ಗ್ರಾಮ ಪಂಚಾಯತಿ ಅಧ್ಯಕ್ಷೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಯು ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲುಕಿನ ರಾಶ್ಚರುವು ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
ರಾಶ್ಚರುವು ಗ್ರಾಮ ಪಂಚಾಯತಿ ಅಧ್ಯಕ್ಷೆ ಚೇಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರ ದೂರಿನ ಆಧಾರದ ಮೇಲೆ ಗ್ರಾಮ ಪಂಚಾಯತಿಯ ಆರೋಪಿ ಪಿಡಿಒ ಅಶೋಕ್, ಸದಸ್ಯರಾದ ನಾಗೇಶ್, ಬಾಬುರೆಡ್ಡಿ ವಿರುದ್ಧ ಅಸಭ್ಯ ವರ್ತನೆ ಮತ್ತು ಜಾತಿ ನಿಂದನೆ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಪಿಡಿಒ ಅಶೋಕ್ ಗ್ರಾಮ ಪಂಚಾಯತಿ ಅಧ್ಯಕ್ಷೆಗೆ ಸಾರ್ವಜನಿಕವಾಗಿ ‘ಐ ಎಲ್ ಯು’ ಎಂದು ಹೇಳಿದ್ದು, ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ, ಅಧ್ಯಕ್ಷೆ ಮತ್ತು ಪಂಚಾಯತಿಯ ಇತರ ಸದಸ್ಯೆಯರ ಗಂಡಂದಿರಿಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಕ್ರಮ ಕಾಮಗಾರಿಗಳಿಗೆ ಸಹಿ ಹಾಕದ ಕಾರಣ ತಮ್ಮ ಜಾತಿ ನಿಂದನೆ ಮಾಡಿ, ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.