ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಇಂದು ನಡೆದ ‘ದೇವನಹಳ್ಳಿ ಚಲೋ’ ವೇಳೆ ಕೊನೆಗೂ ರಾಜ್ಯ ಸರ್ಕಾರ ಪೊಲೀಸ್ ಪ್ರಯೋಗ ಮಾಡಿದೆ. ಬೆಳಿಗ್ಗೆಯಿಂದ ನಡೆಯುತ್ತಿದ್ದ ಶಾಂತಿಯುತ ಹೋರಾಟವು ಮುಂದುವರಿಯುವ ಸೂಚನೆ ಕಂಡುಬಂದ ಬೆನ್ನಲ್ಲೇ ಸ್ಥಳದಲ್ಲಿದ್ದ ಎಲ್ಲ ಹೋರಾಟಗಾರರನ್ನು ಸಿದ್ದರಾಮಯ್ಯ ಸರ್ಕಾರ ಬಂಧಿಸಿದೆ. ಚಳವಳಿಗಾರರನ್ನು ಹಾಗೂ ಸಣ್ಣ ಮಕ್ಕಳು, ವಯಸ್ಸಾದ ವೃದ್ಧರು ಎಂದು ಕಾಣದೆ ಪೊಲೀಸರು ಎಳೆದಾಡಿ, ಬಸ್ ಒಳಗೆ ತಳ್ಳಿ ಬಂಧಿಸಿದ್ದಾರೆ. ಇದನ್ನ ಖಂಡಿಸಿ ಗುರುವಾರ ಚಿಕ್ಕಮಗಳೂರು ನಗರದಲ್ಲಿ ಸಿದ್ದರಾಮಯ್ಯ ಸರ್ಕಾರ ವಿರುದ್ಧ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಸಂಯುಕ್ತ ಹೋರಾಟ ಸಮಿತಿ ಮುಖಂಡರಾದ ಕೆ ಎಲ್ ಅಶೋಕ್ ಈದಿನ. ಕಾಮ್ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಹಳ್ಳಿಗಳ ರೈತರು ತಮ್ಮಭೂಮಿ ಉಳಿಸಿಕೊಳ್ಳುವುದಕ್ಕಾಗಿ 1180 ದಿನಗಳಿಂದ ಹೋರಾಟ ನಡೆಸುತ್ತಿದ್ದರು. ಸರ್ಕಾರ ಅಂತಿಮ ಆದೇಶ ಹೊರಡಿಸಿ, 1777 ಎಕರೆ ಭೂಮಿಯನ ಕಿತ್ತುಕೊಳ್ಳಲು ಹೊರಟಿತ್ತು. ಆದರೆ ವಿರೋಧ ಬಂದ ಬೆನ್ನ 500 ಎಕರೆ ಜಮೀನಷ್ಟೇ ಬಿಟ್ಟುಕೊಡುವುದಾಗಿ ನಿರ್ಧರಿಸಿತ್ತು.

ನೊಂದ ರೈತರ ಪರವಾಗಿ ನಿಲ್ಲುವ ನಿಟ್ಟಿನ ರಾಜ್ಯದ ಮೂಲೆಮೂಲೆಯಿಂದ ವಿವಿಧ ಸಂಘಟನೆಗಳ ಮುಖಂಡರು ಇಂದು ದೇವನಹಳ್ಳಿ ಚಲೋ ಹಮ್ಮಿಕೊಂಡಿದ್ದರು. ಶಾಂತಿಯುತವಾಗಿ ಹೋರಾಟಗಾರರು ಪ್ರತಿಭಟನೆಯನ್ನು ಕೈಗೊಂಡಿದ್ದರು. ಅದನ್ನ ದಿಕ್ಕು ತಪ್ಪಿಸಿ ಹೋರಾಟಗಾರರನ್ನು ಬಂಧಿಸಿರುವುದನ್ನು ಖಂಡಿಸುತ್ತೇವೆ ಎಂದು ಸಂಯುಕ್ತ ಹೋರಾಟ ಸಮಿತಿ ಮುಖಂಡರಾದ ಕೆ ಎಲ್ ಅಶೋಕ್ ತಿಳಿಸಿದರು.
