ಅಪಘಾತ ಮಾಡಿ ಕಾರು ನಿಲ್ಲಿಸದೇ ಹೋದ ಚಾಲಕನನ್ನು ಪ್ರಶ್ನಿಸಿದ ಹಿನ್ನೆಲೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಹರಿಹರಪುರ ಸಮೀಪದಲ್ಲಿ ನಡೆದಿದೆ.
ಉಡುಪಿಯಿಂದ ಕೊಪ್ಪಕ್ಕೆ ಮುಸ್ಲಿಂ ಸಮುದಾಯದ ಕುಟುಂಬವೊಂದು ಕಾರ್ಯಕ್ರಮಕ್ಕೆಂದು ಕಾರಿನಲ್ಲಿ ಬಂದಿದ್ದರು. ಕುಟುಂಬವು ಕಾರ್ಯಕ್ರಮ ಮುಗಿಸಿ ಉಡುಪಿಗೆ ವಾಪಸ್ ಹೋಗುವಾಗ ಹರಿಹರಪುರ ಬಳಿ ಕಾರು ಹಾಗೂ ಬೈಕಿನ ನಡುವೆ ಸಣ್ಣ ಅಪಘಾತ ಸಂಭವಿಸಿದೆ. ಕಾರು ಬೈಕಿಗೆ ಡಿಕ್ಕಿಯಾದರೂ ಚಾಲಕ ಕಾರು ನಿಲ್ಲಿಸದೇ ಹೋಗಿದ್ದು, ಹರಿಹರಪುರ ಯುವಕರು ಶೃಂಗೇರಿಯ ಕೆಲ ಯುವಕರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ನಂತರ ಸ್ಥಳೀಯ ಯುವಕರು ಶೃಂಗೇರಿಯಲ್ಲಿ ಕಾರು ಅಡ್ಡ ಹಾಕಿ ಅಪಘಾತದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ಶೃಂಗೇರಿ ಯುವಕರು ಕಾರಿನಲ್ಲಿದ್ದ ಉಡುಪಿ ಮೂಲದ ಕುಟುಂಬದವರ ಮೇಲೆ ಅವಾಚ್ಯ ಶಬ್ದ ಬಳಕೆ ಹಾಗೂ ಕೊಲೆ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಶೃಂಗೇರಿ ಯುವಕರ ಮೇಲೂ ಕೂಡ ಹಲ್ಲೆ ಮಾಡಿದ್ದಾರೆ ಎಂದು ಪ್ರತ್ಯಾರೋಪ ಮಾಡಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿದ್ದು, ಹಲ್ಲೆಗೊಳಗಾದ ಉಡುಪಿ ಮೂಲದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಟ್ರ್ಯಾಕ್ಟರ್ ಪಲ್ಟಿ; ಕಾರ್ಮಿಕರ ಸ್ಥಿತಿ ಗಂಭೀರ
ಈ ಪ್ರಕರಣ ಕುರಿತು ಕೊಪ್ಪ ಹಾಗೂ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಎಸ್‌ಪಿ ವಿಕ್ರಂ ಅಮಟೆ ಘಟನೆಯ ಬಗ್ಗೆ ಪರಿಶೀಲಿಸಿದ್ದಾರೆ.
