ರಾಜ್ಯಕ್ಕೆ ಕೇಂದ್ರ ಬಿಜೆಪಿ ಸರ್ಕಾರದ ಕೊಡುಗೆ ಕೇವಲ ಚೊಂಬಷ್ಟೇ. ನಮ್ಮ ರಾಜ್ಯದ ವಿಚಾರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅನ್ಯಾಯ ಧೋರಣೆ ಮಾಡುತ್ತಿದೆ ಎಂದು ಸಚಿವ ಎಂ ಸಿ ಸುಧಾಕರ್ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ಕೇಂದ್ರ ಬಜೆಟ್ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಘಟಕ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
“ಕೇಂದ್ರ ಬಿಜೆಪಿ ಸರ್ಕಾರ ನಿರಂತರವಾಗಿ ರಾಜ್ಯದ ಜನರಿಗೆ ಅನ್ಯಾನ ಮಾಡುತ್ತಿದ್ದು, ಈ ಬಾರಿಯ ಬಜೆಟ್‌ನಲ್ಲೂ ರಾಜ್ಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಕೇವಲ ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಂಧ್ರ ಮತ್ತು ಬಿಹಾರ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಿದೆ” ಎಂದು ದೂರಿದರು.
“ನಿರಂತರ ಜನವಿರೋಧಿ ಆಡಳಿತ ನಡೆಸುತ್ತಿರುವ ಕೇಂದ್ರ ಬಿಜೆಪಿ ಕೇವಲ ಭಾವನಾತ್ಮಕ ವಿಚಾರಗಳಿಂದ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುತ್ತಿದೆ. ಜನಸಾಮಾನ್ಯರ, ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ನೀರಾವರಿ ಯೋಜನೆಗಳು, ಮೂಲಭೂತ ಸೌಲಭ್ಯಗಳು ಸೇರಿದಂತೆ ಅಭಿವೃದ್ಧಿ ವಿಚಾರದಲ್ಲಿ ಚಿಂತನೆ ನಡೆಸುತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ 19 ಮಂದಿ ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ” ಎಂದು ಕುಟುಕಿದರು.
“ವಿಪಕ್ಷ ನಾಯಕರು ಅಭಿವೃದ್ಧಿ ವಿಚಾರಗಳನ್ನು ಬಿಟ್ಟು, ಇಲ್ಲಸಲ್ಲದ ವಿಚಾರಗಳನ್ನು ಇಟ್ಟುಕೊಂಡು ಕಲಾಪ ಹಾಳುಮಾಡುತ್ತಿದ್ದಾರೆ. ಮುಖ್ಯ ವಿಚಾರಗಳನ್ನು ಚರ್ಚೆ ಮಾಡುತ್ತಿಲ್ಲ” ಎಂದು ಗುಡುಗಿದರು.
“ಕೈಗಾರಿಕೆ ಅಭಿವೃದ್ಧಿ ನಿಟ್ಟಿನಲ್ಲಿ 5,200 ಎಕರೆಗೂ ಅಧಿಕ ಭೂಮಿ ಗುರುತಿಸಿದ್ದೇವೆಂದು ಈ ಭಾಗದ ಲೋಕಸಭಾ ಸದಸ್ಯರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಮಂಚೇನಹಳ್ಳಿಯಲ್ಲಿ 2 ಸಾವಿರ ಎಕರೆ ಜಾಗವಿದೆ ಎನ್ನುತ್ತಿದ್ದಾರೆ. ಇದಕ್ಕೆ ದಾಖಲೆ ಏನಿದೆ ಎಂಬುದನ್ನು ಅವರು ತೋರಿಸಲಿ. ಇದು ಜನರನ್ನು ಯಾಮಾರಿಸುವ ಪ್ರಯತ್ನ. ಸಂಸದರು ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಟ್ಟು ತಾಕತ್ತಿದ್ದರೆ ಲೋಕಸಭೆಯಲ್ಲಿ ಮಾತನಾಡಲಿ” ಎಂದು ಪರೋಕ್ಷವಾಗಿ ಸಂಸದ ಕೆ ಸುಧಾಕರ್ ಅವರಿಗೆ ಸವಾಲೆಸೆದರು.
“ನಮ್ಮ ಸರ್ಕಾರ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕಾಗಿ ₹20 ಕೋಟಿ ಅನುದಾನ ಮೀಸಲಿಟ್ಟಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತರಾತುರಿಯಲ್ಲಿ ಜಾಗ ಗುರುತಿಸದೆ ರೋಪ್ ವೇ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ನಾವು ರೋಪ್ ವೇ ನಿರ್ಮಾಣಕ್ಕೆ ಅಗತ್ಯವಿರುವ ಜಾಗ ಗುರುತಿಸಿ ಅರಣ್ಯ ಇಲಾಖೆ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ವರ್ಗಾವಣೆ ಮಾಡಿದ್ದು, ರಾಜ್ಯಪಾಲರ ಅಂಕಿತಕ್ಕೆ ಕಾಯುತ್ತಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮುಚ್ಚುವ ಸ್ಥಿತಿಯಲ್ಲಿದ್ದ ಸರ್ಕಾರಿ ಶಾಲೆಯಲ್ಲೀಗ 250ಕ್ಕೂ ಅಧಿಕ ಮಕ್ಕಳು!
“ಕೇಂದ್ರದ ಬಜೆಟ್‌ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ಬಿಜೆಪಿ ಧ್ವನಿ ಎತ್ತುತ್ತಿಲ್ಲ. ಈ ಭಾಗದ ಜನಕ್ಕೆ ನ್ಯಾಯಕೊಡಿಸುವ ಕೆಲಸ ಮಾಡಿ. ನಿಮ್ಮ ಸಾಧನೆ ಏನೆಂಬುದನ್ನು ರಾಜ್ಯದ ಜನಕ್ಕೆ ತಿಳಿಸಿ. ನಿಮಗೆ ನೈತಿಕತೆ ಇಲ್ಲ. ಸರ್ಕಾರವನ್ನು ಹಾಳುಮಾಡುವ ನಿಮ್ಮ ಯಾವುದೇ ಆರೋಪಗಳು ಫಲಿಸುವುದಿಲ್ಲ. ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಹೋರಾಟದ ಮೂಲಕ ಜನರಿಗೆ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ ಪಿ ಬಚ್ಚೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ರಾಜೇಗೌಡ, ಶಾಸಕ ಸುಬ್ಬಾರೆಡ್ಡಿ, ಭರಣಿ ವೆಂಕಟೇಶ್, ಮಮತಾ ಮೂರ್ತಿ, ರಾಜೇಶ್, ವೆಂಕಟಲಕ್ಷ್ಮಮ್ಮ, ಅಣ್ಣಮ್ಮ ಸೇರಿದಂತೆ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.