ಕರ್ನಾಟಕದ ಪ್ರಮುಖ ಪ್ರವಾಸಿ ತಾಣ ಎಂದೇ ಹೆಸರುವಾಸಿಯಾಗಿರುವ ಜಿಲ್ಲೆ ಚಿಕ್ಕಮಗಳೂರು. ನಿತ್ಯ ಹರಿದ್ವರ್ಣ ಕಾಡುಗಳಿಂದ ಕೂಡಿದ ಪರ್ವತ ಶ್ರೇಣಿಗಳು, ಜಲಪಾತಗಳಿಂದ ಸುತ್ತುವರಿದು, ತನ್ನ ಪ್ರಕೃತಿ ಸೌಂದರ್ಯದಿಂದಲೇ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ. ರಾಜ್ಯದ ಕಾಫಿ ನಾಡು ಎಂದೂ ಕರೆಯಲ್ಪಡುವ ಈ ಜಿಲ್ಲೆ ಇತಿಹಾಸದಲ್ಲಿಯೂ ತನ್ನ ಹೆಸರು ಉಲ್ಲೇಖಿಸಿಕೊಂಡಿದೆ. ಇಷ್ಟೆಲ್ಲಾ ಹೆಸರು ಮಾಡಿರುವ ಈ ಜಿಲ್ಲೆಯ ಗ್ರಾಮವೊಂದು ಇಂದಿಗೂ ರಸ್ತೆಗೆ ಡಾಂಬರು ಕಾಣದೆ, ಅಭಿವೃದ್ಧಿಯನ್ನು ಎದುರು ನೋಡುತ್ತಿದೆ ಎಂದರೆ ನಂಬಲೇಬೇಕು.

ಹೌದು.. ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಸಲವಾನಿ ಗ್ರಾಮಕ್ಕೆ ಅಭಿವೃದ್ಧಿ ಇರಲಿ, ಕಡೇಪಕ್ಷ ರಸ್ತೆಗೆ ಡಾಂಬರು ಹಾಕಿಸುವವರೂ ಇಲ್ಲ. ಸುಮಾರು ನೂರಾರು ವರ್ಷಗಳಿಂದ 20-25 ಕುಟುಂಬದವರು ವಾಸವಾಗಿರುವ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮುತ್ತಜ್ಜನ ಕಾಲದಿಂದಲೂ ಸೂಕ್ತವಾದ ರಸ್ತೆ ಅನ್ನೋದೇ ಇಲ್ಲ ಎನ್ನುತ್ತಾರೆ ಅಲ್ಲಿನ ನಿವಾಸಿಗಳು. ಮೊದಲ ಸಲ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಯಾದಾಗ ಹಾಗೂ ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಬಕ್ರಿಹಳ್ಳ ಏತ ನೀರಾವರಿ ಯೋಜನೆಯ ಘಟಕಕ್ಕೆ ಗ್ರಾಮ ಆಯ್ಕೆಯಾದರೂ ಸಹ ರಸ್ತೆ ಅನ್ನೋದನ್ನ ಕನಸಿನಲ್ಲಿ ಮಾತ್ರ ಕಾಣುವಂತಾಗಿದೆ. ವರ್ಷಗಳಿಂದಲೂ ಅಧಿಕಾರಿಗಳಿಗೆ, ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದರೂ ಯಾರೊಬ್ಬರೂ ಇತ್ತ ಗಮನಹರಿಸುತ್ತಿಲ್ಲ. ನಮ್ಮ ಅಳಲು ಕೇಳಲೂ ಸಹ ಯಾರು ಇಲ್ಲ ಎಂದು ಅಸಮಾಧಾನಗೊಂಡರು.

ಈ ಬಗ್ಗೆ ಈದಿನ ಡಾಟ್ ಕಾಮ್ ಜತೆ ಮಾತನಾಡಿದ ಗ್ರಾಮದ ಹಿರಿಯರು, “ಕಡಹಿನಬೈಲು-ಮಾರಿದಿಬ್ಬ ಮಾರ್ಗವಾಗಿ ಸೂಸಲವಾನಿ ಗ್ರಾಮದವರೆಗೂ ಬಕ್ರಿಹಳ್ಳ ಏತನೀರಾವರಿ ಯೋಜನೆಗೆ ಸಂಬಂಧಿಸಿದಂತೆ 1300 ಎಕರೆ ಜಮೀನುಗಳಿವೆ. ಅದರಲ್ಲೂ ಸೂಸಲವಾನಿ ಗ್ರಾಮದಲ್ಲಿ ಸುಮಾರು 40-50 ಏಕರೆಯಷ್ಟು ರೈತರ ಕೃಷಿ ಭೂಮಿ ಇದ್ದು, ಕೃಷಿ ಚಟುವಟಿಕೆಗಳಿಗೆ ಜಮೀನಿಗೆ ಓಡಾಡಲು ಸೂಕ್ತ ರಸ್ತೆ ಇಲ್ಲದ ಕಾರಣ ಕೃಷಿ ಮಾಡಲು ಸಹ ಕಷ್ಟವಾಗಿದೆ. ಬಕ್ರಿಹಳ್ಳ ಏತ ನೀರಾವರಿ ಯೋಜನೆ ಮಾಡಿರುವ ಜಾಗಕ್ಕೆ ರಸ್ತೆ ಮಾಡಿಕೊಡಿ ಎಂದು ಸ್ಥಳೀಯ ಪ್ರಾಧಿಕಾರಗಳಿಗೆ ಹಲವಾರು ಬಾರಿ ಮನವಿ ನೀಡಿದ್ದರ ಫಲವಾಗಿ ಲ್ಯಾಂಡ್ ಆರ್ಮಿ (ಕೆಆರ್‌ಐಡಿಎಲ್) ಚಿಕ್ಕಮಗಳೂರು ಸಂಸ್ಥೆಯಿಂದ ರಸ್ತೆ ಮಾಡಿಕೊಡುವುದಾಗಿ ತಿಳಿಸಿರುತ್ತಾರೆ. ಮುಂದುವರೆದು..

“2019 ರಲ್ಲಿ ಬಾಳೆಕೊಪ್ಪ, ಮಾರಿದಿಬ್ಬ ರಸ್ತೆಯಿಂದ ಪ್ರಾರಂಭವಾಗಿ ಬಕ್ರಿಹಳ್ಳ ಏತ ನೀರಾವರಿ ಯೋಜನೆ ಮಾಡಿರುವ ಜಾಗಕ್ಕೂ ರಸ್ತೆ ಮಾಡಿಕೊಡುವುದಾಗಿ ತಿಳಿಸಿ, ಅದೇ ವರ್ಷ ಬಾಳೆಕೊಪ್ಪ, ಮಾರಿದಿಬ್ಬ ರಸ್ತೆಯವರೆಗೆ ಕೇವಲ 634 ಮೀಟರ್ ಮಾತ್ರ ಡಾಂಬರ್ ರಸ್ತೆ ಮಾಡಿರುತ್ತಾರೆ. 2021-22ರಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮುಂದುವರಿದ ಕ್ರಿಯಾಯೋಜನೆ ಅಡಿಯಲ್ಲಿ ಸೂಸಲವಾನಿ ಗ್ರಾಮದ ಬಾಳೆಕೊಪ್ಪ, ಮಾರಿದಿಬ್ಬ ರಸ್ತೆಯಿಂದ ಬಕ್ರಿಹಳ್ಳ, ಕಡಹಿನಬೈಲು ಏತನೀರಾವರಿ ಸ್ಥಾವರಕ್ಕೆ ಹೋಗುವ ಸಂಪರ್ಕ ರಸ್ತೆಗೆ ಡಾಂಬರ್ ರಸ್ತೆ ಮಾಡುವ ಬದಲು, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮತ್ತು ಕಾಮಗಾರಿಯನ್ನು ಧೃಡೀಕರಿಸಿದ ಇಂಜಿನಿಯರ್‌ಗಳ ನೇತೃತ್ವದಲ್ಲಿಯೇ ಕಾಮಗಾರಿಯ ಗುತ್ತಿಗೆದಾರರು ಹಾಗೂ ಇತರೆ ಅಧಿಕಾರಿಗಳು ಸೇರಿ ಬೇರೆ ಮಾರ್ಗದ ರಸ್ತೆಗೆ 539.15 ಮೀಟರ್ ಡಾಂಬರೀಕರಣ ಮಾಡಿದ್ದಾರೆ” ಎಂದು ಮಾಹಿತಿ ನೀಡಿದರು.

ಸೂಸಲವಾನಿ ಗ್ರಾಮಕ್ಕೆ ಆಗಬೇಕಾದ ಡಾಂಬರ್ ರಸ್ತೆ, 10 ಲಕ್ಷ ಅನುದಾನದಲ್ಲಿ ಬೇರೆ ಮಾರ್ಗವಾಗಿ ನಡೆದಿದೆ. ಕೇವಲ ಒಂದೂವರೆ ವರ್ಷದ ಆ ರಸ್ತೆ ರಸ್ತೆ, ಜಲ್ಲಿ ಕಲ್ಲುಗಳನ್ನು ಮೇಲೊದ್ದು ಮಲಗಿದೆ. ಕಾಮಗಾರಿ ಎಲ್ಲ ಕಿತ್ತು ಹೊರಬಂದಿದೆ. ಇಡೀ ಗ್ರಾಮಕ್ಕೆ ರಸ್ತೆ ಮಾಡಿಕೊಡುವ ಬದಲು, ಪ್ರಭಾವಿ ವ್ಯಕ್ತಿಗಳು, ಶ್ರೀಮಂತರು, ಹಣವಂತರು ಓಡಾಡುವ ಜಾಗಕ್ಕೆ, ಅವರ ಅನುಕೂಲಕ್ಕೆ ತಕ್ಕಂತೆ ರಸ್ತೆ ಮಾಡಿಕೊಟ್ಟಿದ್ದಾರೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

“ನಾವು ಕೂಲಿ ಮಾಡಿ ಬದುಕು ನಡೆಸುವ ಜನ, ಈ ಊರಿಗೆ ಯಾವುದೇ ಗಾಡಿಗಳು ಬರುವುದಿಲ್ಲ. ಬಂದರು ಕೂಡ ಬಾಡಿಗೆಯನ್ನು ಕೂಲಿ ಮಾಡಿದ ಹಣಕ್ಕಿಂತ ಹೆಚ್ಚು ಕೇಳುತ್ತಾರೆ. ಕೇಳಿದರೆ ನಿಮ್ಮೂರಿನ ರಸ್ತೆ ಸರಿಯಿಲ್ಲ ನಮ್ಮ ಗಾಡಿಗಳು ಹಾಳಾಗುತ್ತವೆ. ಕೆಟ್ಟು ನಿಂತರೆ ಯಾರು ಹಣ ಕೊಡ್ತಾರೆ ಎಂದು ನಮ್ಮನ್ನೇ ಕೇಳುತ್ತಾರೆ. ಶಾಲೆಗೆ ಹೋಗುವ ಮಕ್ಕಳಿಗೆ, ಬಾಣಂತಿಯರಿಗೆ, ವೃದ್ಧರಿಗೆ ಆಸ್ಪತ್ರೆಗೆ ಹೋಗಲು ಬಹಳಷ್ಟು ತೊಂದರೆಗಳಾಗುತ್ತಿವೆ. ಅದರಲ್ಲೂ ಗರ್ಭಿಣಿಯಾದವರಿಗೆ ಈ ರಸ್ತೆಯಲ್ಲೇ ಗರ್ಭಪಾತವಾದ ಉದಾಹರಣೆಗಳೂ ಇವೆ. ಇದಕ್ಕೆ ಯಾರು ಹೊಣೆ?..

ಮಳೆಗಾಲದಲ್ಲಂತೂ ಕೇಳೋದೇ ಬೇಡ ನಮ್ಮ ಪರಿಸ್ಥಿತಿ. ರಸ್ತೆಯಂತೂ ಕೆಸರು ಗದ್ದೆಯಂತಾಗಿರುತ್ತದೆ. ಚುನಾವಣೆ ಬಂದಾಗ ಮಾತ್ರ ರಾಜಕೀಯದವರು ಬರ್ತಾರೆ. ಬಾಕಿ ಸಮಯದಲ್ಲಿ ನಾವು ಬದುಕಿದ್ದೀವಾ.. ಎಂದು ಯಾರೂ ತಿರುಗಿ ನೋಡಲ್ಲ. ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನ ಕೇಳಿದ್ರೆ, ಉಡಾಫೆಯ ಉತ್ತರ ನೀಡುತ್ತಾರೆ. ನಾವೆಲ್ಲಾ ಸತ್ತಮೇಲೆ ನಮ್ಮೂರಿಗೆ ಒಳ್ಳೆಯ ರಸ್ತೆ ಮಾಡ್ತಾರಾ? ಎನ್ನುತ್ತಾರೆ ಗ್ರಾಮದ ನಿವಾಸಿ.

ಕಾಮಗಾರಿ ಉಸ್ತುವಾರಿ ವಹಿಸಿದ್ದ ಹಾಲಿ ಗ್ರಾಪಂ ಸದಸ್ಯ ಸುನಿಲ್ ಅವರೊಂದಿಗೆ ಈದಿನ ಡಾಟ್ ಕಾಮ್ ತಂಡ ಸಮಸ್ಯೆ ಕುರಿತು ಮಾತನಾಡಿಸಲು ಪ್ರಯತ್ನಿಸಲಾಗಿ.. ʼನಾವು ಕಾಮಗಾರಿ ಮಾಡಿರುವುದು ಸರಿ ಇದೆ. ಮುಂದಿನ ದಿನಗಳಲ್ಲಿ ರಸ್ತೆ ಮಾಡಿಸುತ್ತೇವೆಂದುʼ ಹಾರಿಕೆಯ ಉತ್ತರ ಕೊಟ್ಟು ಅರ್ಧಕ್ಕೆ ಫೋನ್ ಕಟ್ ಮಾಡಿರುತ್ತಾರೆ.
“ನಾನು ಗ್ರಾಮ ಪಂಚಾಯಿತಿಗೆ ಆಯ್ಕೆ ಆಗಿ 6 ತಿಂಗಳು ಆಗಿದೆ. ಎಲ್ಲಿ ಏನು ತಪ್ಪಾಗಿದೆ ಎಂದು ನನಗೆ ಗೊತ್ತಿಲ್ಲ. ನಮ್ಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸದಸ್ಯರೆಲ್ಲ ಸೇರಿ ಸಭೆ ಮಾಡಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹಾಲಿ ಅಧ್ಯಕ್ಷೆ ಅಶ್ವಿನಿ ತಿಳಿಸಿದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಶಾಸಕರಿಗೆ ಪದೇಪದೆ ಮನವಿ ಮಾಡಿದರೂ, ಡಾಂಬರೀಕರಣವಾಗದ ರಸ್ತೆ
ಸೂಸಲವಾನಿ ಗ್ರಾಮ ಯಾವ ರೀತಿಯ ಸಮಸ್ಯೆ ಎದುರಿಸುತ್ತಿದೆ ಎಂಬುದು ಸ್ಪಷ್ಟವಾಗಿ ಗೊತ್ತಿಲ್ಲ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆಂದು ಪಿಡಿಓ ವೀಣಾ ಮಾಹಿತಿ ನೀಡಿದರು.
ಹಗರಣ ಕುರಿತು ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು. ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಎನ್ನುವ ಗ್ರಾಮಸ್ಥರ ಮನವಿಯನ್ನು ಸಂಬಂಧಪಟ್ಟವರು ಇನ್ನು ಮುಂದೆಯಾದರೂ ಆಲಿಸಲಿದ್ದಾರಾ.. ಸೂಸಲವಾನಿ ಗ್ರಾಮ ಈಗಲಾದರೂ ಡಾಂಬರ್ ರಸ್ತೆಯನ್ನು ನೋಡಲಿದೆಯೇ ಎನ್ನುವುದನ್ನು ಕಾದುನೋಡಬೇಕಿದೆ.