ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಮತದಾರರಿಗೆ ಹಣ ಹಂಚಲು ಜನವರಿ ತಿಂಗಳಲ್ಲೇ ₹400 ಕೋಟಿ ನಕಲಿ ನೋಟುಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಕ್ಷೇತ್ರದ ಮತದಾರರು ಹಣ ಪಡೆಯುವಾಗ ನೋಟುಗಳನ್ನು ಪರಿಶೀಲಿಸಿ ಹಣ ಪಡೆಯಿರಿ ಎಂದು ಪಕ್ಷೇತರ ಅಭ್ಯರ್ಥಿ ಭಾಸ್ಕರ್ ಅಂಕಾಲಮಡಗು ಶಿವರೆಡ್ಡಿ ಮತದಾರರನ್ನು ಎಚ್ಚರಿಸಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಡಾಲರ್ ಬಾಯ್ಸ್ ಮತ್ತು ಗೋಲ್ಡನ್ ಸ್ಪೂನ್ ಆಗಿದ್ದಾರೆ. ಅವರಿಗೆ ಸಾಮಾನ್ಯ ಜನರ ಕಷ್ಟಗಳ ಬಗ್ಗೆ ಅರಿವಿಲ್ಲ. ಕ್ಷೇತ್ರದ ಜನರ ಕೂಗು, ಅಗತ್ಯತೆಗಳ ಕುರಿತು ತಿಳಿದಿಲ್ಲ. ಅವರಿಗೆ ಲೂಟಿ ಮಾಡುವುದು ಮತ್ತು ಕಬಳಿಸುವುದು ಮಾತ್ರ ತಿಳಿದಿದೆ” ಎಂದು ವಾಗ್ದಾಳಿ ನಡೆಸಿದರು.
ಕೆ ಸುಧಾಕರ್ ಜಂಪಿಂಗ್ ಜಪಾಂಗ್, ರಕ್ಷಾ ರಾಮಯ್ಯ ಅಮೂಲ್ ಬೇಬಿ: “ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿ(ಜಂಪಿಂಗ್ ಜಪಾಂಗ್), ರಕ್ಷಾ ರಾಮಯ್ಯ(ಅಮೂಲ್ ಬೇಬಿ) ಬಿಸಿನೆಸ್ ಮಾಡಲು ಯೋಗ್ಯ” ಎಂದು ವ್ಯಂಗ್ಯವಾಡಿದರು.
“ಕ್ಷೇತ್ರದ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಜನಸೇವೆ ಮಾಡಲು ಅನರ್ಹರು. ಹಾಗಾಗಿ ಚಿಕ್ಕಬಳ್ಳಾಪುರ-ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿದ್ದೇನೆ. ಸಾಮಾನ್ಯ ರೈತ ಕುಟುಂಬದಿಂದ ಬಂದಿರುವ, ಜನರ ಕಷ್ಟಗಳನ್ನು ಅರಿತಿರುವ ನನಗೆ ನಿಮ್ಮ ಅಮೂಲ್ಯ ಮತ ನೀಡಿ, ಜನ ಸೇವೆ ಮಾಡುವ ಅವಕಾಶ ಕೊಡಿ” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಹಿಂದುತ್ವವಾದಿ ಕಾರ್ಯಕರ್ತರ ಅನೈತಿಕ ಪೊಲೀಸ್ ಗಿರಿ; ಲಾರಿ ಚಾಲಕನ ಮೇಲೆ ಹಲ್ಲೆ
“ಜನಾಶೀರ್ವಾದದಿಂದ ನಾನು ಗೆದ್ದರೆ ಬಿಪಿಎಲ್ ಕುಟುಂಬಗಳ ಸಾಲಮನ್ನಾ ಮಾಡಿಸುತ್ತೇನೆ” ಎಂದು ಭರವಸೆ ನೀಡಿದರು.
“ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಮಾತಿನಂತೆ ಸಾಮಾನ್ಯರ, ಬಡವರ ಸಮಸ್ಯೆಗಳನ್ನು ಪರಿಹರಿಸಲು ಸಾಮಾನ್ಯರಿಗೆ ಮಾತ್ರವೇ ಸಾಧ್ಯ. ಹಾಗಾಗಿ ನನಗೆ ಮತ ನೀಡಿ” ಎಂದು ಮನಯಾಚನೆ ಮಾಡಿದರು.
