ಬಾರ್‌ನಲ್ಲಿ ಮದ್ಯ ಸೇವನೆ ಮಾಡಿರುವ ಬಿಲ್ ಪಾವತಿಸಿರುವುದಿಲ್ಲವೆಂಬ ಹಳೆಯ ವಿಚಾರಕ್ಕಾಗಿ ನಡೆದಿದ್ದ ಗಲಾಟೆಯಲ್ಲಿ, ಓರ್ವನ ಕೊಲೆ ಪ್ರಕರಣ ಸಂಬಂಧ ವರದಿಯಾದ 6 ತಾಸುಗಳೊಳಗೆ, ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಚಿಕ್ಕಬಳ್ಳಾಪುರ ಪೊಲೀಸ್ ತನಿಖಾ ತಂಡ ಯಶಸ್ವಿಯಾಗಿದೆ.
ಮದ್ಯ ಸೇವಿಸಿದ ಮತ್ತಿನಲ್ಲಿ ಹಳೆಯ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದು, ಬಿಯರ್ ಬಾಟಲಿಯಿಂದ ಹೊಡೆದು ಮಾರುತೇಶ್ ಎಂಬಾತನ್ನು ಕೊಲೆ ಮಾಡಿದ್ದರು. ಪ್ರಕರಣದ ವರದಿಯಾಗುತ್ತಿದ್ದಂತೆ ಕಾರ್ಯನಿರ್ವಹಿಸಿದ ಚಿಕ್ಕಬಳ್ಳಾಪುರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿನೋದ್ ಗೌಡ ಡಿ(22) ಮತ್ತು ಅಭಿಷೇಕ್(19) ಬಂಧಿತ ಆರೋಪಿಗಳು. ವಿನೋದ್ ಗೌಡ ಹಾರೊಬಂಡೆ ಗ್ರಾಮದವನಾಗಿದ್ದು, ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಅಭಿಷೇಕ್ ಶಿಡ್ಲಘಟ್ಟ ತಾಲೂಕಿನ ಕೆ ಜಿ ಪುರ ಗ್ರಾಮದವನಾಗಿದ್ದು, ಚಾಲಕ ವೃತ್ತಿ ಮಾಡುತ್ತಿದ್ದನು.
“ಪ್ರಕರಣದ ತನಿಖೆ ಮುಂದುವರೆದಿದ್ದು, ಆರೋಪಿಗಳು ಕೃತ್ಯಕ್ಕೆ ಬಸಿದ ಮೊಬೈಲ್ ಫೋನ್ ಹಾಗೂ ಕೃತ್ಯವೆಸಗಿದ ನಂತರ ಪರಾರಿಯಾಗಲು ಬಳಕೆ ಮಾಡಿರುವ ದ್ವಿಚಕ್ರ ವಾಹನವನ್ನು ವಶಕ್ಕೆ ತೆಗೆದುಕೊಳ್ಳಬೇಕಾಗಿದೆ. ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ಕರ್ತವ್ಯ ಪ್ರಶಂಸನೀಯ” ಎಂದು ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.
ಘಟನೆ ಹಿನ್ನೆಲೆ
ಚಿಕ್ಕಬಳ್ಳಾಪುರ ತಾಲೂಕು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಾರೊಬಂಡೆ ಗ್ರಾಮದ ನಿವಾಸಿ ಮಾರುತೇಶ್ ಎಂಬಾತ ಪ್ಲಂಬರ್
ಮತ್ತು ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದು, ಜನವರಿ 29ರ ಸಮಂಜೆ 5ರ ಸುಮಾರಿಗೆ ಕೆಲಸದ ನಿಮಿತ್ತ ತನ್ನ ಬಾಬತ್ತು ಕೆಎ-40 ಇಎಚ್-1432 ಹೀರೋ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರಟಿದ್ದು, ಪುನಃ ವಾಪಸ್ ಬಾರದಿರುವ ಕಾರಣ ಈತನ ಕುಟುಂಬಸ್ಥರು ಎಲ್ಲ ಕಡೆ ಹುಡುಕಾಡಿದ್ದರೂ ಸುಳಿವು ಸಿಕ್ಕಿರಲಿಲ್ಲ.
ಜನವರಿ 31ರ ಮಧ್ಯಾಹ್ನ 3ರ ಸಮಯದಲ್ಲಿ ಹಾರೊಬಂಡೆ ಗ್ರಾಮದ ಬಳಿಯಿರುವ ಕಾಶಿನಾಥ್ ಎಂಬುವವರಿಗೆ ಸೇರಿದ ಲೇಔಟ್‌ನಲ್ಲಿ
ಕೊಲೆಯಾಗಿ ಮೃತಪಟ್ಟಿರುವುದು ಕಂಡುಬಂದಿತ್ತು. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ
ಮೊ.ಸಂ.21/2025 ಕಲಂ: 103(1) ಬಿಎನ್‌ಎಸ್-2023 ರೀತ್ಯಾ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಮನುಸ್ಮೃತಿ ಅನುಷ್ಠಾನಕ್ಕೆ ಯತ್ನಿಸುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ಬಂಧಿಸಿ: ಕೆಎಸ್‌ಡಿಎಸ್‌ಎಸ್
ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಅಪರ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ರಾಜಾ ಇಮಾಮ್ ಕಾಸೀಮ್ ಮತ್ತು ಮಾನ್ಯ ಪೊಲೀಸ್ ಉಪಾಧೀಕ್ಷಕ ಎಸ್ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ತನಿಖಾ ತಂಡಗಳನ್ನು ರಚಿಸಿದ್ದು, ತನಿಖಾಧಿಕಾರಿಗಳು ಕೊಲೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ಮಾರುತೇಶ್ ಮತ್ತು ಆರೋಪಿಗಳು ಜನವರಿ 29 ರ ರಾತ್ರಿ 8-30ರ ಸುಮಾರಿಗೆ ಹಾರೊಬಂಡೆ ಗ್ರಾಮದ ಬಳಿಯಿರುವ ಕಾಶಿನಾಥ್ ಅವರ ಲೇಔಟ್‌ನಲ್ಲಿ ಮದ್ಯಸೇವನೆ ಮಾಡುತ್ತಿದ್ದರು. ಈ ಮೊದಲು ಬಾರ್‌ನಲ್ಲಿ ಮದ್ಯ ಸೇವನೆ ಮಾಡಿರುವ ಬಿಲ್ ಪಾವತಿಸಿರುವುದಿಲ್ಲವೆಂಬ ಹಳೆಯ ವಿಚಾರಕ್ಕೆ ಮಾರುತೇಶ್ ಮತ್ತು ಎ1 ಆರೋಪಿ ವಿನೋದ್ ನಡುವೆ ಗಲಾಟೆ ನಡೆದಿದೆ. ಈ ವೇಳೆ ಎ2 ಆರೋಪಿ ಅಭಿಷೇಕ್ ಕೂಡಾ ಸೇರಿಕೊಂಡು ಬಿಯರ್ ಬಾಟಲಿಗಳಿಂದ ಮಾರುತೇಶ್ ತಲೆಯ ಹಿಂಭಾಗಕ್ಕೆ ಹೊಡೆದು ಗಾಯಪಡಿಸಿದ್ದು, ಬಿಯರ್ ಬಾಟಲಿಯ ಚೂಪಾದ ಭಾಗದಿಂದ ಅವನ ಗಂಟಲಿನ ಭಾಗಕ್ಕೆ ಚುಚ್ಚಿ, ಕತ್ತನ್ನು ಸೀಳಿ ಕೊಲೆ ಮಾಡಿರುವುದು ಆರೋಪಿಗಳ ವಿಚಾರಣೆ ವೇಳೆ ಮಾಹಿತಿ ತಿಳಿದುಬಂದಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಪ್ರಕಟಣೆ ಹೊರಡಿಸಿದೆ.