿ ಸಿಬ್ಬಂದಿಯಲ್ಲಿ 7 ಮಂದಿಗೆ ಕಡಿತಗೊಳಿಸಿರುವುದು ದುಡಿಯುವ ವರ್ಗಕ್ಕೆ ಸರ್ಕಾರ ಮಾಡಿರುವ ವಂಚನೆಯಾಗಿದೆ. ಆದ್ದರಿಂದ ಈ ಆದೇಶವನ್ನೂ ಹಿಂಪಡೆಯಬೇಕು” ಎಂದು ಆಗ್ರಹಿಸಿದರು.
“ಈವರೆಗೆ ನಡೆದಿರುವ ನೇಮಕಾತಿ ಪ್ರಕ್ರಿಯೆಗಳಲ್ಲಿ ಜಾತಿವಾದಿ ಅಧಿಕಾರಿಗಳ ಮೀಸಲಾತಿ ವಿರೋಧಿ ದುರಾಡಳಿತಕ್ಕೆ ಸಾಕಷ್ಟು ಪುರಾವೆಗಳಿದ್ದು, ಸಮಾಜದಲ್ಲಿ ಮೀಸಲಾತಿ ಬಗ್ಗೆ ಅಸಹನೆ ತುಂಬಿ ತುಳುಕುತ್ತಿರುವ ಹೊತ್ತಿನಲ್ಲಿ ಇಂತಹ ಷರತ್ತುಬದ್ಧ ಆದೇಶದ ನೇಮಕಾತಿ ಮಾಡುವ ವೇಳೆ ಪಕ್ಷಪಾತ ಮಾಡುವ ಜಾತಿವಾದಿ ಅಧಿಕಾರಿಗಳಿಗೆ ಕಾನೂನು ಬದ್ಧ ಪ್ರೋತ್ಸಾಹ ನೀಡಿದಂತಾಗುವುದು” ಎಂದು ಟೀಕಿಸಿದರು.
“ಈ ನಿಟ್ಟಿನಲ್ಲಿ ನೇಮಕಾತಿಯ 1 ಮತ್ತು 6ನೇ ಷರತ್ತನ್ನು ರದ್ದುಪಡಿಸಲು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಬೇಕು, ಹುದ್ದೆಗಳ ಸಂಖ್ಯೆ ಎಷ್ಟೇ ಇರಲಿ, ಎಷ್ಟೇ ಅವಧಿಯದ್ದಾಗಿರಲಿ ಈಗಾಗಲೇ ಅಸ್ತಿತ್ವದಲ್ಲಿರುವ ರೋಸ್ಟರ್ ನಿಯಮಗಳ ಅನುಸಾರವಾಗಿ ನೇಮಕಾತಿ ಪ್ರಕ್ರಿಯೆ ಕಡ್ಡಾಯವಾಗಿ ನಡೆಯಬೇಕು. ಇಲ್ಲವಾದಲ್ಲಿ ರಾಜ್ಯಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು” ಎಂದು ಸರ್ಕಾರವನ್ನು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ರೋಸ್ಟರ್ ನಿಯಮದಂತೆ ಹೊರಗುತ್ತಿಗೆ ನೇಮಕಾತಿ ಮಾಡುವಂತೆ ದಸಂಸ ಒತ್ತಾಯ
ಪ್ರತಿಭಟನೆಯಲ್ಲಿ ಮುಖಂಡರುಗಳಾದ ಸಿ ಜೆ ಗಂಗಪ್ಪ, ಬಿ ವಿ ಆನಂದ್, ಎನ್ ಪರಮೇಶ್, ಶ್ರೀರಂಗಪ್ಪ, ಗಂಗಪ್ಪ, ಬಿ ನರಸಿಂಹಯ್ಯ, ಟಿ ಎ ಚಲಪತಿ ಇದ್ದರು.