ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಬಾಬಾ ಬುಡನ್ ಗಿರಿಯಲ್ಲಿ ಸುಮಾರು ವರ್ಷಗಳಿಂದ ಉರುಸ್ ಹಬ್ಬದ ಆಚರಣೆಯನ್ನು ಮುಸ್ಲಿಂ ಸಮುದಾಯದವರು ಆಚರಿಸುತ್ತಾರೆ. ಈ ಹಬ್ಬಕ್ಕೆ ಹಿಂದೂ ಹಾಗೂ ಎಲ್ಲಾ ಸಮುದಾಯದವರು ಭಾಗವಹಿಸುವುದು ವಾಡಿಕೆಯಿದೆ.

ಅದೇ ರೀತಿಯಲ್ಲಿ 15 ರಿಂದ ಶುರುವಾಗಿ ಮೂರು ದಿನಗಳ ಕಾಲ ಉರುಸ್ ಆಚರಣೆ ನಡೆಯುತ್ತದೆ. ಶನಿವಾರದಂದು ಎಂದಿನಂತೆ ಉರುಸ್ ಹಬ್ಬದ ಆಚರಣೆ ವಿಜೃಂಭಣೆಯಿಂದ ನಡೆದಿದೆ. ಆದರೆ, ವ್ಯವಸ್ಥೆ ಮಾತ್ರ ಕುಂಠಿತವಾಗಿದೆ ಎನ್ನಬಹುದು. ಈದಿನ.ಕಾಮ್ ತಂಡ ಉರುಸ್ ಹಬ್ಬದ ಆಚರಣೆ ಕುರಿತು ಜನಾಭಿಪ್ರಾಯ ಸಂಗ್ರಹ ಮಾಡಲು ತೆರಳಿದಾಗ ಅಲ್ಲಿನ ಜನರು ಉರುಸ್ ಹಬ್ಬದ ಅವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆ.
“ಸುಮಾರು ವರ್ಷಗಳಿಂದ ವ್ಯಾಪಾರ ನಡೆಸಿಕೊಂಡು ಜೀವನ ಸಾಗಿಸುತ್ತಾ ಇದ್ದೇವೆ, 25 ವರ್ಷಗಳಿಂದ ಉರುಸ್ ನಡೆಯುವ ಸಮಯದಲ್ಲಿ ಈ ಭಾಗಕ್ಕೆ ಚಿಕ್ಕಮಗಳೂರಿನಿಂದ ಗಿರಿಗೆ ಬಸ್ ಹಾಗೂ ಇತರ ವಾಹನಗಳ ವ್ಯವಸ್ಥೆ ಇತ್ತು, ದೂರದ ಊರುಗಳಿಂದ ಹಾಗೂ ಜಿಲ್ಲೆಗಳಿಂದ ಬರುವ ಜನರಿಗೆ ಅನುಕೂಲವಾಗುತ್ತಿತ್ತು. ಬರುವ ಜನರು ಬಹಳ ಸಂತೋಷದಿಂದ ಬಂದು ಹೋಗುತ್ತಿದ್ದರು. ಆದರೆ, ಈಗ ಉರುಸ್ ಹಬ್ಬದ ಸಮಯದಲ್ಲಿ 3 ದಿನಗಳ ಕಾಲ ಬಸ್ ಬಿಡುತ್ತೇವೆಂದು ಜಿಲ್ಲಾಡಳಿತ ತಿಳಿಸಿತ್ತು. ಇಲ್ಲಿ ನೋಡಿದರೆ ಬಸ್ಸು ಇಲ್ಲ, ಯಾವ ವಾಹನಗಳು ಇಲ್ಲ, ಅದರಲ್ಲೂ ಪ್ರವಾಸಿಗರು ಬರದಂತೆ 3 ದಿನಗಳ ಕಾಲ ನಿರ್ಬಂಧ ಮಾಡಿದ್ದಾರೆ. ಮಹಿಳೆಯರು, ಮಕ್ಕಳು ಉಪವಾಸದಲ್ಲೂ ದೂರದಿಂದ ಬರಬೇಕು. ಅವರೆಲ್ಲ ಏನು ಮಾಡಬೇಕು, ಕೆಲವರು ಬಡವರು ಹೇಗೋ ಹಣ ಉಳಿತಾಯ ಮಾಡಿ ಉರುಸ್ ಹಬ್ಬಕ್ಕೆ ಬರುತ್ತಾರೆ. ವಾಹನ ಬಾಡಿಗೆದಾರರು 100 ರೂ. ಬದಲು 500-1000 ಬಾಡಿಗೆ ಹೇಳಿದರೆ ಉರುಸ್ ಹಬ್ಬಕ್ಕೆ ಬರುವ ಜನರ ಪರಿಸ್ಥಿತಿ ಏನಾಗಬೇಕು” ಎಂದು ಅಭಿಬುಲ್ಲ ಖಾನ್ ಮತ್ತು ದಾವಣಗೆರೆಯ ಮಹಾಂತೇಶ್ ಈದಿನ ಡಾಟ್ ಕಾಮ್ ಜೊತೆ ಅಳಲು ತೋಡಿಕೊಂಡಿದ್ದಾರೆ.

ನೀರು ಹರಿಯುವ ಗುಡ್ಡಗಾಡು ಪ್ರದೇಶ ನಮ್ಮದು. ಮೋಟಾರಿಂದ ನೀರನ್ನು ಬೇಕಾದಷ್ಟು ಬಳಸಬಹುದು. ವಾಟರ್ ಮ್ಯಾನ್ ಇದ್ದರು. ಅವರು ಈಗ ನಿವೃತ್ತಿ ಆಗಿದ್ದಾರೆ. ಕೇಳಿದರೆ ಸಮಿತಿ ನಿರ್ಧಾರ ಮಾಡಬೇಕು, ಜಿಲ್ಲಾಧಿಕಾರಿಯವರಿಗೆ ಈ ವಿಚಾರ ನಿರ್ಧಾರ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಸದ್ಯಕ್ಕೆ ಬೇರೆಯವರನ್ನು ಉರುಸ್ ಸಮಯದಲ್ಲಿ ತಾತ್ಕಾಲಿಕವಾಗಿ ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಜವಾಬ್ದಾರಿ ಹೊತ್ತ ಇಓ ಅವರಿಗೆ ತಿಳಿಸಿದರೆ, ಬರಿ ಸರಿ ಎನ್ನುತ್ತಾರೆ ಬಿಟ್ಟರೆ ಏನೂ ಪ್ರಯೋಜನವಿಲ್. ಕೆಲಸ ಮಾತ್ರ ಶೂನ್ಯವಾಗಿದೆ. ನಮಗೆ ಉರುಸ್ ಸಮಯದಲ್ಲಿ ವಿದ್ಯುತ್, ನೀರಿನ ಸಮಸ್ಯೆ ಆಗಿದೆ. ನಿರಂತರವಾಗಿ ಅಧಿಕಾರಿಗೆ ಒತ್ತಡ ಹಾಕಿದ ನಂತರ ನೀರನ್ನು ತರಿಸಿ ಕೊಟ್ಟಿದ್ದಾರೆಂದು ಸ್ಥಳೀಯ ನಿವಾಸಿ ಮುನ್ನ ಈದಿನ ಡಾಟ್ ಕಾಮ್‌ಗೆ ತಿಳಿಸಿದ್ದಾರೆ.

ಹಾಗೆಯೇ, ಒಂದು ತಿಂಗಳ ಹಿಂದೆ ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದಾರೆ. ಆದರೆ ಸುಮಾರು ವರ್ಷಗಳಿಂದ ಈ ಭಾಗದಲ್ಲಿದ್ದ, ಸ್ಥಳೀಯ ಜನರು ಹಾಗೂ ಸಮಿತಿಯ ಸದಸ್ಯರನ್ನು ಬಿಟ್ಟು ಬೇರೆಯವರನ್ನು ಕರೆಸಿ ಸಭೆ ನಡೆಸಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಉರುಸ್ ಹಬ್ಬಕ್ಕೆ ಸರಿಯಾದ ತಯಾರಿ ಮಾಡಿಲ್ಲ, ಕುಂದು ಕೊರತೆ ಬಗ್ಗೆ ಕೇಳೋರು ಯಾರು ಇಲ್ಲದಾಗಿದೆ. ಸ್ಥಳೀಯರು ಹಾಗೂ ಪ್ರವಾಸಿಗರು ಪ್ಲಾಸ್ಟಿಕ್ ನೀರಿನ ಬಾಟಲ್ ಉಪಯೋಗಿಸಬಾರದು, ಪರಿಸರಕ್ಕೆ ಹಾನಿಯಾಗುತ್ತದೆಂದು ಆಡಳಿತಾಧಿಕಾರಿಗಳು ಹೇಳುತ್ತಾರೆ. ಆದರೆ, ಆಡಳಿತಾಧಿಕಾರಿಗಳು ಏನೂ ಮಾಡ್ತಾ ಇದ್ದಾರೆ? ಅವರು ಮಾತ್ರ ಪ್ಲಾಸ್ಟಿಕ್ ನೀರಿನ ಬಾಟಲಿಗಳು ಬಳಸಬಹುದಾ? ಎಂದು ಬಾಬಾ ಬುಡನ್ ಗಿರಿಯ ಸ್ಥಳೀಯರು ಹಾಗೂ ನೆರದಿದ್ದ ಜನರು ಆಡಳಿತ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇರೆ ಬೇರೆ ಆಚರಣೆಗಳು ಇದ್ದಾಗ ಒಂದು ಚೂರು ಅವ್ಯವಸ್ಥೆಯಾಗದ ರೀತಿಯಲ್ಲಿ ಆಡಳಿತ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಹಾಗೆಯೇ, ಪ್ರವಾಸಿಗರು ಹಾಗೂ ಪ್ರತಿಯೊಬ್ಬರೂ ಹಾಜರಾಗುವ ಅವಕಾಶವಿರುತ್ತದೆ. ಆದರೆ, ಉರುಸ್ ಆಚರಣೆ ವೇಳೆ ಮಾತ್ರ ಪ್ರವಾಸಿಗರ ನಿರ್ಬಂಧ ಹಾಗೂ ಬೇರೆ ಸಮುದಾಯದ ಜನರು ಬರದಂತೆ ನಿರ್ಬಂಧವನ್ನು ಯಾಕೆ ಹೇರಲಾಗುತ್ತದೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಹಾಗೆಯೇ ಎಲ್ಲಾ ಸಮುದಾಯದ ಸ್ಥಳೀಯ ನಿವಾಸಿಗಳು ಹಾಗೂ ನೆರದಿದ್ದ ಜನರು ಆಡಳಿತಾಧಿಕಾರಿಗಳನ್ನು ಟೀಕಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಮಾರ್ಚ್ 15 ರಿಂದ 17ರವರೆಗೆ ಪ್ರವಾಸಿಗರ ನಿರ್ಬಂಧ
ಬಾಬಾ ಬುಡನ್ ಗಿರಿಯಲ್ಲಿ ಹಿಂದೂ ಅಥವಾ ಮುಸ್ಲಿಂ ಸಮುದಾಯದವರು ಭಾವೈಕ್ಯತೆಯಿಂದ ಆಚರಿಸುವ ಹಬ್ಬ ಯಾವುದೇ ಇರಲಿ, ಆಚರಣೆಗಳು ಮಾಡುವಾಗ ಸರಿ ಸಮನಾದ ವ್ಯವಸ್ಥೆ ಆಗಬೇಕು. ಎಲ್ಲಾ ಸಮುದಾಯದವರು ಭಾಗಿಯಾಗಿ ಬರುವ ಜನರಿಗೆ ಸಂತೋಷ ಅನಿಸಬೇಕೇ ಹೊರತು ಹೊರೆಯಾಗಬಾರದು. ಹಾಗೆಯೇ, ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಆಗದಂತೆ ಆಡಳಿತ ವರ್ಗ ಹಾಗೂ ಸಮಿತಿಯವರು ಜಾಗರೂಕತೆಯಿಂದ ನೆರವೇರಿಸಬೇಕೆಂದು ದೂರದ ಊರುಗಳಿಂದ ಬಂದಂತಹ ಜನರು ಅಭಿಪ್ರಾಯ ವ್ಯಕಪಡಿಸಿದರು.