ಚಿಕ್ಕಬಳ್ಳಾಪುರ | ವಿವೇಕವಿಲ್ಲದ ನಡಿಗೆಗೆ ಪರಂಪರೆಯ ಸ್ಪರ್ಶವಾಗಬೇಕಿದೆ: ಗೊಲ್ಲಹಳ್ಳಿ ಶಿವಪ್ರಸಾದ್ ‌

Date:

Advertisements

ಸಾಂಸ್ಕೃತಿಕ ವಿಘಟನೆಯ ಕಾಲದಲ್ಲಿ ವಿವೇಕವಿಲ್ಲದ ನಡಿಗೆ ದೂರವಾಗಬೇಕಾದರೆ ಪರಂಪರೆಯ ಪಾದಸ್ಪರ್ಶವಾಗಬೇಕು ಎಂದು ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.

‌ಚಿಕ್ಕಬಳ್ಳಾಪುರ ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ 2023-24ನೇ ಸಾಲಿನ ಎನ್‌ಎಸ್‌ಎಸ್, ಕ್ರೀಡೆ ಮತ್ತು ಸಾಂಸ್ಕೃತಿಕ ಚಟವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

“ವರ್ತಮಾನದ ಸಮಾಜದಲ್ಲಿ ಹಿಂಸೆ ಮತ್ತು ಕ್ರೌರ್ಯಗಳೇ ಮೌಲ್ಯಗಳಾಗಿ ಚಲಾವಣೆ ಆಗುತ್ತಿರುವುದು ಆತಂಕಕಾರಿ ವಿಚಾರವಾದರೂ ನಾವು ನೀವು ಒಳ್ಳೆಯದನ್ನೇ ಬಿತ್ತೋಣ, ನೆಲಮೂಲ ಸಂಸ್ಕೃತಿ ಮರೆಯದಿರೋಣ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Advertisements

“ನನಗೆ ಸರ್ಕಾರಿ ಶಾಲೆ ಕಾಲೇಜು ಮಕ್ಕಳೆಂದರೆ ಇಷ್ಟ. ಏಕೆಂದರೆ ಇಲ್ಲಿ ನೆಲಮೂಲ ಸೊಗಡಿದೆ, ಮಾನವೀಯತೆಯ ಸ್ಪರ್ಶವಿದೆ, ಕಷ್ಟನಷ್ಟಗಳ ಕಥೆಯಿದೆ. ನಾವು ನಮಗಾಗಿ ಬದುಕುವುದು ದೊಡ್ಡದಲ್ಲ. ಇತರರಿಗಾಗಿ ಬದುಕುವುದು ದೊಡ್ಡದೆಂಬುದನ್ನು ಮರೆಯದಿರಿ” ಎಂದರು.

ಕ್ರೀಡೆ ಮತ್ತು ಸಾಂಸ್ಕೃತಿಕ ಚಟವಟಿಕೆ

“ಸರ್ಕಾರಿ ವ್ಯವಸ್ಥೆಯಲ್ಲಿ ಓದಿರುವ ಲಕ್ಷಾಂತರ ಮಂದಿ ಐಎಎಸ್, ಐಪಿಎಸ್ ಸೇರಿದಂತೆ ಅನೇಕ ಹುದ್ದೆಗಳಲ್ಲಿ ಇದ್ದಾರೆ‌, ಬದುಕು ಕಟ್ಟಿಕೊಂಡಿದ್ದಾರೆ, ಸಮಾಜಕ್ಕೆ ಮಾದರಿಯಾಗಿದ್ದಾರೆ. ಕೀಳರಿಮೆ ಬಿಟ್ಟು ಚೆನ್ನಾಗಿ ಓದಿದರೆ ನೀವೂ ಕೂಡ ಅವರಂತೆ ಆಗಬಹುದು. ದೇಹಕ್ಕೆ ಸಾವು ಬರಬಹುದು. ಆದರೆ ನಿಮ್ಮ ಸಾಧನೆಗೆ ಸಾವಿಲ್ಲದಂತಿರಲಿ” ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.

“ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ಯುವಸಮೂಹ ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್‌ಗೆ ದಾಸರಾಗಿ ತಮ್ಮತನವನ್ನು ಕಳೆದುಕೊಂಡಿದ್ದಾರೆ. ಇದನ್ನು ನೋಡಿದಾಗ ಮೊಬೈಲ್ ಕೈಲಿ ನಾವಿದ್ದೇವೋ, ನಮ್ಮ ಕೈಲಿ ಮೊಬೈಲಿದೆಯೋ ಎಂಬ ಅನುಮಾನ ಕಾಡುತ್ತಿದೆ” ಎಂದರು.

“ನಗರ, ಪಟ್ಟಣದ ವಿದ್ಯಾರ್ಥಿಗಳಿಗೆ ಪ್ರಕೃತಿಯ ಸ್ಪರ್ಷವೇ ಇಲ್ಲವಾಗಿದೆ. ಅವರೂ ಕೂಡ ನಮ್ಮ ಮಕ್ಕಳೇ ಅಲ್ಲವೆ ಎನಿಸಿದರೂ ಇಂತಹವರಿಂದ ದೇಶದ ಭವಿಷ್ಯ ಉಳಿಸಲು ಸಾಧ್ಯವೇ ಎಂದು ಅನುಮಾನ ಬರುತ್ತದೆ. ಇಂತಹ ಮಕ್ಕಳಿಗೆ ಅಜ್ಜ ಅಜ್ಜಿಯ ಸಂಬಂಧ, ಮಣ್ಣು, ಮಡಿಕೆ, ಕೆರೆ ಕುಂಟೆ, ನದಿ-ನಾಲೆಗಳ ಬಗ್ಗೆ ತಿಳಿಸಬೇಕಿದೆ. ಅಕ್ಕಿ, ರಾಗಿ, ಜೋಳ, ಅವರೆ, ತೊಗರಿ, ಕಡಲೆ ಹೇಗೆ ಬೆಳೆಯುತ್ತಾರೆ ಎನ್ನುವ ಬಗ್ಗೆ ತಿಳಿಸಬೇಕಿದೆ” ಎಂದರು.

“ಸಿನಿಮಾ ತಾರೆಯರನ್ನು ರೋಲ್ ಮಾಡೆಲ್‌ಗಳಾಗಿ ಮಾಡಿಕೊಳ್ಳದೆ ತಂದೆ ತಾಯಿಯನ್ನು ರೋಲ್‌ ಮಾಡೆಲ್‌ಗಳಾಗಿ ಮಾಡಿಕೊಳ್ಳಿ. ಸಾಧು ಸಂತ ಶರಣರು ಸಾರಿದ ಜೀವನ ಸಂದೇಶ ಅಳವಡಿಸಿಕೊಂಡು ಆರೋಗ್ಯವಂತ ಸಮಾಜ ಕಟ್ಟಲು ಮುಂದಾದರೆ ಒಳ್ಳೆಯ ಭವಿಷ್ಯ ನಿಮ್ಮದಾಗಲಿದೆ” ಎಂದು ವಿದ್ಯಾರ್ಥಿಗಳನ್ನು ಹಾರೈಸಿದರು.

ಕಾಲೇಜು ಶಿಕ್ಷಣ ಇಲಾಖೆಯ ರೂಸಾ ಕೋ-ಆರ್ಡಿನೇಟರ್ ಸುಮ ಮಾತನಾಡಿ, “ಬಹುತ್ವದ ಸಮಾಜದಲ್ಲಿ ನಂಬಿಕೆಯಿಟ್ಟಿರುವ ನಾನು ಜನ್ಮಕೊಟ್ಟ ತಂದೆ-ತಾಯಿಯನ್ನು ಆದರ್ಶವಾಗಿ ಕಂಡಿದ್ದೇನೆ. ನೀವೂ ಕೂಡ ಇದನ್ನೇ ಪಾಲಿಸಿ. ಕಾಲೇಜಿಗೆ ಬರುವ ಹೆಣ್ಣುಮಕ್ಕಳು ಮನೆಯ ಊಟಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಇದಾದಲ್ಲಿ ರಕ್ತಹೀನತೆ ದೂರವಾಗುತ್ತದೆ. ಪಠ್ಯಕ್ಕೆ ನೀಡುವಷ್ಟೇ ಮಹತ್ವ ಪಠ್ಯೇತರ ಚಟವಟಿಕೆಗಳಿಗೂ ನೀಡಬೇಕು. ಜತೆಗೆ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಗುರುಪರಂಪರೆ ಹೆಚ್ಚಾಗಬೇಕು” ಎಂದು ಸಲಹೆ ನೀಡಿದರು.

ಜಾನಪದ ಗಾಯಕ ಗಾನ ಅಶ್ವತ್ಥ ಮಾತನಾಡಿ, “ಆಧುನಿಕ ಶಿಕ್ಷಣ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಿದೆ. ಮನುಷ್ಯ ನಾಗರೀಕನಾದಷ್ಟೂ ಜಾತೀಯತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದಾನೆ. ಇಂದು ಪಾದರಕ್ಷೆಗೆ ಇರುವ ಬೆಲೆ ಮನುಷ್ಯನಿಗೆ ಇಲ್ಲವಾಗಿದೆ. ಚಪ್ಪಲಿಯನ್ನು ಎ ಸಿ ರೂಮಿನಲ್ಲಿಟ್ಟರೆ ಸಹಮಾನವರನ್ನು ಮನೆಯಿಂದ ಹೊರಗೆ ನಿಲ್ಲಿಸುತ್ತೇವೆ. ಕಲಾವಿದರನ್ನೂ ಕೂಡ ಜಾತಿಯಿಂದ ಗುರುತಿಸುವ ಪರಿಪಾಠ ಹೆಚ್ಚಿರುವುದು ಬೇಸರ ತರಿಸಿದೆ. ಇದನ್ನು ಮನಗಂಡು ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗ ಮಾತ್ರವೇ ಘನತೆಯ ಬದುಕು ನಮ್ಮದಾಗಲು ಸಾಧ್ಯ” ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆ ಸಾಂಸ್ಕೃತಿಕ ಚಟವಟಿಕೆಗಳಲ್ಲಿ ತೋರಿದ ಸಾಧನೆಗಾಗಿ ಪ್ರಮಾಣ ಪತ್ರ ಹಾಗೂ ಸ್ಮರಣಿಕೆಗಳನ್ನು ವಿತರಿಸಿದರು. ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ಗಾಯಕ ಗಾ.ನ. ಆಶ್ವತ್ಥ್ ಅವರ ಗಾಯನ ವಿದ್ಯಾರ್ಥಿಗಳನ್ನು ತಲೆದೂಗುವಂತೆ ಮಾಡಿತು. ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಂಶೋಧನೆ, ವಿಮರ್ಶೆ, ಓದು ಪೂರ್ವಗ್ರಹ ಹಾಗೂ ಪಕ್ಷಪಾತ ರಹಿತವಾಗಿರಲಿ; ಚಿಂತಕ ಬರಗೂರು ರಾಮಚಂದ್ರಪ್ಪ

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಜಿ ಡಿ ಚಂದ್ರಯ್ಯ, ದೈಹಿಕ ಶಿಕ್ಷಣ ನಿರ್ದೇಶಕ ಪ್ರಸನ್ನಕುಮಾರ್, ಸಾಂಸ್ಕೃತಿಕ ಚಟವಟಿಕೆಗಳ ಸಂಚಾಲಕ ಅಶ್ವತ್ಥನಾರಾಯಣ, ಎನ್‌ಎಸ್‌ಎಸ್ ಸಂಚಾಲಕ ಶಿವಾನಂದ, ವ್ಯವಸ್ಥಾಪಕ ಸುಬ್ರಮಣಿ, ಉಪನ್ಯಾಸಕ ಮುನಿರಾಜು ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X