ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಕುಟುಂಬದವರ ಮೇಲೆ ಕುರುಬ ಸಮುದಾಯದವರು ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ರಾಮಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.
ದಲಿತ ಸಮುದಾಯದ ಭಾಸ್ಕರ್ ಮತ್ತು ಅತ್ತಿಗೆ ಚಿತ್ರಾ ಸೇರಿದಂತೆ ಇತರರ ಮೇಲೆ ಇದೇ ಗ್ರಾಮದ ಕುರುಬ ಸಮುದಾಯದ ತಂಗಿಡಪ್ಪ ಕುಟುಂಬದವರು ಹಲ್ಲೆ ಸೋಮವಾರದಂದು ಹಲ್ಲೆ ಮಾಡಿದ್ದು, ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ದಸಂಸ ಮುಖಂಡ ಗಂಗಪ್ಪ ಜಿ ವಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕಮ್ಮಡಿಕೆ ಗ್ರಾಮದ ಸರ್ವೇ ನಂಬರ್ 76/1, 2, 3 ಮತ್ತು 4ರ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ತಂಗಿಡಪ್ಪ ಕುಟುಂಬದವರು ಜೆಸಿಬಿ ತಂದು ಅಲ್ಲಿಯ ಗಿಡಮರಗಳನ್ನು ಕಿತ್ತು ಗಲಾಟೆ ಮಾಡಿ ದೌರ್ಜನ್ಯ ಎಸಗಿದ್ದಾರೆ” ಎಂದು ತಿಳಿಸಿದರು.
“ಸದರಿ ಜಮೀನಿನ ವಿಚಾರದಲ್ಲಿ 2017ರಂದು ತಂಗಿಡಪ್ಪ ಕುಟುಂಬದವರು ಬೋವಿ ಸಮುದಾಯ(ಎಸ್‌ಸಿ)ದ ನಾರಾಯಣಪ್ಪ ಕುಟುಂಬದವರ ಮೇಲೆ ದೌರ್ಜನ್ಯ ನಡೆಸಿದ್ದು, 6 ಮಂದಿಯನ್ನು ಶಾಶ್ವತ ಅಂಗವಿಕಲರನ್ನಾಗಿ ಮಾಡಿದ್ದಾರೆ. ಹೀಗಿರುವಾಗ ಇಂದು ಪೊಲೀಸ್ ಬಲ ಪ್ರಯೋಗಿಸಿ ಸದರಿ ಜಮೀನನ್ನು ಮತ್ತೊಮ್ಮೆ ಕಬಳಿಸಲು ಮುಂದಾಗಿದ್ದಾರೆ. ಸದರಿ ಘಟನೆಗೆ ಚಿಕ್ಕಬಳಾಪುರ ಜಿಲ್ಲಾ ಪೋಲಿಸ್ ಇಲಾಖೆಯ ನಿಷ್ಕ್ರಿಯ ನಡಾವಳಿಯೇ ಕಾರಣ” ಎಂದು ಸ್ಥಳೀಯ ದಸಂಸ ಮುಖಂಡ ಗಂಗಪ್ಪ ಜಿ ವಿ ಆರೋಪಿಸಿದರು.

“ಸಂತ್ರಸ್ತರು ಗಂಭೀರ ಗಾಯಗೊಂಡಿದ್ದು, ಆರೋಪಿಗಳ ದುರ್ವರ್ತನೆ ಕಂಡು ಹೆದರಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಕೊಲೆ ಆತಂಕ ವ್ಯಕ್ತಪಡಿಸಿದ್ದು, ತಪ್ಪಿತಸ್ತರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು ಸಂತ್ರಸ್ತರಿಗೆ ಬೆಂಬಲ ನೀಡಿದ್ದು, ಯಾವುದೇ ರೀತಿ ತೊಂದರೆಗಳಾಗುವುದಿಲ್ಲವೆಂದು ಸಂತ್ರಸ್ತರನ್ನು ಸಂತೈಸಿದ್ದಾರೆ ಎಂದು ಗಂಗಪ್ಪ ಜಿ ವಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಮಿತ್ ಶಾ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲು ಆಗ್ರಹಿಸಿ ಒಡಲ ದನಿ ಮಹಿಳಾ ಒಕ್ಕೂಟ ಪ್ರತಿಭಟನೆ
ಈ ಘಟನೆಯನ್ನು ದಸಂಸ ಜಿಲ್ಲಾ ಶಾಖೆ ತೀವ್ರವಾಗಿ ಖಂಡಿಸಿದ್ದು, ಘಟನೆ ತಿಳಿದ ಕೂಡಲೇ ಗುಡಿಬಂಡೆ ತಾಲೂಕು ಪದಾಧಿಕಾರಿಗಳು ಸಂತ್ರಸ್ತ ದಲಿತರಿಗೆ ನೈತಿಕ ಬೆಂಬಲ ಸೂಚಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗೆ ಒತ್ತಾಯಿಸಿರುತ್ತಾರೆ.
ಘಟನೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಡಿವೈಎಸ್‌ಪಿಯವರನ್ನು ಸಂಪರ್ಕಿಸದೆ. ಆದರೆ ಅವರು ಯಾವುದೇ ಕರೆಗೆ ಲಭ್ಯವಾಗಿಲ್ಲ.