ಪತಿಯ ಹಿಂಸೆ ತಾಳಲಾರದೆ ಆತನಿಂದ ದೂರುವಾಗಿದ್ದ ಮಹಿಳೆಯ ತಾಯಿ ಮತ್ತು ಮಗಳು ಸೇರಿ ಮೂವರನ್ನು ದುರುಳ ಪತಿಯೊಬ್ಬ ಹತ್ಯೆಗೈದು, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಭಯಾನಕ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಸಮೀಪದ ಮಾಗಲು ಗ್ರಾಮದಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ. ರತ್ನಾಕರ ಎಂಬಾತ ತನ್ನ ಮಗಳು, ಪತ್ನಿಯ ತಾಯಿ (ಅತ್ತೆ) ಹಾಗೂ ನಾದಿನಿಯನ್ನು ಕೊಲೆ ಮಾಡಿ, ತಾನೂ ಗುಂಡು ಹಾಕಿರಿಸಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತರನ್ನು ರತ್ನಾಕರನ ಅತ್ತೆ ಜ್ಯೋತಿ (50), ನಾದಿನಿ ಸಿಂಧು (26) ಹಾಗೂ ಮೌಲ್ಯಾ (7) ಎಂದು ಹೆಸರಿಸಲಾಗಿದೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ ರಾತ್ರಿ ಏಕಾಏಕಿ ಮನೆಗೆ ನುಗ್ಗಿದ ಆರೋಪಿ ರತ್ನಾಕರ ಮನೆಯಲ್ಲಿದ್ದವರ ಮೇಲೆ ನಾಡ ಬಂದೂಕಿನಿಂದ ಗುಂಡು ಹಾರಿದ್ದಾನೆ. ದುರ್ಘಟನೆಯಲ್ಲಿ ಜ್ಯೋತಿ, ಸಿಂಧು ಹಾಗೂ ಮೌಲ್ಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೆ, ಸಿಂಧು ಅವರ ಪತಿಯ ಕಾಲಿಗೂ ಗುಂಡು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಆಮ್ಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆರೋಪಿ, ಮೃತ ರತ್ನಾಕರ ಖಾಸಗಿ ಶಾಲಾ ಬಸ್‌ನ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ಕೃತ್ಯ ಎಸಗುವುದಕ್ಕೂ ಮುನ್ನ ಸೆಲ್ಫಿ ವಿಡಿಯೋ ಮಾಡಿಟ್ಟಿದ್ದಾನೆ.
ಈ ವರದಿ ಓದಿದ್ದೀರಾ?: ಜನ ಬಳಕೆ ವಸ್ತು ಮತ್ತು ಸೇವೆಗಳ ದರ ಇಂದಿನಿಂದ ಮತ್ತಷ್ಟು ತುಟ್ಟಿ
ವಿಡಿಯೋದಲ್ಲಿ, “ನನ್ನ ಮಗಳ ಖುಷಿ, ಪ್ರೀತಿ, ಸಂತೋಷದ ಮುಂದೆ ಏನೂ ಇಲ್ಲ. ಶಾಲೆಯಲ್ಲಿ ಮಕ್ಕಳು ನನ್ನ ಮಗಳನ್ನು ನಿಮ್ಮ ಅಮ್ಮ ಎಲ್ಲಿ ಎಂದು ಕೇಳುತ್ತಾರೆ. ನನ್ನ ಮಗಳು ಬೇಸರದಿಂದ ನನ್ನ ಬಳಿ ಬಂದು ಕೇಳುತ್ತಾಳೆ. ಆದರೆ, ಆಕೆ ನನ್ನನ್ನು ಬಿಟ್ಟು ಹೋಗಿ 2 ವರ್ಷಗಳಾಗಿವೆ” ಎಂದು ಹೇಳಿಕೊಂಡಿದ್ದಾನೆ.
ಮಗಳು ಮೌಲ್ಯಾಳನ್ನು ರತ್ನಾಕರನೇ ಶಾಲೆಗೆ ಸೇರಿಸಿ ಓದಿಸುತ್ತಿದ್ದರು. ಯುಗಾದಿ ಹಬ್ಬವಿದ್ದ ಕಾರಣ ಮಗಳನ್ನು ತನ್ನ ಅತ್ತೆ ಜ್ಯೋತಿ ಅವರ ಮನೆಗೆ ಕಳಿಸಿದ್ದರು. ಮಂಗಳವಾರ ರಾತ್ರಿ ತಾನೂ ಅಲ್ಲಿಗೆ ಹೋಗಿ ಮಗಳು, ಅತ್ತೆ ಹಾಗೂ ನಾದಿನಿಯನ್ನು ಹತ್ಯೆಗೈದಿದ್ದಾರೆ. ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.