ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರು ನೀರಿಗಾಗಿ ದಶಕಗಳಿಂದ ಹೋರಾಟ ಮಾಡುತ್ತಿದ್ದರೂ ಫಲ ಸಿಕ್ಕಿಲ್ಲ. ಮೊದಲು ನಮ್ಮ ನೀರಾವರಿ ಹಕ್ಕಿಗಾಗಿ ಹೋರಾಟ ನಡೆಸಲು ಮುಂದಾಗಬೇಕು ಎಂದು ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಮಂಗಳವಾರ ನಡೆದ ನೀರಾವರಿ ತಜ್ಞ ಜಿ ಎಸ್ ಪರಮಶಿವಯ್ಯ ಅವರ ನೆನಪಿನಲ್ಲಿ ವಿವಿಧ ಸಂಘಟನೆಗಳ ಪ್ರಮುಖ ಹೋರಾಟಗಾರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
“ರೈತ ಸಮುದಾಯದಲ್ಲಿ ಗಟ್ಟಿತನ ಮತ್ತು ಒಗ್ಗಟ್ಟು ಇಲ್ಲ. ಗ್ರಾಮಗಳಲ್ಲಿ ಜನರು ಮೂರು ಪಕ್ಷಗಳಲ್ಲಿ ಹಂಚಿ ಹೋಗಿದ್ದಾರೆ. ಜನಪ್ರತಿನಿಧಿಗಳಿಗೆ ಈ ಜಿಲ್ಲೆಗಳಿಗೆ ಕುಡಿಯುವ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಕೆರೆಗಳಿಗೆ ನೀರು ತುಂಬಿಸಿದರೆ, ರೈತರಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿ, ಮಾರುಕಟ್ಟೆ ವ್ಯವಸ್ಥೆ ಮಾಡಿ ಬೆಂಬಲ ಬೆಲೆ ನೀಡಿದರೆ ರೈತರು ಯಾವುದೇ ಯೋಜನೆಗಳನ್ನೂ ಕೇಳುವುದಿಲ್ಲ. ಸಾಲಮನ್ನಾವೂ ಬೇಡ” ಎಂದರು.
“ನೀತಿಗೆಟ್ಟ ಸರ್ಕಾರಗಳು ಅಣೆಕಟ್ಟೆ ಕಟ್ಟಲಿಲ್ಲ. ಕೆರೆ, ಕುಂಟೆಗಳನ್ನು ರಕ್ಷಿಸಲಿಲ್ಲ. ಕಣ್ಣು ಮುಚ್ಚಿಕೊಂಡಿವೆ. ನವದೆಹಲಿಯಲ್ಲಿ ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದರು. ಆದರೆ ಅವರ ಬೇಡಿಕೆಗಳ ಬಗ್ಗೆ ಸರ್ಕಾರಗಳು ಇಂದಿಗೂ ತೀರ್ಮಾನ ಕೈಗೊಂಡಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಬೆಂಗಳೂರು ಸುತ್ತಲಿನ ಜಿಲ್ಲೆಗಳಲ್ಲಿ ರಿಯಲ್ ಎಸ್ಟೇಟ್ ದಂಧೆ ವ್ಯಾಪಕವಾಗಿದೆ. ರೈತರ ಜಮೀನು ಖರೀದಿಸುತ್ತಿದ್ದಾರೆ. ಎಲ್ಲವೂ ಕಟ್ಟಡಗಳಾದರೆ ಆಹಾರ ಧಾನ್ಯಗಳನ್ನು ಹೇಗೆ ಬೆಳೆಯುವುದು? ಆ ಪ್ರಜ್ಞೆ ಎಲ್ಲರಲ್ಲಿಯೂ ಇರಬೇಕು” ಎಂದರು.
“ಹೋರಾಟಗಳನ್ನು ನಡೆಸದೆ ನೀರಾವರಿ ವಿಚಾರದಲ್ಲಿ ಬಯಲು ಸೀಮೆ ಜನರು ನ್ಯಾಯ ಪಡೆಯಲು ಸಾಧ್ಯವಿಲ್ಲ. ಯಾವುದೇ ಶಾಸಕ ಮತ್ತು ಸಂಸದ ನಿಮ್ಮ ಪರವಾಗಿ ಇಲ್ಲ. ಅತ್ಯಾಚಾರ ನಡೆಸಿದವರು, ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಜನಪ್ರತಿನಿಧಿಗಳಿಗೆ ಜಾಮೀನು ದೊರೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್ ಆಂಜನೇಯ ರೆಡ್ಡಿ ಮಾತನಾಡಿ, “ಎತ್ತಿನಹೊಳೆ ಯೋಜನೆಯಿಂದ ನೀರು ಬರುವುದಿಲ್ಲವೆಂದು ನೀರಾವರಿ ತಜ್ಞ ಜಿ ಎಸ್ ಪರಮಶಿವಯ್ಯ ಹೇಳಿದ್ದರು. ಕಳೆದ ವಿಧಾನಸಭಾ ಅಧಿವೇಶನದಲ್ಲಿ ಕೋಲಾರ ಶಾಸಕರ ಪ್ರಶ್ನೆಗೆ ಸ್ವತಃ ನೀರಾವರಿ ಸಚಿವರೇ ಎತ್ತಿನಹೊಳೆಯಿಂದ 8 ಟಿಎಂಸಿ ಅಡಿ ನೀರು ದೊರೆಯುತ್ತದೆಂದು ಹೇಳಿದ್ದಾರೆ. ಆದರೆ ಸರ್ಕಾರ ಈ ಹಿಂದಿನಿಂದಲೂ 24 ಟಿಎಂಸಿ ಅಡಿ ನೀರು ದೊರೆಯುತ್ತದೆಂದು ಸುಳ್ಳು ಹೇಳುತ್ತಿದೆ” ಎಂದರು.
“ಸಾತ್ವಿಕ ಹೋರಾಟ ಮಾಡುವುದರಿಂದ ನಮ್ಮ ಕಡೆಗೆ ಯಾರೂ ನೋಡುವುದಿಲ್ಲ. ಚಳವಳಿ ತೀವ್ರಗೊಳಿಸಬೇಕು. ಸರ್ಕಾರ, ಜನಪ್ರತಿನಿಧಿಗಳ ಮೇಲೆ ಭರವಸೆ ಹೊರಟು ಹೋಗಿದೆ. ಜನರೇ ಚಳವಳಿ ಕೈಗೆತ್ತಿಕೊಳ್ಳಬೇಕಿದೆ” ಎಂದರು.

“ಹಲವು ಹೋರಾಟ, ಪಾದಯಾತ್ರೆ ನಡೆಸಿದೆವು. ಪೊಲೀಸರು ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿದರು. ಪ್ರಕರಣ ದಾಖಲಿಸಿದರು. ಇಷ್ಟಾದರೂ ಸಮಸ್ಯೆ ಪರಿಹಾರ ಆಗುತ್ತಿಲ್ಲ. ಬಯಲು ಸೀಮೆ ಜಿಲ್ಲೆಗಳ ನೀರಾವರಿ ವಿಚಾರವಾಗಿ ಸರ್ಕಾರಗಳು ನಿರ್ಲಕ್ಷ್ಯವಹಿಸಿವೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಬೃಹತ್ ಬೆಂಗಳೂರು ಆಡಳಿತ ಮಸೂದೆಗೆ ಖಂಡನೆ; ಬೆಂಗಳೂರು ನವನಿರ್ಮಾಣ ಪಕ್ಷ ರ‍್ಯಾಲಿಗೆ ಕರೆ
“ತೆಲಂಗಾಣ ಮಾದರಿ ಹೋರಾಟವೇ ನಮ್ಮ ಮುಂದಿನ ಮಾದರಿಯಾಗಬೇಕು. ಬಯಲು ಸೀಮೆಯ ಜಿಲ್ಲೆಗಳಲ್ಲಿ ಶೇ.70ರಷ್ಟು ಯುವ ಸಮುದಾಯವಿದೆ. ಈ ಹೋರಾಟವನ್ನು ಅವರ ಹೆಗಲಿಗೂ ಹಾಕಬೇಕು. ರಾಜಕೀಯ, ಜಾತಿ, ಧರ್ಮದ ಹಿತಕ್ಕಿಂತ ನೀರು ನಮಗೆ ಮುಖ್ಯವಾಗಬೇಕು. ಮುಂದಿನ ಪೀಳಿಗೆಯ ಅಳಿವು ಉಳಿವು ಕೂಡಾ ಮುಖ್ಯ” ಎಂದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಲಕ್ಷ್ಮಿನಾರಾಯಣ, ಶಾಸಕರು, ಸಂಸದರು ನಮ್ಮ ನೀರಾವರಿ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ. ನಮ್ಮ ಜಿಲ್ಲೆಗಳನ್ನು ಮರೆತಿರುವ ಸರ್ಕಾರಗಳು ತ್ಯಾಜ್ಯ ನೀರು ಕುಡಿಸಲು ಮುಂದಾಗಿವೆ” ಎಂದು ದೂರಿದರು.
ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 60ಕ್ಕೂ ಹೆಚ್ಚು ಸಂಘಟನೆಯ ಮುಖಂಡರು ಇದ್ದರು.