ಚಿಂತಾಮಣಿ ನಗರ ಪೊಲೀಸ್ ಠಾಣಾ ಸರಹದ್ದು ವ್ಯಾಪ್ತಿಯ ಕೀರ್ತಿನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಪೊಲೀಸರು ಅರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, 5 ಕೆಜಿ 720 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿ ಶಬಾನ ತನ್ನ ಮನೆಯಲ್ಲಿಯೇ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಠಾಣೆಯ ಸಿಬ್ಬಂದಿಗಳು ಕೀರ್ತಿ ನಗರದ ಶಬಾನ ಅವರ ಮನೆಯ ಬಳಿ ಹೋಗಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆಕೆಯು ಅಕ್ರಮವಾಗಿ ಮಾರಾಟ ಮಾಡಲು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ ಸುಮಾರು 5 ಕೆಜಿ 720 ಗ್ರಾಂ ಗಾಂಜಾ(ಅಂದಾಜು ಬೆಲೆ ₹1.5 ಲಕ್ಷ)ವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಟ, ದಾಸ್ತಾನು ಮತ್ತು ಸಾಗಾಣಿಕೆಯನ್ನು ನಿಯಂತ್ರಿಸಬೇಕೆಂದು ಪೊಲೀಸ್ ಅಧೀಕ್ಷಕ ಕುಶಾಲ್ ಚೌಕ್ಸೆಯವರು ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದರು. ಅದರಂತೆ ಅಪರ ಪೊಲೀಸ್ ಉಪಾಧೀಕ್ಷಕ ರಾಜ ಇಮಾಮ್ ಕಾಸಿಂ ಪಿ ಹಾಗೂ ಚಿಂತಾಮಣಿ ಉಪವಿಭಾಗ ಉಪಾದೀಕ್ಷಕ ಮುರಳೀಧರ ಪಿ ನೇತೃತ್ವದಲ್ಲಿ ಠಾಣಾ ಮಟ್ಟದಲ್ಲಿ ವಿಶೇಷ ತಂಡಗಳನ್ನು ರಚನೆ ಮಾಡಿ, ಠಾಣಾ ಸರಹದ್ದಿನಲ್ಲಿ ಆಕ್ರಮವಾಗಿ ಮಾರಾಟ, ಸಾಗಾಣಿಕೆ, ದಾಸ್ತಾನು ಮಾಡಿರುವಂತ ಮಾದಕವಸ್ತುಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ಕ್ರಮವಹಿಸುವಂತೆ ಸೂಚನೆ ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಕಳಪೆ ಪಡಿತರ ವಿತರಣೆ; ಬಿಸಿಯೂಟದ ಅಕ್ಕಿ, ಗೋದಿ, ಬೇಳೆ ಚೀಲಗಳಲ್ಲಿ ಜಡೆಗಟ್ಟಿದ ಹುಳುಗಳು
ಚಿಂತಾಮಣಿ ನಗರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಈಗಾಗಲೇ ಎನ್‌ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿರುವ ಆಸಾಮಿಗಳ ಮೇಲೆ ನಿಗಾ ಇಟ್ಟಿದ್ದರು. ಇದರ ಬೆನ್ನಲ್ಲೇ ಫೆಬ್ರವರಿ 11ರ ಬೆಳಿಗ್ಗೆ 11ಕ್ಕೆ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ನಾರಾಯಣಸ್ವಾಮಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ವಿಚಾರವನ್ನು ಮೇಲಧಿಕಾರಿಗಳಿಗೆ ತಿಳಿಸಿ ಅವರ
ಮಾರ್ಗದರ್ಶನ ಪಡೆದು ಕಾರ್ಯಾಚರಣೆ ಆರಂಭಿಸಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.