ಚಿಕ್ಕಬಳ್ಳಾಪುರದಲ್ಲಿ ನಡೆದ ಈದಿನ ಡಾಟ್ ಕಾಮ್ ವಿಶೇಷಾಂಕ ಬಿಡುಗಡೆ ಸಮಾರಂಭದಲ್ಲಿ ದಸಂಸ ಸ್ಥಾಪಕ ಸದಸ್ಯ ಎನ್ ವೆಂಕಟೇಶ್ ಅಭಿಮತ
ಕರ್ನಾಟಕದ 50 ವರ್ಷದ ಆಡಳಿತ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಶೋಷಣೆಗೆ ಒಳಗಾದವರ ಹೋರಾಟಗಳನ್ನು ದಾಖಲಿಸುವುದು ಮತ್ತು ಮುಂದಿನ ಪೀಳಿಗೆಗೆ ತಲುಪಿಸುವುದೇ ಈದಿನ ವಿಶೇಷ ಸಂಚಿಕೆಯ ಮುಖ್ಯ ಉದ್ದೇಶ. ಈದಿನ ಡಾಟ್ ಕಾಮ್ ಡಿಜಿಟಲ್ ಮಾಧ್ಯಮದ ಸಾಮಾಜಿಕ ಕಳಕಳಿ, ವೈಜ್ಞಾನಿಕ ಪರಿಕಲ್ಪನೆಯಲ್ಲಿ ಸಮಾಜವನ್ನು ಮುನ್ನಡೆಸುವ ಪ್ರಯತ್ನ ಶ್ಲಾಘನೀಯ ಎಂದು ದಲಿತ ಸಂಘರ್ಷ ಸಮಿತಿ ಸ್ಥಾಪಕ ಸದಸ್ಯ ಎನ್ ವೆಂಕಟೇಶ್ ಅಭಿಪ್ರಾಯಪಟ್ಟರು.
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ವಿಶ್ವಮಾನವ ಕುವೆಂಪು ಜನ್ಮದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಈದಿನ ಡಾಟ್ ಕಾಮ್ ವಿಶೇಷಾಂಕ ಮತ್ತು ನ್ಯೂಸ್ ಆಪ್ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಡೀ ಕರ್ನಾಟಕದಲ್ಲಿ ಹೊಸ ರೀತಿಯಲ್ಲಿ ನವಸಮಾಜ ನಿರ್ಮಾಣದ ತುಡಿತದಿಂದ ಆರಂಭವಾದಂತಹ ಹೋರಾಟಗಳು, ಶೈಕ್ಷಣಿಕತೆ, ಕಾರ್ಮಿಕರು, ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರನ್ನು ಒಳಗೊಂಡಂತಹ ಹಲವು ಲೇಖನಗಳನ್ನು ಈ ಸಂಚಿಕೆಯಲ್ಲಿ ಕಾಣಬಹುದು ಎಂದು ತಿಳಿಸಿದರು.

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿ, ಈದಿನ ತಂಡ ಆರಂಭಿಸಿದ “ಫಾರ್ಟಿ ಪರ್ಸೆಂಟ್ ಸರಕಾರ” ಚಳವಳಿ ಇಡೀ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಯಿತು. ಇದರಿಂದ ಒಂದು ಸರ್ಕಾರವೇ ಉರುಳುವಂತಾಯಿತು. ಇದು ಈ ದಿನ.ಕಾಮ್ ತಂಡದ ಸಾಧನೆ. ಇದೀಗ ʼಈ ದಿನ ವಿಶೇಷ ಸಂಚಿಕೆʼಯ ಮೂಲಕ ಅಸ್ಪೃಷ್ಯತೆ, ಜಾತಿ, ಮಹಿಳಾ ಸಬಲೀಕರಣ, ರಾಜಕಾರಣ ಸೇರಿದಂತೆ ಇನ್ನೂ ಹಲವು ವಿಚಾರಗಳ ಕುರಿತು ವಿಶೇಷವಾಗಿ ಬೆಳಕು ಚೆಲ್ಲಿದೆ. ವಿಶೇಷಾಂಕವನ್ನು ಕೊಂಡು ಓದುವ ಮೂಲಕ ಜನಪರ ಮಾಧ್ಯಮಕ್ಕೆ ಸಹಕಾರಿಯಾಗೋಣ ಎಂದು ಹೇಳಿದರು.

ಪ್ರಸ್ತುತ ಮಾಧ್ಯಮ ಸಂಸ್ಥೆಗಳು ಕೇವಲ ಟಿಆರ್‌ಪಿಗೋಸ್ಕರ ಕಾರ್ಯನಿರ್ವಹಿಸುತ್ತಿರುವುದು ವಿಷಾದಕರ ಸಂಗತಿ. ಇದರ ನಡುವೆ ಬಡವರ ಬದುಕು, ಶೋಷಿತರ ಬವಣೆಯನ್ನು ಕುರಿತು ಸಮಾಜದ ಮುಖ್ಯವಾಹಿನಿಗೆ ತಂದು ದಲಿತರು, ಅಲ್ಪಸಂಖ್ಯಾತರು, ರೈತರ ದನಿಯಾಗುತ್ತಿರುವ ಈ ದಿನ ಡಾಟ್ ಕಾಮ್ ಮಾಧ್ಯಮಕ್ಕೆ ನಾವೆಲ್ಲರೂ ಸಹಕರಿಸೋಣ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್ ವಿ ಮಂಜುನಾಥ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮುಖ್ಯವಾಹಿನಿ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದಾಗ, ಚಳವಳಿಗಳಿಂದ ಬಂದಂತಹ ಜನರಿಗೆ ಅವರ ವಿಚಾರಗಳಿಗೆ ಸೂಕ್ತವಾದ ಮನ್ನಣೆ ಸಿಗದಿದ್ದಾಗ ಅನೇಕ ಹೋರಾಟಗಾರರು ಸೇರಿ ಹುಟ್ಟು ಹಾಕಿದ ಮಾಧ್ಯಮವೇ ಈ ದಿನ.ಕಾಮ್ ಎಂದು ಮಾಹಿತಿ ನೀಡಿದರು.
ರೈತ ಹೋರಾಟಗಾರ ಬಡಗಲಪುರ ನಾಗೇಂದ್ರ, ದಲಿತ ಹೋರಾಟಗಾರರಾದ ಗುರುಪ್ರಸಾದ್ ಕೆರಗೋಡು ಸೇರಿದಂತೆ ಅನೇಕ ಹೋರಾಟಗಾರರು ಕೈಜೋಡಿಸಿ ಕಟ್ಟಿದ ಸಂಸ್ಥೆಯೇ ಈ ದಿನ.ಕಾಮ್. ಸಂಸ್ಥೆ ಪ್ರಾರಂಭಗೊಂಡು ಎರಡು ವರ್ಷವಾಗಿದೆ. ಇಂದು ಕರ್ನಾಟಕದ ಅತ್ಯಂತ ದೊಡ್ಡ ಡಿಜಿಟಲ್ ಮಾಧ್ಯಮವಾಗಿ ಈ ಸಂಸ್ಥೆ ಬೆಳೆದಿದೆ. 3 ಲಕ್ಷ ಚಂದಾದಾರರು ಪ್ರತಿ ದಿನ ಸುದ್ದಿಯನ್ನು ವೀಕ್ಷಿಸುತ್ತಿದ್ದಾರೆ. ದಲಿತರು, ಮಹಿಳೆಯರು, ಕಾರ್ಮಿಕರು ಮತ್ತು ರೈತ ಹೋರಾಟಗಾರರು ಸೇರಿದಂತೆ ಅನೇಕ ಹೋರಾಟಗಾರರ ಮುಖೇನ ರಾಜ್ಯಾದ್ಯಂತ ದೊಡ್ಡ ನೆಟ್‍ವರ್ಕ್ ಹೊಂದಿದೆ ಎಂದು ಬಣ್ಣಿಸಿದರು.
ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳು ಇವತ್ತಿನ ದಿನಗಳಲ್ಲಿ ಕೆಲ ವಿಚಾರಗಳ ಪ್ರಾಮಾಣಿಕತೆ ಕುಸಿಯುತ್ತಿರುವುದು ಬೇಸರದ ಸಂಗತಿಯಾಗಿದೆ. ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳು ಉಳ್ಳವರಿಗಾಗಿಯೇ ಒಳಗೊಂಡರೆ ದುಡಿಯುವ ವರ್ಗದ ಜನರ ಜೀವನಮಟ್ಟ ಸುಧಾರಣೆಯಾಗದು. ಈಗಿನ ವ್ಯವಸ್ಥೆಯಲ್ಲಿ ಮಾಧ್ಯಮಗಳು ಸತ್ಯದ ಕಡೆಗೆ ನಿಲ್ಲಬೇಕಿದೆ. ಮಾಧ್ಯಮಗಳು, ಹೋರಾಟಗಾರರು ಆಡಳಿತ ಸರಕಾರದ ವಿರೋಧ ಪಕ್ಷಗಳಂತೆ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಇಂದು ರೈತರ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಬೆಂಗಳೂರಿನ ಸುತ್ತಮುತ್ತಲಿನಲ್ಲಿ ಕೃಷಿ ಭೂಮಿಯನ್ನು ಕದಿಯುವ ಕೆಲಸವಾಗುತ್ತಿದೆ. ರೈತನ ಜೀವನಕ್ಕೆ ಆಧಾರವಾಗಿರುವ ಕೃಷಿ ಭೂಮಿಯನ್ನು ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ದೀನ ದಲಿತರು, ರೈತರು, ಕಾರ್ಮಿಕರು, ಮಹಿಳೆಯರು, ಮಕ್ಕಳು ಮತ್ತು ಕನ್ನಡ ಭಾಷೆ ಸೇರಿದಂತೆ ಅನೇಕ ವಿಚಾರಗಳ ಕುರಿತು ಕಳೆದ 50 ವರ್ಷದ ಪ್ರಮುಖ ಘಟನಾವಳಿಗಳ ಕುರಿತು ಜನರ ಮುಂದೆ ತೆರೆದಿಡಲು ಈ ದಿನ.ಕಾಮ್ ವಿಶೇಷ ಸಂಚಿಕೆಯನ್ನು ಹೊರ ತಂದಿರುವುದು ಉತ್ತಮ ಬೆಳೆವಣಿಗೆ ಎಂದರು.
ದಲಿತ ಮುಖಂಡ ಸುಧಾ ವೆಂಕಟೇಶ್ ಮಾತನಾಡಿ, ದೇಶದಲ್ಲಿ ಇಂದು ಅನೇಕ ಮಾಧ್ಯಮಗಳಿವೆ. ಅವು ಎತ್ತ ಕಡೆ ಸಾಗುತ್ತಿವೆ ಎಂಬುದನ್ನೂ ಕೂಡಾ ನಾವೆಲ್ಲ ಕಾಣುತ್ತಿದ್ದೇವೆ. ಸತ್ಯ, ಪ್ರಾಮಾಣಿಕತೆಯ ಹಿನ್ನೆಲೆಯಲ್ಲಿ ಮಾಧ್ಯಮಗಳು ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಈದಿನ ಸಂಚಿಕೆ ಕುರಿತು ವಿಶೇಷ ಉಪನ್ಯಾಸ ನೀಡಿದ ಕಸಾಪ ಜಿಲ್ಲಾಧ್ಯಕ್ಷ ಕೋ.ಡಿ ರಂಗಪ್ಪ ಮಾತನಾಡಿ, ಉನ್ನತ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣದ ಕುರಿತು ಸರ್ಕಾರದಿಂದಲೇ ಬಂದಿರುವ ವರದಿಯ ಪ್ರಕಾರ, ಕರ್ನಾಟಕದ 48,000 ಶಾಲೆಗಳಲ್ಲಿ ಕೇವಲ 10, 12, 13 ಮಂದಿ ಮಕ್ಕಳಿದ್ದಾರೆ. ಈ ಹಿನ್ನೆಲೆಯಲ್ಲಿ ಗೊ.ರು ಚನ್ನಬಸಪ್ಪನವರು ಒಂದೇ ಮಗು ಇದ್ದರೂ ಕೂಡಾ ಶಾಲೆಯನ್ನು ಮುಚ್ಚಬೇಡಿ ಎಂದು ಹೇಳಿದ್ದಾರೆ. ಅವರ ಭಾವನಾತ್ಮಕ ಕಳಕಳಿಗೆ ಅಭಿನಂದನೀಯ. ಆದರೆ ಒಂದು ಮಗುವಿಗೆ ಶಾಲೆ ನಡೆಸಿ ಆ ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲ. ಹತ್ತು ಮಂದಿ ಇದ್ದರೂ ಆಗುವುದಿಲ್ಲ. ಪ್ರಸ್ತುತ ನಮ್ಮ ಜಿಲ್ಲೆಯಲ್ಲಿ 42 ವಸತಿ ಶಾಲೆಗಳಿದ್ದು, ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆಯಿಲ್ಲದಂತೆ ಶೇ.100ರಷ್ಟು ಫಲಿತಾಂಶ ಬರುತ್ತಿದೆ ಎಂದರು.
ಈ ದಿನ ಡಾಟ್ ಕಾಮ್ ಪ್ರಾರಂಭಗೊಂಡು ಎರಡು ವರ್ಷ ಕಳೆದಿದೆ. ಈಗಾಗಲೇ ಈ ಮಾಧ್ಯಮಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದು ಚಿಕ್ಕಬಳ್ಳಾಪುರದಲ್ಲಿ ಗಣ್ಯರಿಂದ ಈ ದಿನ ಡಾಟ್ ಕಾಮ್ ವಿಶೇಷ ಸಂಚಿಕೆ ಬಿಡುಗಡೆಯಾಗಿದೆ. ಓದುಗರು ಅದನ್ನು ಕೊಂಡು ಓದುವ ಮೂಲಕ ಈ ದಿನ.ಕಾಮ್ ಮಾಧ್ಯಮವನ್ನು ಬೆಂಬಲಿಸಬೇಕು ಹಾಗೂ ತಮ್ಮ ಮೊಬೈಲ್‌ನಲ್ಲಿ ಈ ದಿನ ಡಾಟ್ ಕಾಮ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು, ನಿತ್ಯದ ಸುದ್ದಿಗಳನ್ನು ಆ್ಯಪ್‌ನಲ್ಲಿಯೇ ಓದಬಹುದು ಎಂದು ತಿಳಿಸಿದರು.
1954 ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಂತಹ ಕೆ ಕಾಮರಾಜ್ ನಾಡನ್ ಅವರು ಶಿಕ್ಷಣದ ಕುರಿತು ದೂರದೃಷ್ಟಿ ಉಳ್ಳವರಾಗಿದ್ದರು. ಅವರು ಹೆಚ್ಚು ಓದಿರಲಿಲ್ಲ. ಆದರೆ ಅಧಿಕವಾಗಿ ತಿಳಿದುಕೊಂಡಿದ್ದರು. ಒಮ್ಮೆ ತಮಿಳುನಾಡಿನಲ್ಲಿ ಎಲ್ಲ ಜಾತಿಯ ಜನರೂ ವೈದ್ಯರ ಹುದ್ದೆಗೆ ಅರ್ಜಿ ಹಾಕಿರುತ್ತಾರೆ. ಕಾರ್ಯದರ್ಶಿಗಳು ಸಹಿ ಹಾಕಿಸಲೆಂದು ಅರ್ಜಿಗಳನ್ನು ಸಿಎಂ ಅವರಿಗೆ ನೀಡಿದಾಗ ಅವುಗಳಲ್ಲಿ ಬರೀ ನಂಬೂದರಿಗಳು ಸೇರಿದಂತೆ ಮೇಲ್ಜಾತಿಗಳ ಅರ್ಜಿಗಳೇ ಇರುತ್ತವೆ. ಇದನ್ನು ಗಮನಿಸಿದ ಸಿಎಂ ಕಾಮರಾಜ್ ಅವರು, ʼಉಳಿದವರು ಅರ್ಜಿ ಸಲ್ಲಿಸಿಲ್ಲವೇʼ ಎಂದು ಕೇಳುತ್ತಾರೆ. ಸಲ್ಲಿದ್ದಾರೆ ಆದರೆ ಅಷ್ಟು ಅಂಕಗಳು ಬಂದಿಲ್ಲವೆಂದು ತಿಳಿಸಿದಾಗ. ಹೆಚ್ಚು ಅಂಕ ಬಂದಿಲ್ಲವೆಂದರೆ ಇದರರ್ಥವೇನು? ಹಿಂದುಳಿದವರ ಹಿನ್ನೆಲೆ ಏನು? ಮೇಲ್ಜಾತಿಗಳ ಹಿನ್ನೆಲೆ ಏನು? ಎಂಬುದನ್ನು ಮರುಪರಿಶೀಲನೆ ಮಾಡುವಂತೆ ತಿಳಿಸಿ, ಬಳಿಕ ಹಿಂದುಳಿದವರಿಗೆ ಮತ್ತು ಮೇಲ್ವರ್ಗದವರಿಗೆ ಶೇಕಡಾವಾರು ಅಂಕಗಳನ್ನು ಹಂಚಿಕೆ ಮಾಡಲಾಗುತ್ತದೆ. ಈ ಮೂಲಕ ಎಲ್ಲ ಜಾತಿ ವರ್ಗದವರಿಗೂ ಉದ್ಯೋಗಗಳು ದೊರೆಯುವಂತೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಜಿಪಂ ಮಾಜಿ ಸದಸ್ಯ ರಾಜೀಕಾಂತ್, ಸಿಐಟಿಯು ಜಿಲ್ಲಾಧ್ಯಕ್ಷೆ ಲಕ್ಷ್ಮೀದೇವಮ್ಮ, ಸಾಮಾಜಿಕ ಹೋರಾಟಗಾರ ಶಶಿರಾಜ್ ಹರತಲೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಗಂಗಪ್ಪ ನಗರಗೆರೆ, ಜಿ ವಿ ಗಂಗಪ್ಪ, ದಸಂಸ ಸಾಂಸ್ಕೃತಿಕ ಸಂಚಾಲಕ ಬಿ ವಿ ಆನಂದ್, ರಂಗಕರ್ಮಿ ಗ.ನ ಅಶ್ವತ್ಥ್, ಕಾಂಗ್ರೆಸ್ ಮುಖಂಡ ಮುನೇಗೌಡ, ಎ ಟಿ ಕೃಷ್ಣನ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ರವಿಕುಮಾರ್, ಹಿರಿಯ ಪತ್ರಕರ್ತ ಮುನಿರಾಜು ಅರಕೆರೆ, ನಾರಾಯಣಸ್ವಾಮಿ, ಗ್ರೀನ್ ಥಾಟ್ಸ್ ಫೌಂಡೇಶನ್‌ನ ಕಲ್ಯಾಣ್, ಹಳ್ಳಿ ಮಕ್ಕಳ ಸಂಘದ ವೆಂಕಟಮಣಪ್ಪ, ಕೆಂಪೇಗೌಡ, ಸುನಿಲ್ ಮುಳ್ಳಹಳ್ಳಿ, ರೈತ ಸಂಘದ ಸೋಮನಾಥ, ಡಿಎಸ್‌ಎಸ್‌ನ ಭಾಗ್ಯಮ್ಮ, ನಗರಸಭೆ ಮಾಜಿ ಸದಸ್ಯ ಶ್ರೀನಿವಾಸ್, ವೆಂಕಟೇಶ್, ಈದಿನ ಕೇಂದ್ರ ಸಂಯೋಜಕ ಅನಿಲ್ ಕುಮಾರ್ ಚಿಕ್ಕದಳವಟ್ಟ, ಈದಿನ ಜಿಲ್ಲಾ ವರದಿಗಾರ ವಿಜಯ್ ಕುಮಾರ್ ಜಿ ಆರ್ ಸೇರಿದಂತೆ ರೈತಪರ ಸಂಘಟನೆ, ಕನ್ನಡಪರ ಸಂಘಟನೆ ಹಾಗೂ ದಲಿತಪರ, ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಇತರರು ಹಾಜರಿದ್ದರು.












