ಮಲೆನಾಡಿಗರ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜುಲೈ 30ರಂದು ಬಾಳೆ ಹೊನ್ನೂರಿನಲ್ಲಿ ಜನ-ದನಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಮುಕ್ತ ಸಂವಾದಕ್ಕೆ ಜನಪ್ರತಿನಿಧಿಗಳನ್ನು ಅಹ್ವಾನಿಸಲಾಗಿದೆ ಎಂದು ಕರ್ನಾಟಕ ಜನಶಕ್ತಿ ನಾಯಕ ಹಾಗೂ ಎದ್ದೇಳು ಕರ್ನಾಟಕದ ಮುಖಂಡ ಕೆ.ಎಲ್ ಅಶೋಕ್ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. “ಮಲೆನಾಡಿಗರ ಕೂಗು ಒಂದು ರೀತಿಯಲ್ಲಿ ಅರಣ್ಯ ರೋದನವೇ ಸರಿ. ಬೆಲೆ ಏರಿಕೆ, ಭ್ರಷ್ಟಾಚಾರ, ದ್ವೇಷ ರಾಜಕಾರಣ ಮುಂತಾದ ಸಮಸ್ಯೆಗಳು ರಾಜ್ಯದ ಜನರಿಗೆಲ್ಲಾ ಇರುವಂತೆ ನಮಗೂ ಇದೆ. ಇವುಗಳಲ್ಲದೆ ಮಲೆನಾಡಿಗರಿಗೆ ಸಾಲು ಸಾಲು ಸಮಸ್ಯೆಗಳು, ಅರಣ್ಯ ಇಲಾಖೆಯ ನಿತ್ಯ ಕಿರುಕುಳ, ತಲೆಯಮೇಲೆ ಒಕ್ಕಲೆಬ್ಬಿಸುವ ತೂಗುಕತ್ತಿ. ನಾನಾ ರೀತಿಯ ಬೆಳೆ ರೋಗಗಳು, ಪ್ರಾಕೃತಿಕ ವಿಕೋಪಗಳು ಬಂದೆರಗುತ್ತವೆ. ಇಂದಿನ ಮಲೆನಾಡೆಂದರೆ ಕುವೆಂಪು ಅವರ ಕಾದಂಬರಿಯಲ್ಲಿ ಬರುವ ಅಂದಿನ ‘ಮಲೆಗಳಲ್ಲಿ ಮಧುಮಗಳು” ಅಲ್ಲ. “ಕೆಂಡದ ಮೇಲೆ ಬಿದ್ದ ತರಗೆಲೆಗಳು, ಬಾಯಿ ಬಡಿದುಕೊಂಡರೂ ಈವರೆಗೆ ಯಾವುದೇ ಜನ ಪ್ರತಿನಿಧಿಗಳೂ ನಮ್ಮತ್ತ ತಿರುಗಿ ನೋಡಲಿಲ್ಲ. ಯಾವೊಂದು ಸಮಸ್ಯೆಗೂ ಪರಿಹಾರ ನೀಡಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಮಲೆನಾಡಿಗರ ಅಳಲನ್ನು ಆಲಿಸದ ಜನಪ್ರತಿನಿಧಿಗಳ ದುರಹಂಕಾರಕ್ಕೆ ಅಂತ್ಯ ಹಾಡಲೇಬೇಕೆಂದು ನಿರ್ಧರಿಸಿ ಜನರೆಲ್ಲರೂ ಮನದೊಳಗೆಯೇ ತೀರ್ಮಾಸಿದ್ದುದರ ಫಲಿತಾಂಶ ಕಣ್ಮುಂದಿದೆ. ಹೊಸ ಸರ್ಕಾರ ರಚನೆಯಾಗಿದೆ, ಹೊಸ ಶಾಸಕರುಗಳು ಗೆದ್ದು ಬಂದಿದ್ದಾರೆ. ಗೆದ್ದವರ ಸರ್ಕಾರವೇ ಅಧಿಕಾರದಲ್ಲಿದೆ. ಇದಕ್ಕಿಂತ ಉತ್ತಮ ಸಂದರ್ಭ ಸುಲಭ ಸಾಧ್ಯವಿಲ್ಲ. ಈಗಲಾದರೂ ಮಲೆನಾಡಿಗರ ನೋವು ಸರ್ಕಾರಕ್ಕೆ ತಲುಪಬೇಕು. ದಶಕಗಳ ಸಮಸ್ಯೆಗೆ ಪರಿಹಾರ ದೊರಕಲೇಬೇಕು. ಯಾವ ಜಾತ್ರೆ, ಯಾವ ಧರ್ಮ, ಯಾವ ಪಕ್ಷ ಎಂಬ ಬೇಧವಿಲ್ಲದೆ ಎಲ್ಲರ ಸಮಸ್ಯೆಗಳಿಗೂ ಪರಿಹಾರ ದೊರಕಬೇಕು” ಎಂದು ಒತ್ತಾಯಿಸಿದರು.
“ಓಟು ಹಾಕಿದರೆ ಮಾತ್ರ ನಾಗರಿಕರಾಗಿ ನಮ್ಮ ಕರ್ತವ್ಯ ಮುಗಿಯಲಿಲ್ಲ. ಯಾವುದಕ್ಕಾಗಿ ಓಟು ಹಾಕಿದೆವೋ ಆ ಉದ್ದೇಶ ಈಡೇರುವ ತನಕ ನಾವು ಒಟ್ಟಾಗಿ ಮತ್ತು ಗಟ್ಟಿಯಾಗಿ ದನಿ ಎತ್ತಬೇಕು. ಸಮಸ್ಯೆಯ ಪರಿಹಾರಕ್ಕೆ ಸೃಜನಶೀಲ ರೀತಿಯ ಪ್ರಯತ್ನ ಮುಂದುವರೆಸಲೇಬೇಕು. ಆ ನಿಟ್ಟಿನಲ್ಲಿ ಇದೊಂದು ವಿನೂತನ ಕ್ರಮ ಜುಲೈ 30 ರಂದು ಬಾಳೆ ಹೊನ್ನೂರಿನಲ್ಲಿ ಜನ-ದನಿ ಸಮಾವೇಶವನ್ನು ಹಮ್ಮಿಕೊಂಡಿದ್ದು, ಜನ ಪ್ರತಿನಿಧಿಗಳ ಜೊತೆ ಮುಕ್ತ ಸಂವಾದ ನಡೆಸುತ್ತೇವೆ” ಎಂದರು.
“ಸೆಕ್ಷನ್ 4 ಅರಣ್ಯ ಹಕ್ಕು ಪತ್ರಕ್ಕೆ ಕಂದಾಯ ಭೂಮಿ ಬಡವರು, ತಳವರ್ಗ, ದೀನದಲಿತರಿಗೆ ತೊಂದರೆ ಆಗುತ್ತಿದೆ. ಭೂಮಿಯನ್ನು ಲೀಸ್‌ಗೆ ತೆಗೆದುಕೊಳ್ಳುತ್ತಿರುವ ಕಾರ್ಪೊರೇಷನ್ ಕಂಪನಿಗಳಿಗೆ ಅಸ್ತಾಂತರ ಮಾಡುತ್ತಿದ್ದಾರೆ. 2 ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ದೊರೆಸ್ವಾಮಿ ನೇತೃತ್ವದಲ್ಲಿ ಅಕ್ರಮ ಸಕ್ರಮ ದೊಡ್ಡ ಹೋರಾಟ ಮಾಡಿದ್ದೆವು. ಪ್ರಯೋಜನವಾಗಲಿಲ್ಲ. ಇದೀಗ ಎಲ್ಲ ಶಾಸಕರು ಪಶ್ಚಿಮ ಘಟ್ಟದವರೆಗು ಸ್ಪಂದಿಸಬೇಕು. ಕೇರಳ ರಾಜ್ಯದಲ್ಲಿ ಮಾಡಿರುವ ಡಿ ನೋಟಿಫಿಕೇಶನ್ ತರಹ ಬದಲಾಗಬೇಕು. ಕಾಟಚಾರಗಳ ಭರವಸೆ ಆಗಬಾರದು” ಎಂದು ಆಗ್ರಹಿಸಿದರು.
“ಚಿಕ್ಕಮಗಳೂರು ಜಿಲ್ಲೆಯಿಂದ ಗೆದ್ದ ಶಾಸಕರೆಲ್ಲರೂ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯದಲ್ಲಿ ನಾಗರಿಕ ಚಳವಳಿಯ ಸಂಚಲನ ಮೂಡಿಸಿದ ‘ಎದ್ದೇಳು ಕರ್ನಾಟಕ’ ಅಭಿಯಾನದ ಪ್ರಮುಖ ರಾಜ್ಯ ನಾಯಕರುಗಳು ಆಗಮಿಸುತ್ತಿದ್ದಾರೆ. ಜನ–ದನಿ ಸಮಾವೇಶ ಜನರ ಹಾಗೂ ಜನಪ್ರತಿನಿಧಿಗಳ ನಡುವಿನ ಸಂಬಂಧ ಹೇಗಿರಬೇಕು ಎಂಬುದಕ್ಕೆ ಹೊಸ ಮಾದರಿಯನ್ನು ಹುಟ್ಟುಹಾಕಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರಲ್ಲಿ ಸೇರಿದ್ದ ಎಲ್ಲರೂ ಪ್ರಧಾನಿ ಅಭ್ಯರ್ಥಿಗಳೇ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಸಂಘಟನೆಯ ಹಿರಿಯ ಮುಖಂಡ ಗೌಸ್ ಮೊಹಿದ್ದೀನ್ ಮಾತನಾಡಿ, “ಬಹುತೇಕ ವರ್ಷಗಳಿಂದ ಭೂಮಿ ಇಲ್ಲದೆ ಹಾಗೂ ಇರುವ ಭೂಮಿಗೆ ಹಕ್ಕು ಪತ್ರವಿಲ್ಲದೆ ಮಲೆನಾಡಿನ ಜನರು ತತ್ತರಿಸುತ್ತಿದ್ದಾರೆ. ಪ್ರಸ್ತುತ ಸರ್ಕಾರ ಸರಿಯಾದ ಕ್ರಮದಲ್ಲಿ ನ್ಯಾಯಯುತವಾಗಿ ಸಮಸ್ಯೆ ಬಗೆಹರಿಸಬೇಕು. ಸಮಾವೇಶಕ್ಕೆ ಚಿಕ್ಕಮಗಳೂರು ಜಿಲ್ಲೆಯ ಐದು ಮಂದಿ ಶಾಸಕರನ್ನೂ ಬರಲು ತಿಳಿಸಿದ್ದೇವೆ. ಅದರಲ್ಲಿ ಮೂಡಿಗೆರೆ, ಶೃಂಗೇರಿ, ಚಿಕ್ಕಮಗಳೂರು ಶಾಸಕರು ಒಪ್ಪಿಗೆ ಕೊಟ್ಟಿದ್ದಾರೆ. ಜನರ ಮುಂದೆ ಮುಕ್ತವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಬೇಕು” ಎಂದು ಕೋರಿದರು.
ಕರ್ನಾಟಕ ಜನಶಕ್ತಿ ಕಡೂರು ಮುನ್ನ, ಬಣಕಲ್ ಅಸಿನಬ್ಬ ಸೇರಿದಂತೆ ಇತರ ಕಾರ್ಯಕರ್ತರು ಇದ್ದರು