ಅರಣ್ಯ ಜಮೀನನ್ನು ಸರ್ಕಾರದ ಪೂರ್ವಾನುಮತಿ ಪಡೆಯದೇ ಅಕ್ರಮವಾಗಿ ಭೂ ಮಂಜೂರಾತಿ ಮಾಡಿರುವ ಆರೋಪದ ಮೇಲೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಹಶೀಲ್ದಾರ್ ಗ್ರೇಡ್-1 ಸಿ.ಎಸ್ ಪೂರ್ಣಿಮ ಅವರನ್ನು ಅಮಾನತು ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ವಲಯದಲ್ಲಿ ಅಧಿಸೂಚಿತ ಅರಣ್ಯ ಪ್ರದೇಶವಾದ ರಂಗೇನಹಳ್ಳಿ ಗ್ರಾಮದ ಸರ್ವೆ ನಂ.4ರಲ್ಲಿ ಒಟ್ಟು 12.33 ಎಕರೆ ಅರಣ್ಯ ಜಮೀನನ್ನು ಕೇಂದ್ರ ಸರ್ಕಾರದ ಅನುಮತಿ ಪಡೆಯದೇ ಪೂರ್ಣಿಮ ಅವರು ಮಂಜೂರು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರನ್ನು ಅಮಾನತು ಮಾಡಲಾಗಿದೆ.
“ಅರಣ್ಯ ಜಮೀನನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿ ದುರ್ನಡತೆ/ಕರ್ತವ್ಯ ಲೋಪವೆಸಗಿರುವ ಆಪಾದಿತ ಅಧಿಕಾರಿ ವಿರುದ್ಧ ‘Van (Sanrakshan Evam Samvardhan) Adhiniyam-1980’ರ ಸೆಕ್ಷನ್ 8(3B) ಮತ್ತು ‘Van (Sanrakshan Evam Samvardhan) Rules-2023’ರನಿಯಮ 15 ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕಾಯ್ದೆ-1963 ಅಡಿಯಲ್ಲಿ ದೂರು ದಾಖಲಿಸಲಾಗಿದೆ” ಎಂದು ವಲಯ ಅರಣ್ಯಾಧಿಕಾರಿ ಈದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ.

“ಪ್ರಕರಣದಲ್ಲಿ ತರೀಕೆರೆಯ ಹಿಂದಿನ ತಹಶೀಲ್ದಾರ್ (ಈಗ ನಿವೃತ್ತರಾಗಿದ್ದಾರೆ) ಎನ್.ಟಿ ಧರ್ಮೋಜಿರಾವ್ ಮತ್ತು ಪೂರ್ಣಿಮ ಅವರು ಭಾಗಿಯಾಗಿದ್ದಾರೆ. ಸರ್ಕಾರದ ಅರಣ್ಯ ಭೂಮಿಯನ್ನು ಪರಭಾರೆ ಮಾಡಲು ನಿರ್ಬಂಧವಿದ್ದರೂ, ಅವರು ಅನಧಿಕೃತವಾಗಿ ಭೂ ಮಂಜೂರಾತಿ ಮಾಡಿರುವುದು ದೃಢಪಟ್ಟಿದೆ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸರ್ಕಾರದ ಕಾನೂನು ಆದೇಶದಂತೆ ಅರಣ್ಯ ಒತ್ತುವರಿ ತೆರವು; ಅಡಕೆ ತೋಟ ಸಂಹಾರ
“ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು ಸರ್ಕಾರದ ಭೂಮಿಯನ್ನು ಸಂರಕ್ಷಿಸುವುದರ ಬದಲು ಫಲಾನುಭವಿಗಳಿಂದ ಬಾಹ್ಯ ಪ್ರತಿಫಲಾಪೇಕ್ಷೆ ಪಡೆಯುವ ಉದ್ದೇಶದಿಂದ, ಸರ್ಕಾರದ ಭೂಮಿಯನ್ನು ಅನಧಿಕೃತವಾಗಿ ಮಂಜೂರು ಮಾಡಿ ಕರ್ನಾಟಕ ನಾಗರೀಕ ಸೇವಾ (ನಡತೆ)ನಿಯಮಗಳು-2021ರ ನಿಯಮ (3)ರ ಉಪ ನಿಯಮ-(1)(2)(3)(5)(6) & (7)ನ್ನು ಉಲ್ಲಂಘಿಸಿದ್ದಾರೆ. ಕರ್ತವ್ಯ ಲೋಪವೆಸಗಿ ಸರ್ಕಾರಿ ನೌಕರನಿಗೆ ತಕ್ಕದಲ್ಲದ ರೀತಿಯಲ್ಲಿ ವರ್ತಿಸಿರುವುದರಿಂದ, ಆರೋಪಿತ ಅಧಿಕಾರಿಯನ್ನು ಅಮಾನತು ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷ ಹೆಚ್.ಜಿ ಅವರು ಆದೇಶ ಹೊರಡಿಸಿದ್ದಾರೆ” ಎಂದು ಅರಣ್ಯ ಅಧಿಕಾರಿ ತಿಳಿಸಿದ್ದಾರೆ.