ಶೂನ್ಯ ದಾಖಲಾತಿ ಕಾರಣದಿಂದ ಸುಮಾರು ಪ್ರಾಥಮಿಕ ಹಾಗೂ ಮಾಧ್ಯಮಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿರುವ ಸುದ್ದಿ ಸಾಕಷ್ಟು ಸದ್ದು ಮಾಡುತ್ತಿರುವುದು ಗೊತ್ತೇ ಇದೆ. ಇಂತಹ ಪರಿಸ್ಥಿತಿಯಲ್ಲಿ ದಾನಿಗಳ ಉದಾರತೆಯಿಂದ ಸರ್ಕಾರಿ ಶಾಲೆಯೊಂದು ಹೈಟೆಕ್ ಸ್ಪರ್ಶ ಪಡೆದು ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂತೆ ಜಿಲ್ಲೆಯ ಮಾದರಿ ಶಾಲೆಯಾಗಿ ನಿಂತಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುತ್ತಿಗೆಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನಿಗಳಿಂದ ಸುಮಾರು 2 ರಿಂದ 3 ಕೋಟಿಯಷ್ಟು ಹಣವನ್ನು ಸಂಗ್ರಹಿಸಿ ಪೀಠೋಪಕರಣಗಳು, ಸುಸಜ್ಜಿತ ಕೊಠಡಿಗಳು, ಸಭಾಂಗಣ, ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಿ ಶಾಲೆಗೆ ಹೊಸದೊಂದು ಮೆರುಗು ನೀಡಲಾಗಿದೆ. ಹೀಗಾಗಿಯೇ ಅದು ದಾನಿಗಳ ಶಾಲೆ ಎನ್ನುತ್ತಾರೆ ಗ್ರಾಮಸ್ಥರು.

ಶಾಲೆಯ ಹಿನ್ನೋಟ: 1973ರಲ್ಲಿ ಮುತ್ತಿಗೆಪುರದಲ್ಲಿ ʼಮಕ್ಕಳ ಮನೆʼ ಹೆಸರಿನಲ್ಲಿ ಶಾಲೆ ಆರಂಭವಾಗುತ್ತದೆ. ಮುತ್ತಿಗೆಪುರದಲ್ಲಿ ಶಾಲೆ ಎಂದು ಶುರುವಾಗಿದ್ದು, ಅದೇ ಗ್ರಾಮದ ಗ್ರಾಮಸ್ಥರಾಗಿದ್ದ ಶಿವಾಜಿ ರಾವ್ ಅವರಿಂದ. ಮೊದಲು 15 ಮಕ್ಕಳಿಂದ ಶಾಲೆಯನ್ನು ನಡೆಸಿಕೊಂಡು ಬಂದಿದ್ದರು. ಆ ಗ್ರಾಮದ ಪಕ್ಕದಲ್ಲಿದ್ದ 4 ಎಕರೆ ಸರ್ಕಾರಿ ಭೂಮಿಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿರ್ಮಿಸಲು ಖಾತೆ ಮಾಡಿಸುತ್ತಾರೆ. ನಿರಂತರ ಮಕ್ಕಳ ಬೆಳವಣಿಗೆ, ಶಿಕ್ಷಣ ಹಾಗೂ ಇನ್ನಿತರ ಚಟುವಟಿಕೆಗೆ ಸುಮಾರು ವರ್ಷಗಳಿಂದ ಚಿಕ್ಕಮಗಳೂರು ಹಾಗೂ ಬೇರೆ ಬೇರೆ ಜಿಲ್ಲೆಯ ದಾನಿಗಳಿಂದ ಹಣ ಮತ್ತು ಪೀಠೋಪಕರಣಗಳನ್ನು ಈ ಶಾಲೆಗೆ ಕೊಡುಗೆಯಾಗಿ ನೀಡುತ್ತಿದ್ದರು.

ಹಾಗೆಯೇ, 2024-25ನೇ ಸಾಲಿನಲ್ಲಿ 363 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. 1-7ನೇ ತರಗತಿವರೆಗೂ ಕನ್ನಡ ಮಾಧ್ಯಮ ಹಾಗೂ ಎಲ್‌ಕೆಜಿ-5ನೇ ತರಗತಿವರೆಗೂ ಆಂಗ್ಲ ಮಾಧ್ಯಮದಲ್ಲಿ ತರಗತಿಗಳು ನಡೆಯುತ್ತಿವೆ. ಈ ಶಾಲೆಗೆ ಖಾಯಂ ಶಿಕ್ಷಕರು 8 ಜನ, 3 ಜನ ಅತಿಥಿ ಶಿಕ್ಷಕರು, 6 ಜನ ಶಿಕ್ಷಕರನ್ನ ಮಕ್ಕಳ ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ನೇಮಕ ಮಾಡಿದ್ದಾರೆ. ಒಟ್ಟು 17 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿರುವುದು ವಿಶೇಷ.

ಶಾಲೆಯ ವಿಶೇಷತೆ: ಬೆಳಗ್ಗೆ 9:15ಕ್ಕೆ ಶಾಲೆ ಶುರುವಾಗುತ್ತೆ. ಮೊದಲು ಪ್ರಾರ್ಥನೆ, ಯೋಗ, ಧ್ಯಾನ, ವ್ಯಾಯಾಮ ಹಾಗೂ ಮಕ್ಕಳು ಹಾಲು ಕುಡಿದ ನಂತರ ಪಾಠ ಶುರುವಾಗುತ್ತದೆ. ಕ್ಷೀರ ಭಾಗ್ಯ, ಬಿಸಿಯೂಟ ಯೋಜನೆಯನ್ನೂ ಮಕ್ಕಳು ಪಂಕ್ತಿಯಲ್ಲಿ ಕುಳಿತು ಶಿಸ್ತಿನಿಂದ ಪಡೆಯುತ್ತಾರೆ. 25 ಸುತ್ತಮುತ್ತ ಗ್ರಾಮಗಳಿಂದ ಶಾಲೆಗೆ ಮಕ್ಕಳು ಬರುತ್ತಾರೆ. ಪ್ರತಿ ವರ್ಷ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಹೆಚ್ಚಾಗುತ್ತಿದೆ. ಸ್ಪೋಕನ್ ಇಂಗ್ಲಿಷ್, ಕಂಪ್ಯೂಟರ್ ಶಿಕ್ಷಣ, ಸ್ಮಾರ್ಟ್ ಕ್ಲಾಸ್ ಮಾಡುತ್ತಾರೆ. ಆಟ – ಪಾಠಗಳೊಂದಿಗೆ ಪ್ರತಿದಿನ 5:30ಕ್ಕೆ ತರಗತಿಗಳು ಮುಗಿಯುತ್ತವೆ.

ಈ ಸರ್ಕಾರಿ ಶಾಲೆ ಈಗಾಗಲೇ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಉತ್ತಮ ಶಾಲೆ, ಸ್ವಚ್ಛ ಶಾಲೆ, ಅಕ್ಷರ ದಾಸೋಹದಲ್ಲಿ ಉತ್ತಮ ನಿರ್ವಹಣಾ ಶಾಲೆ, ಹಸಿರು ಶಾಲೆ, ಜಿಲ್ಲಾ ಮಟ್ಟದ 3 ಜನ ಶಿಕ್ಷಕರಿಗೆ ಉತ್ತಮ ಶಿಕ್ಷಕರ ಪ್ರಶಸ್ತಿನೂ ಕೂಡ ದೊರೆತಿದೆ. ಎಲ್ಲಾ ಶಿಕ್ಷಕರು ಕ್ರಿಯಾಶೀಲರಾಗಿ, ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಮುಂದಿನ ಭವಿಷ್ಯಕ್ಕೆ ಸಹಾಯವಾಗುವಂತೆ ಸಹಕಾರ ನೀಡುತ್ತಿದ್ದಾರೆ.

ಇದೇ ಶಾಲೆಯ ವಿದ್ಯಾರ್ಥಿನಿ ದೀಪ್ತಿಗೌಡ ರಾಷ್ಟ್ರ ಮಟ್ಟದ ವಾಲಿಬಾಲ್ ತಂಡದ ನಾಯಕಿಯಾಗಿದ್ದಾಳೆ. ಈ ವರ್ಷದಲ್ಲಿ ಎರಡು ಪುಟಾಣಿ ಕವಿಗಳನ್ನು ಗುರುತಿಸಿದ್ದಾರೆ. 7ನೇ ತರಗತಿ ಭುವನ್ ಮತ್ತು ಪ್ರಾರ್ಥನ ಎಂಬ ವಿದ್ಯಾರ್ಥಿಗಳು ತುಂಬಾ ಆಸಕ್ತಿಯಿಂದ ಕವನ ಬರೆಯುವುದರಲ್ಲಿ ಉತ್ತಮ ಯಶಸ್ಸನ್ನು ಕಂಡಿದ್ದಾರೆ. ಕರ್ನಾಟಕದಿಂದ ಬಿಡುಗಡೆಯಾಗಿರ “ಪುಟಾಣಿಗಳ ಕವನ ಸಂಕಲನ ಪುಸ್ತಕ”ದಲ್ಲಿ ಈ ಶಾಲೆಯ ವಿದ್ಯಾರ್ಥಿಗಳ ಕವನಗಳು ಬಿಡುಗಡೆಯಾಗಿದೆ.
ದಾನಿಗಳಿಂದ ಸಹಾಯ ಹಾಗೂ ಸಹಕಾರ: ಸ್ಥಳೀಯ ನಿವಾಸಿಯಾದ ಸಂತೋಷ್ ಗೌಡ ಸುಸಜ್ಜಿತ ಎಂಟು ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಹಾಗೆಯೇ 18 ಲಕ್ಷ ಹಣದಲ್ಲಿ ಪ್ರಾರ್ಥನಾ ಮಂದಿರವನ್ನು ಸಂತೋಷ್ ಗೌಡರಿಂದ ನಿರ್ಮಿಸಲಾಗಿದೆ. ಒಟ್ಟು 2 ಕೋಟಿಯಷ್ಟು ದೇಣಿಗೆ ಕೊಟ್ಟು, ಮಗನನ್ನು ಇದೇ ಶಾಲೆಗೆ ಸೇರಿಸಿದ್ದಾರೆಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುತ್ತಿಗೆಪುರ ಮುಖ್ಯ ಶಿಕ್ಷಕಿ ಭಾರತಿ ರಾಧಾಕೃಷ್ಣ ಅವರು ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿದರು.

ಬೆಂಗಳೂರಿನ ಬೊಮ್ಮಸಂದ್ರದ ಶರ್ವಿನ್ ವಿಲಿಯಮ್ಸ್ ಕಂಪನಿ 18 ಲಕ್ಷದ ಪೀಠೋಪಕರಣಗಳನ್ನು ಶಾಲೆಗೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಎಲ್‌ಕೆಜಿಗೆ 60 ಬೇಬಿ ಡೆಸ್ಕ್ ಗಳು, 6-7 ನೇ ತರಗತಿಯವರೆಗೆ 70 ಫ್ರೀ ಸೀಟರ್ ಡೆಸ್ಕ್ ಗಳು, ನಲಿಕಲಿಗೆ ರೌಂಡ್ ಚೇರ್ಸ್, ಟೇಬಲ್ ಹಾಗೂ ಕಬೋರ್ಡ್ ಹಾಗೂ ಶಿಕ್ಷಕರಿಗೆ ಟೇಬಲ್, ಕುರ್ಚಿ ಕೊಡುಗೆಯಾಗಿ ಕೊಟ್ಟಿದ್ದಾರೆ. ಹಾಗೂ ಇನ್ನಿತರ ದಾನಿಗಳಿಂದ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್, ಮಕ್ಕಳ ಹಾಗೂ ಶಾಲೆಯ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಜಾನವಿ ಜಗದೀಶ್ 20 ಸಿಸಿ ಕ್ಯಾಮೆರಾ ಅಳವಡಿಸಲು ನೆರವಾಗಿದ್ದಾರೆ. ಯೂಥ್ ಫಾರ್ ಸೇವರ್ಧರ್ ವತಿಯಿಂದ 8 ಕಂಪ್ಯೂಟರ್‌ಗಳು, ರಾಣ ಪ್ರತಾಪ್ ಸಿಂಗ್ ಬೆಂಗಳೂರು ಇವರಿಂದ 12 ಟೇಬಲ್ ಅನ್ನು ಕಂಪ್ಯೂಟರ್ ಬಳಕೆಗಾಗಿ ನೀಡಿದ್ದಾರೆ.
ಇಷ್ಟು ಸೌಲಭ್ಯವನ್ನು ದಾನಿಗಳಿಂದಲೇ ಶಾಲೆ ಪಡೆದಿದೆ. ಹಿರಿಯ ನಾಗರಿಕರು, ಹೋರಾಟಗಾರರು, ವಚನಕರಾರ ಭಾವಚಿತ್ರಗಳನ್ನು ದಾನಿಗಳೇ ಅಳವಡಿಸಿದ್ದಾರೆಂದು ಮುಖ್ಯ ಶಿಕ್ಷಕಿ ಭಾರತಿ ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರು ಕೂಡ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಎಲ್ಲಾ ಭಾಗದಿಂದ 18 ಜನ ಎಸ್ ಡಿ ಎಂ ಸಿ ಸದಸ್ಯರಿದ್ದಾರೆ. ನಮ್ಮ ಶಾಲೆ ಸಾಧನೆಯಲ್ಲಿ ಹಾಗೂ ಪ್ರಗತಿಯಲ್ಲಿ ಸಾಗಲು ಎಸ್ ಡಿ ಎಂ ಸಿ ಸದಸ್ಯರ ಶ್ರಮ ಬಹಳಷ್ಟು ಇದೆ. ಸರ್ಕಾರದಿಂದ ವಿವೇಕ ಯೋಜನೆ ಅಡಿಯಲ್ಲಿ 4 ಕೊಠಡಿ, ದಾನಿಗಳಿಂದ 8 ಕೊಠಡಿ ಒಟ್ಟು 12 ಕೊಠಡಿ ನಿರ್ಮಾಣವಾಗಿದೆ. ಫೆಬ್ರವರಿ 28ರಂದು ಉದ್ಘಾಟನೆ ಮಾಡಲಾಗಿದೆ. ಸರ್ಕಾರದಿಂದ 52 ಲಕ್ಷ ಅನುದಾನ ಹಣದಲ್ಲಿ 22 ಲಕ್ಷ ಹಣ ಮಾತ್ರ ಸರ್ಕಾರದಿಂದ ಅನುದಾನ ಬಂದಿದೆ. ಆ ಹಣ ಸಂತೋಷ್ ಗೌಡ ಬಳಿ ಇದೆ. ಆದರೆ, ಆ ಹಣವನ್ನು ಅಭಿವೃದ್ಧಿಗೆ ಬಳಸುತ್ತಾರೆ. ಮೂರು ಹಂತದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಹಳೇ ಕಟ್ಟಡಗಳಾದ 5 ನೇ ತರಗತಿ ಕೊಠಡಿಗಳು ಶಿಥಿಲಗೊಂಡಿವೆ. ಆ ಜಾಗಕ್ಕೆ ಹೊಸದಾಗಿ ಕಟ್ಟಡ ನಿರ್ಮಿಸುವುದರ ಕಡೆಗೆ ಸಂತೋಷಗೌಡರವರು ಗಮನ ಕೊಟ್ಟಿದ್ದಾರೆ. ಸರ್ಕಾರದಿಂದ ಒಪ್ಪಿಗೆ ಪಡೆದುಕೊಳ್ಳಿ ಎಂದು ತಿಳಿಸಿದ್ದಾರೆಂದು ಶಾಲೆಯ ದೈಹಿಕ ಶಿಕ್ಷಕ ಸುರೇಶ್ ಡಿ ಹೆಚ್ ಈದಿನ ಡಾಟ್ ಕಾಮ್‌ಗೆ ತಿಳಿಸಿದರು.

ಇದನ್ನೂ ಓದಿದ್ದೀರಾ?ಹಾಸನ | ಶಿರಾಡಿ ಘಾಟ್ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ; ಮಾ.15ರಿಂದ ಏಕಮುಖ ಸಂಚಾರ
ನಮ್ಮ ಶಾಲೆಯ ಅಭಿವೃದ್ಧಿಗೆ ಸರ್ಕಾರ, ಪೋಷಕರು ಗ್ರಾಮಸ್ಥರು, ಸ್ಥಳೀಯ ಸಂಸ್ಥೆಗಳು ಹಾಗೂ ದಾನಿಗಳಿಂದ ಸಹಕಾರ ಆಗಿದೆ ಎಂದು ಎಲ್ಲರಿಗೂ ಧನ್ಯವಾದ ತಿಳಿಸುತ್ತೇವೆಂಬುದು ಶಾಲೆಯ ಶಿಕ್ಷಕ ವೃಂದದ ಮನದಾಳದ ಮಾತು.
ಈ ರೀತಿಯ ಮಾದರಿ ಶಾಲೆಗಳು ರಾಜ್ಯದಲ್ಲಿ ಮತ್ತಷ್ಟು ತಲೆ ಎತ್ತಬೇಕು. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರ ನಡುವೆ ಇಂತಹ ಹೈಟೆಕ್ ಶಾಲೆಗಳು ಕಣ್ಣು ಕುಕ್ಕುವ ರೀತಿ ಬೆಳೆಯಬೇಕು. ಸರ್ಕಾರದ ಜೊತೆ ಸಾರ್ವಜನಿಕರು ಕೈಜೋಡಿಸಿದರೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಎಂದೂ ಬರಲಾರದು.