ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ನಂದಿ ಬೆಟ್ಟ, ಸ್ಕಂದಗಿರಿ ಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಆದೇಶ ಹೊರಡಿಸಿದ್ದಾರೆ.
ಭದ್ರತೆಯ ಕಾರಣಕ್ಕೆ ನಂದಿ ಬೆಟ್ಟ ಮತ್ತು ಸ್ಕಂದಗಿರಿ ಬೆಟ್ಟಗಳಿಗೆ ಸಾರ್ವಜನಿಕರ ಪ್ರವೇಶವನ್ನು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಕಲಂ 144(3)ರ ಅಡಿಯಲ್ಲಿ ನಿಷೇಧಿಸಲಾಗಿದೆ. ಜಿಲ್ಲೆಯ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ವ್ಯಾಪ್ತಿಯ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಚಿಕ್ಕಬಳ್ಳಾಪುರ ಡಿವೈಎಸ್ಪಿ ವಿ.ಕೆ ವಾಸುದೇವ್ ಸೂಚನೆ ನೀಡಿದ್ದಾರೆ.
ರಾಷ್ಟ್ರಪತಿಗಳ ಭದ್ರತೆಗಾಗಿ ಜಿಲ್ಲಾ ವರಿಷ್ಠಾಧಿಕಾರಿ ಡಿ.ಎಲ್ ನಾಗೇಶ್ ನೇತೃತ್ವದಲ್ಲಿ ಮೂವರು ಎಸ್ಪಿ, 10 ಮಂದಿ ಡಿವೈಎಸ್ಪಿ, 28 ಮಂದಿ ಇನ್ಸ್ಪೆಕ್ಟರ್ಗಳು, 60 ಮಂದಿ ಸಬ್ ಇನ್ಸ್ಪೆಕ್ಟರ್, 7 ಮಂದಿ ಡಿಎಆರ್ ತುಕಡಿ, ಮೂರು ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಒಟ್ಟು 700 ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಹೆಲಿಕಾಪ್ಟರ್ ಮೂಲಕ ಮುದ್ದೇನಹಳ್ಳಿಗೆ ಭೇಟಿ
ದ್ರೌಪದಿ ಮುರ್ಮು ಅವರು ದೆಹಲಿಯಿಂದ ಐಎಎಫ್ಎಂಐ-17 ವಿಶೇಷ ವಿಮಾನದ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಮಧ್ಯಾಹ್ನ 3.55ಕ್ಕೆ ಹೆಲಿಕಾಪ್ಟರ್ ಮೂಲಕ ಮುದ್ದೇನಹಳ್ಳಿಗೆ ತೆರಳುತ್ತಾರೆ.
ಈ ಸುದ್ದಿ ಓದಿದ್ದೀರಾ? ವಿಪಕ್ಷಗಳ ವಿರುದ್ಧ ಸುಳ್ಳು ಪ್ರಚಾರಕ್ಕೆ ಪ್ರಧಾನಿಯಿಂದ ಅಧಿಕಾರ ದುರ್ಬಳಕೆ: ರಾಷ್ಟ್ರಪತಿಗೆ ಸಚಿವ ದಿನೇಶ್ ಗುಂಡೂರಾವ್ ಪತ್ರ
ಮುದ್ದೇನಹಳ್ಳಿ ಬಳಿಯ ಸತ್ಯಸಾಯಿ ಯೂನಿವರ್ಸಿಟಿ ಫಾರ್ ಹ್ಯೂಮನ್ ಎಕ್ಸಲೆನ್ಸ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗಿಯಾಗಲಿದ್ದಾರೆ.
ಘಟಿಕೋತ್ಸವದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಪ್ರೊ. ಅಜಯ್ ಕೆ ಸೂದ್, ಸಂಗೀತ ಮತ್ತು ಕಲೆ ವಿಭಾಗದಲ್ಲಿ ಡಾ. ಆರ್ ಕೆ ಪದ್ಮನಾಭ, ಕ್ರೀಡೆ ಮತ್ತು ದೇಹದಾರ್ಢ್ಯತೆ ವಿಭಾಗದಲ್ಲಿ ಪುಲ್ಲೇಲ ಗೋಪಿಚಂದ್, ಆರೋಗ್ಯ ವಿಭಾಗದಲ್ಲಿ ಡಾ ಪ್ರತಿಮಾ ಮೂರ್ತಿ, ಶಿಕ್ಷಣ ವಿಭಾಗದಲ್ಲಿ ಪ್ರೊ ವಿಜಯ್ ಶಂಕರ್ ಶುಕ್ಲಾ, ಸಮಾಜಸೇವೆ ವಿಭಾಗದಲ್ಲಿ ತುಳಸಿಗೌಡ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ.