ಮಾಜಿ ಸಚಿವ ಸುಧಾಕರ್ ಅವರು ಹಲವು ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿ, ಕಿರುಕುಳ ಕೊಟ್ಟಿದ್ದಾರೆ. ಇದರಿಂದ ನಮ್ಮ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಹಾಗಾಗಿ ನನ್ನೊಂದಿಗೆ ಹಲವು ಕಾರ್ಯಕರ್ತರು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ ಎಂದು ಮಾಜಿ ಶಾಸಕ ಕೆ ಪಿ ಬಚ್ಚೇಗೌಡ ಹೇಳಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ಈ ಹಿಂದೆ ಸುಧಾಕರ್ ಸಚಿವರಾಗಿದ್ದಾಗ ನಮ್ಮ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ನಮ್ಮ ನಾಯಕ ಕುಮಾರಸ್ವಾಮಿ ಅವರ ಸೋಲಿಗೂ ಅವರೇ ಪ್ರಮುಖ ಕಾರಣ. ಕುಮಾರಸ್ವಾಮಿ ಅವರು ಕ್ಷಮಿಸಿರಬಹುದು. ಆದರೆ ನಾವು ಕ್ಷಮಿಸಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಸುಧಾಕರ್‌ಗೆ ಮತ ನೀಡುವುದಿಲ್ಲ. ಅವರಿಗೆ ಮತ್ತೊಮ್ಮೆ ಮತ ನೀಡಿ ಕಿರುಕುಳ ಅನುಭವಿಸಲು ನಾವು ತಯಾರಿಲ್ಲ” ಎಂದು ಬೇಸರದಿಂದ ನುಡಿದರು.
“ಇದೇ ಕಾರಣಕ್ಕೆ ಪಕ್ಷದ ಹಲವು ಸಭೆಗಳಲ್ಲಿ ನಾನು ಭಾಗವಹಿಸಲಿಲ್ಲ. ವರಿಷ್ಠ ದೇವೇಗೌಡರು ಸುಧಾಕರ್‌ಗೆ ಟಿಕೆಟ್ ಸಿಗುವುದಿಲ್ಲ ಎಂದಿದ್ದರು. ಆದರೆ ಈಗ ಅವರ ಮಾತು ಸುಳ್ಳಾಗಿದೆ. ಆದ ಕಾರಣ ನಮಗೆ ಸುಧಾಕರ್ ಗೆಲ್ಲಿಸಲು ಮನಸಿಲ್ಲ. ಸಭೆಯಲ್ಲಿ ನಮ್ಮ ಕಾರ್ಯಕರ್ತರ ತೀರ್ಮಾನದಂತೆ ನಾವು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಯೋಜನೆ ಇದೆ” ಎಂದು ತಿಳಿಸಿದರು.
“ಮೈತ್ರಿ ಅಭ್ಯರ್ಥಿ ಈವರೆಗೂ ನಮ್ಮನ್ನು ಭೇಟಿ ಮಾಡಿಲ್ಲ. ಕಾಂಗ್ರೆಸ್ ಅಭ್ಯರ್ಥಿ ನಮ್ಮನ್ನು ಭೇಟಿ ಮಾಡಿ ಸಹಕಾರ ಕೋರಿದ್ದಾರೆ. ಅವರಿಗೆ ನಮ್ಮ ಸಹಕಾರ ನೀಡುತ್ತೇವೆ. ಆದರೆ, ಸುಧಾಕರ್ ಉದ್ಧಟತನ ತೋರಿದ್ದಾರೆ. ಅಂತಹವರಿಗೆ ನಾವು ಯಾವುದೇ ಕಾರಣಕ್ಕೂ ಬೆಂಬಲ ಕೊಡುವುದಿಲ್ಲ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ-ಚಿಕ್ಕಮಗಳೂರು ಸೇರಿದಂತೆ 14 ಕ್ಷೇತ್ರಗಳಲ್ಲಿ ಕೆಆರ್‌ಎಸ್ ಪಕ್ಷದಿಂದ ನಾಮಪತ್ರ ಸಲ್ಲಿಕೆ
“ಸ್ವಪಕ್ಷೀಯರಲ್ಲೇ ವಿರೋಧವಿದೆ. ಯಲಹಂಕ ಶಾಸಕ ವಿಶ್ವನಾಥ್ ಅವರ ಮನೆ ಬಾಗಿಲಿಗೆ ತೆರಳಿದರೂ ಬಾಗಿಲು ತೆರೆದಿಲ್ಲ. ಹೀಗಿರುವಾಗ ನಾವು ಬೆಂಬಲ ಕೊಡುವುದಿಲ್ಲ. ನಮಗೆ ಅಧಿಕಾರದ ಆಸೆ ಇಲ್ಲ. ಇಂದು ಪಕ್ಷ ಬಿಡುವ ಪರಿಸ್ಥಿತಿ ಬಂದಿದೆ. ಹಾಗಾಗಿ ಬಹಳ ನೋವಿನಿಂದ ಪಕ್ಷ ತೊರೆಯುತ್ತಿದ್ದೇವೆ” ಎಂದು ನೋವಿನಿಂದ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಜೆಡಿಎಸ್‌ನ ಹಲವು ಕಾರ್ಯಕರ್ತ ಮುಖಂಡರು ಇದ್ದರು.
