ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಮನೆ ಮಾತಾಗಿರುವ ಜಿಲ್ಲಾ ಪೊಲೀಸ್ ಇಲಾಖೆ ದೇಶದಲ್ಲಿಯೇ ಮೊದಲ ಬಾರಿಗೆ AI ತಂತ್ರಜ್ಞಾನ ಬಳಸಿಕೊಂಡು ನಮ್ಮ ಕಾಫ್ ವಾಟ್ಸ್ಪ್ ಚಾಟ್‌ಬಾಟ್ ಮೂಲಕ ಸೇವೆ ನೀಡುವ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ನಗರದ ಜಿಲ್ಲಾ ಕನ್ನಡ ಭವನದಲ್ಲಿ ಬುಧವಾರ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಮತ್ತು ಎಸ್‌ಜೆಸಿಐಟಿ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಅಭಿವೃದ್ದಿಪಡಿಸಿರುವ ನಮ್ಮ ಕಾಫ್ 24*7 ಎಐ ಚಾಟ್‌ಬಾಟ್ ಅಸಿಸ್ಟೆಂಟ್ ಸೇವೆಗೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಇದರ ನಿರ್ವಹಣೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ಪರಿಚಯಿಸಿರುವ ಎಐ ಚಾಟ್‌ಬಾಟ್ ಅಸಿಸ್ಟೆಂಟ್ ಕಾರ್ಯಕ್ರಮವು ಬಹುಶಃ ಪೊಲೀಸ್ ಇಲಾಖೆಯಲ್ಲಿಯೇ ಪ್ರಥಮ ಪ್ರಯತ್ನವಾಗಿದೆ. ಕಾರಣ ಸ್ವಾತಂತ್ರ್ಯ ಬಂದು 79 ವರ್ಷಗಳೇ ಕಳೆದರೂ ಪೊಲೀಸ್ ಇಲಾಖೆ ಎಂದರೆ ಸಾರ್ವಜನಿಕರಲ್ಲಿ ಹಿಂಜರಿಕೆ ಹೋಗಿಲ್ಲ. ತಮಗಾಗುತ್ತಿರುವ ಸಮಸ್ಯೆಗಳನ್ನು ನೇರವಾಗಿ ಠಾಣೆಗೆ ಬಂದು ಹೇಳಿಕೊಳ್ಳಲು ಮುಜುಗರಪಡುವುದೇ ಹೆಚ್ಚು. ಇದನ್ನು ತಪ್ಪಿಸುವ ಸಲುವಾಗಿ ಈ ವಾಟ್ಸ್ಪ್ ಚಾಟ್‌ಬಾಟ್ ಪರಿಚಯಿಸಲಾಗಿದೆ. ಈ ಮೂಲಕ ಜನತೆ ತಾವಿರುವಲ್ಲಿಯೇ 9480802538 ಮೊಬೈಲ್ ನಂಬರ್‌ಗೆ ಕರೆ ಮಾಡಿ ಮಾಹಿತಿ ಜತೆಗೆ ಪೊಲೀಸ್ ನೆರವು ಪಡೆಯಬಹುದು ಎಂದರು.
ನಮ್ಮ ಕಾಫ್ ವಾಟ್ಸ್ಪ್ ಚಾಟ್‌ಬಾಟ್ ಮೂಲಕ ಸಾರ್ವಜನಿಕರು ಪೊಲೀಸ್ ಇಲಾಖೆಯಲ್ಲಿ ದೊರೆಯುವ ಎಲ್ಲಾ ಆನಲೈನ್ ಸೇವೆಗಳನ್ನು ಇದ್ದಲ್ಲಿಯೇ ಪಡೆಯಬಹುದು. ವಾಟ್ಸ್ಪ್ ಮೂಲಕವೇ ದೂರು ದಾಖಲಿಸಿ ಅದರ ಪ್ರತಿ ಪಡೆಯಬಹುದು. ನಿಮ್ಮ ಹತ್ತಿರದ ಪೊಲೀಸ್ ಠಾಣೆ, ಅದರ ಸಬ್ ಇನ್ಸ್ಪೆಕ್ಟರ್, ಸಿಬ್ಬಂದಿ ಮಾಹಿತಿ, ಬೀಟ್ ಪೊಲೀಸ್ ಹೆಸರು ಪೋನ್ ನಂಬರ್ ಸೇರಿದಂತೆ ನೀವು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಕ್ಷಣಮಾತ್ರದಲ್ಲಿ ಉತ್ತರ ದೊರೆಯಲಿದೆ ಎಂದರು.
ಈ ಸೇವೆಯನ್ನು ಜನಸಾಮಾನ್ಯರಿಗೆ ಒದಗಿಸುವ ವಾಟ್ಸ್ಪ್ ಚಾಟ್‌ಬಾಟ್ ತಂತ್ರಾoಶವನ್ನು ಇಲಾಖೆಗೆ ಒದಗಿಸಲು ನಗರ ಹೊರವಲಯದ ಎಸ್‌ಜೆಸಿ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲ ಡಾ. ಜಿ.ಟಿ.ರಾಜು,ಕುಲಸಚಿವ ಸುರೇಶ್, ವಿದ್ಯುನ್ಮಾನ ವಿಭಾಗದ ಪ್ರಾಧ್ಯಾಪಕರಾದ ಡಾ.ಪ್ರಾಂಜಲಾ ತಿವಾರಿ ಕುಶಲ್ ಚೌಕ್ಸೆ, ಮತ್ತು ವಿದ್ಯಾರ್ಥಿಗಳ ಸಹಕಾರದೊಂದಿಗೆ ಜಿಲ್ಲಾ ಪೊಲೀಸ್ ಇಲಾಖೆ ಈ ವಾಟ್ಸ್ಪ್ ಚಾಟ್‌ಬಾಟ್‌ನ್ನು ರೂಪಿಸಿದೆ. ಜನರಿಗೆ ಅತಿ ವೇಗ ಮತ್ತು ಸುಲಭವಾಗಿ ಪೊಲೀಸ್ ಸೇವೆಗಳನ್ನು ಒದಗಿಸಲು ಇದರಿಂದ ಸಹಾಯವಾಗಲಿದೆ. ತುರ್ತು ಸೇವೆ, ಕಾನೂನು ಮಾಹಿತಿ, ಸತಿಪತಿ ಕಲಹದ ದೂರು, ಸೈಬರ್ ಅಪರಾಧಗಳ ಪತ್ತೆಗೆ ನೆರವು, ಅನಾಮಿಕ ದೂರು ನೀಡುವುದು, ಮಟ್ಕಾ ದಂಧೆಯ ಬಗ್ಗೆ ಮಾಹಿತಿ ನೀಡುವುದು ಸೇರಿದಂತೆ ಸಾರ್ವಜನಿಕರಿಗೆ ಬೇಕಾದ ಹತ್ತು ಹಲವು ಸೇವೆಗಳನ್ನು ಇಲ್ಲಿ ಪಡೆಯಲು ಅವಕಾಶ ಒದಗಿಸಲಾಗಿದೆ ಎಂದರು.

ಎಐ ತಂತ್ರಜ್ಞಾನವು ಇಂದು ಜಗತ್ತನ್ನು ಆಳುತ್ತಿರುವುದು ನಮಗೆಲ್ಲಾ ತಿಳಿದ ವಿಚಾರವೇ ಆಗಿದೆ.೯೪೮೦೮೦೨೫೩೮ ಸಂಖ್ಯೆಯುಳ್ಳ ನಮ್ಮ ಕಾಫ್ ವಾಟ್ಸ್ಪ್ ಚಾಟ್‌ಬಾಟ್ ತಂತ್ರಾoಶವು ಕನ್ನಡ,ತೆಲುಗು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಸಂವಹನ ಮಾಡಲು ಅನುಕೂಲವಾಗುವಂತೆ ರೂಪಿಸಲಾಗಿದೆ. ಸಣ್ಣ ಪುಟ್ಟ ಮಾಹಿತಿಗಾಗಿ ನಾವು ಪೊಲೀಸ್ ಠಾಣೆಗೆ ಹೋಗುವುದರ ಅವಶ್ಯಕತೆ ಇರುವುದಿಲ್ಲ.ಈ ನಂಬರ್‌ಗೆ ಹಾಯ್ ಎಂದು ಮೆಸೇಜ್ ಕಳಿಸಿದರೆ ಸಾಕು ಪೊಲೀಸ್ ಇಲಾಖೆಯಲ್ಲಿ ಲಭ್ಯವಿರುವ ಸೇವೆಗಳ ಹೆಸರು ಬರಲಿವೆ. ನಿಮಗೆ ಬೇಕಾದ ಸೇವೆಯ ಸಂಖ್ಯೆಯನ್ನು ಆಯ್ಕೆ ಮಾಡಿದರೆ ಆ ಸೇವೆಗೆ ಸಂಬoಧಿಸಿದ ಪೂರ್ಣ ಮಾಹಿತಿ ನಿಮಗೆ ಲಭ್ಯವಾಗಲಿದ್ದು ದಿನದ ೨೪ ಗಂಟೆಯೂ ವಾಟ್ಸ್ಪ್ ಚಾಟ್‌ಬಾಟ್ ಸೇವೆಗೆ ಲಭ್ಯವಿರಲಿದೆ ಎಂದು ತಿಳಿಸಿದರು.
ಈ ಚಾಟ್‌ಬಾಟ್‌ನಲ್ಲಿ ತುರ್ತು ಸೇವೆ, ಕಾನೂನು ಉಲ್ಲಂಘನೆ ವರದಿ ಮಾಡುವುದು, ಎಫ್‌ಐಆರ್ ಕಾಪಿ ಡೌನ್‌ಲೋಡ್ ಮಾಡುವ ಲಿಂಕ್, ಸಂಚಾರ ಸುರಕ್ಷತೆ ಮತ್ತು ನಿಯಮಗಳು, ಪೊಲೀಸ್ ಮಾಹಿತಿ, ಸೈಬರ್ ಅಪರಾಧ ಜಾಗೃತಿ, ಜಾಗೃತಿ ಅಭಿಯಾನ, ಪತಿ-ಪತ್ನಿಯರಿಗೆ ಕಾನೂನು ಅರಿವು,ನೆರವು, ಕಾನೂನು ಮಾಹಿತಿ, ನಾಗರಿಕ ಹಕ್ಕುಗಳು, ಹೆಚ್ಚುವರಿ ಸೇವೆಗಳು ಹೀಗೆ ಹಲವು ಮಾಹಿತಿ ಇಲ್ಲಿ ಲಭ್ಯವಿದೆ. ಈ ಮೂಲಕ ಪೊಲೀಸ್ ಇಲಾಖೆಯಲ್ಲಿನ ಎಲ್ಲ ಸೇವೆಗಳನ್ನು ಜನರಿಗೆ ತಲುಪಿಸಲು ಮತ್ತೊಂದು ಹೆಜ್ಜೆಯನ್ನು ಇಟ್ಟಿದ್ದು, ಜನರಿಗೆ ಮಾಹಿತಿ ನೀಡುವುದರ ಜತೆ ಜಾಗೃತಿ ಮೂಡಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಹಿರಿಯ ವಕೀಲ ದಿ.ಹರಿಕುಮಾರ್ ಸ್ಮರಣಾರ್ಥ 8 ದಿನಗಳ ಕ್ರಿಕೆಟ್ ಕ್ರೀಡಾಕೂಟ
ಕಾರ್ಯಕ್ರಮದಲ್ಲಿ ನಮ್ಮ ಕಾಫ್ ರೂಪಿಸಲು ನೆರವಾದ ಎಸ್‌ಜೆಸಿಐಟಿ ಪ್ರಾಂಶುಪಾಲ ಡಾ.ಜಿ.ಟಿ.ರಾಜು, ವಿದ್ಯುನ್ಮಾನ ವಿಭಾಗ ಮುಖ್ಯಸ್ಥ ಡಾ.ರಂಗಸ್ವಾಮಿ, ಪ್ರಾಧ್ಯಾಪಕಿ ಡಾ.ಪ್ರಾಂಜಲಾ ತಿವಾರಿ ಕುಶಲ್ ಚೌಕ್ಸೆ, ಅಂತಿ ವರ್ಷದ ವಿದ್ಯಾರ್ಥಿಗಳಾದ ಹೆಚ್.ಸಿ.ಭರತ್, ಎಂ.ಪಿ.ಹೇಮoತ್ ಕುಮಾರ್,ಸಿ.ಆಯುಶ್ ರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.ಈ ಸಂಧರ್ಭದಲ್ಲಿ ಹೆಚ್ಚುವರಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥರೈ, ಡಿವೈಎಸ್ ಪಿಗಳಾದ ಎಸ್.ಶಿವಕುಮಾರ್,ರವಿಕುಮಾರ್, ಮುರಳೀಧರ್, ನಾಗೇಂದ್ರಪ್ರಸಾದ್, ಜಿಲ್ಲೆಯ ಎಲ್ಲಾ ಪೋಲಿಸ್ ಅಧಿಕಾರಿಗಳು,ಕಾಲೇಜು ವಿದ್ಯಾರ್ಥಿಗಳು ಇದ್ದರು.