ತುಂಗಾ ನದಿ ದಡದಲ್ಲಿರುವ ಶೃಂಗೇರಿ ಶ್ರೀ ಶಾರದಾಂಬ ದೇವಾಲಯ ಐತಿಹಾಸಿಕ ಪ್ರವಾಸಿ ತಾಣ. ಸುತ್ತಲಿನ ಪ್ರಶಾಂತ ವಾತಾವರಣ, ಹಸಿರಿನಿಂದ ಕಂಗೊಳಿಸುವ ಮರಗಿಡಗಳು. ಪಕ್ಕದಲ್ಲೇ ಹರಿಯುವ ತುಂಗಾ ನದಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಈ ಪವಿತ್ರ ನದಿಗೆ ಇದೀಗ ಕಲುಷಿತ ಮಣ್ಣಿನ ಆತಂಕ ಎದುರಾಗಿದೆ. ನದಿಯ ದಡದಲ್ಲಿ ಕಲುಷಿತ ಮಣ್ಣು ಹಾಕುವುದರಿಂದ ಮುಂದಿನ ದಿನಗಳಲ್ಲಿ ನದಿಯ ನೀರೂ ಕಲುಷಿತಗೊಂಡು ಅನೇಕ ಸಮಸ್ಯೆಗಳಿಗೆ ಮುನ್ನುಡಿ ಬರೆಯಬಹುದು ಎನ್ನುವುದು ಸ್ಥಳೀಯ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.

ಶೃಂಗೇರಿ ಸುತ್ತ ಮುತ್ತ ಪ್ರವಾಸೋದ್ಯಮ ಉತ್ತಮವಾಗಿದ್ದು, ಈ ಭಾಗದಲ್ಲಿ ದಿನಂದಿಂದ ದಿನಕ್ಕೆ ಜಾಗದ ಬೆಲೆ ಕೂಡ ಹೆಚ್ಚುತ್ತಿದೆ. ಸಾಕಷ್ಟು ಜಮೀನು ಹೊಂದಿರುವ ರೈತರು ಕೃಷಿ ಭೂಮಿಯನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಆ ಜಾಗವನ್ನು ಹಣ ಕೊಟ್ಟು ಕೊಂಡುಕೊಳ್ಳುವ ಬಂಡವಾಳಶಾಹಿಗಳು ಕೃಷಿ ಭೂಮಿಯನ್ನು ಸೈಟ್‌ಗಳನ್ನಾಗಿ ಮಾಡಿಕೊಳ್ಳಲು ಯೋಜಿಸುತ್ತಿದ್ದಾರೆ. ಅದೇನು ತಪ್ಪು ಎನ್ನುವುದು ಜನರ ಅಬಿಪ್ರಾಯವಲ್ಲ. ಆದರೆ, ಕೃಷಿ ಭೂಮಿಯನ್ನು ತೆಗೆದುಕೊಂಡು ಸೈಟ್ ಮಾಡುತ್ತಿರುವ ಜಾಗ ಹೇಳಿ ಕೇಳಿ ತುಂಗಾ ನದಿ ದಂಡೆ. ಜಾಗ ಕೊಂಡವರು ಎಲ್ಲಿಂದಲೋ ಮಣ್ಣು ತಂದು ಹಾಕಿ ಮಟ್ಟ ಮಾಡುತ್ತಿದ್ದಾರೆ. ಆ ಮಣ್ಣಿನಿಂದಲೇ ಮುಂದಿನ ದಿನಗಳಲ್ಲಿ ತೊಂದರೆಯಾಗುತ್ತದೆ ಎನ್ನುವುದು ಅವರ ಆತಂಕ ಹೆಚ್ಚಾಗಲು ಕಾರಣವಾಗಿದೆ.

ದಡದ ಸುತ್ತ ಮನೆಗಳು, ಕೃಷಿ ಭೂಮಿ, ಶೃಂಗೇರಿ ಮಠ, ಸದಾ ಹರಿಯುವ ತುಂಗಾ ನದಿಯ ಹೊಳೆ ಇವೆ. ಈ ರೀತಿ ಕೊಂಡುಕೊಂಡ ನಿರ್ದಿಷ್ಟ ಭೂಮಿ ಮೇಲೆ ಮಣ್ಣು ಹರಡುವುದರಿಂದ ಸುತ್ತಲಿನ ಪ್ರದೇಶ ಹಳ್ಳವಾಗಿ ಮಾರ್ಪಡುತ್ತದೆ. ಮಳೆಗಾಲದ ಸಮಯದಲ್ಲಿ ಸುಮಾರು 200 ಇಂಚು ಮಳೆ ಬೀಳುತ್ತದೆ. ಆಗ ತಗ್ಗು ಪ್ರದೇಶದಲ್ಲಿರುವವರ ಪಾಡು ಕೇಳೋರು ಯಾರು..? ಮಠ ಮನೆಗಳೆನ್ನದೆ ಎಲ್ಲವೂ ನೀರಿನಲ್ಲಿ ಮುಳಿಗಿದರೆ ಸಾಮಾನ್ಯರ ಜೀವನ ಮುರಾಬಟ್ಟೆಯಾಗಲಿದೆ. ಅದನ್ನೆಲ್ಲ ಗಮನದಲ್ಲಿಟ್ಟುಕೊಳ್ಳದೆ ಏಕಾಏಕಿ 10 ರಿಂದ 12 ಅಡಿ ಎತ್ತರಕ್ಕೆ ಗುಡ್ಡದ ಮಣ್ಣನ್ನು ಹಾಕಿಸಿ ಮಟ್ಟ ಮಾಡುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಅಲ್ಲಿನ ನಿವಾಸಿಗಳ ವಾದ.
ಈ ಮಟ್ಟಕ್ಕೆ ಮಣ್ಣು ಹಾಕುತ್ತಿರುವುದರಿಂದ ಮಳೆಗಾಲದಲ್ಲಿ ಇಡೀ ಶೃಂಗೇರಿ ಅರ್ಧ ಮುಳುಗಡೆ ಆಗುತ್ತದೆ. ಮಣ್ಣು ಹಾಕುತ್ತಿರುವ ಪ್ರದೇಶದಲ್ಲಿ ಬೀಳುವ ಮಳೆ ನೀರು ನರಸಿಂಹ ಪರ್ವತದಿಂದ ಹಾದು ಕಿಗ್ಗದ ಮೂಲಕ ಎಕ್ಕನಹಳ್ಳಕ್ಕೆ ಬಂದು ಸೇರುತ್ತದೆ. ಪಕ್ಕದಲ್ಲೇ ಹರಿಯುವ ತುಂಗಾ ನದಿಯಲ್ಲೂ ಈ ನೀರು ಹರಿಯುತ್ತದೆ. ಮಳೆ ನೀರು ಆ ಮಣ್ಣಿನಲ್ಲಿ ಸೇರಿ, ಮಣ್ಣಿನಲ್ಲಿರುವ ರಾಸಾಯನಿಕ ಅಂಶದ ನೀರು ಎಕ್ಕನಹಳ್ಳದ ಮೂಲಕ ತುಂಗಾ ನದಿಗೆ ಸೇರುತ್ತದೆ. ಇದರಿಂದ ಪ್ರಾಣಿ ಪಕ್ಷಿಗಳಿಗೆ, ಪರಿಸರಕ್ಕೆ ತೊಂದರೆಯಾಗುವುದರಲ್ಲಿ ಸಂಶಯವಿಲ್ಲ. ಹಾಗೂ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ನದಿಯಲ್ಲಿ ಸ್ನಾನ ಮಾಡುತ್ತಾರೆ. ಇದರಿಂದ ಅನೇಕ ರೋಗಗಳಿಗೆ ತುತ್ತಾಗಬಹುದು. ರಾಸಾಯನಿಕ ಅಂಶವಿರುವ ನೀರು ತೋಟಕ್ಕೆ ಹರಿದು ಬಂದು ಸೇರುತ್ತದೆ. ಇದರಿಂದ ತೋಟದ ಬೆಳೆಗಳು ಕೂಡ ನಾಶವಾಗುವುದರಲ್ಲಿ ಅನುಮಾನವಿಲ್ಲ ಎಂದು ಸಾರ್ವಜನಿಕರು ಹಾಗೂ ಕೃಷಿ ಭೂಮಿಯ ರೈತರು ಈದಿನ ಡಾಟ್ ಕಾಮ್ ಬಳಿ ಆತಂಕ ವ್ಯಕ್ತಪಡಿಸಿದರು.

ಪರಿಸರ ಸಂರಕ್ಷಣೆಯ ದೃಷ್ಟಿಯಿಂದ, ಮಣ್ಣು ಹಾಕಿ ಮಟ್ಟ ಮಾಡುತ್ತಿರುವ ಜಾಗದಲ್ಲಿ ಸುತ್ತಲೂ ಚರಂಡಿ ನಿರ್ಮಾಣ ಮಾಡಬೇಕು, ಮಳೆನೀರು ಸರಾಗವಾಗಿ ಎಕ್ಕನಹಳ್ಳದ ಮೂಲಕ ತುಂಗಾ ನದಿಗೆ ಹಾದು ಹೋಗುವಂತೆ ನಾಲೆ ತೆಗೆಯಬೇಕು. ಇದರಿಂದ ರೈತರ ಕೃಷಿ ಭೂಮಿ ಸುರಕ್ಷಿತವಾಗಿರಲು ಹಾಗೂ ಮಳೆ ನೀರು ತುಂಗಾ ನದಿಗೆ ಸೇರಲು ಅನುಕೂಲವಾಗುತ್ತದೆಂದು ಅಲ್ಲಿನ ರೈತರು ಹಾಗೂ ಸಾರ್ವಜನಿಕರು ಮನವಿ ಮಾಡಿದರು.
ಪರಿಸರವಾದಿ ಕಲ್ಕುಳಿ ವಿಠಲ್ ಹೆಗ್ಡೆ ಅವರನ್ನು ಮಾತನಾಡಿಸಲಾಗಿ, “ಈ ವಿಷಯ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಭೂಮಿಯನ್ನು ಹಣ ಕೊಟ್ಟು ಖರೀದಿ ಮಾಡಲಾಗಿದೆ. ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ಹಾರಿಕೆಯ ಉತ್ತರ ಕೊಡುತ್ತಾರೆ. ಮಣ್ಣಿನಲ್ಲಿರುವ ರಾಸಾಯನಿಕ ಅಂಶ ಮಳೆ ಬಂದು ಆ ಮಣ್ಣಿನಲ್ಲಿ ಬೆರೆತು ಆ ನೀರು ತುಂಗಾ ಹೊಳೆಗೆ ಸೇರಿದರೆ, ಪರಿಸರಕ್ಕೆ ಹಾನಿಯಾಗುತ್ತದೆ. ಆಡಳಿತ ಅಧಿಕಾರಿಗಳೇ ಈ ರೀತಿ ಹೇಳಿದರೆ ಪರಿಸರ ಸಂರಕ್ಷಣೆ ಯಾರ ಹೊಣೆಯಾಗಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟೋ ಬಾರಿ ಮನವಿ ಮಾಡಿದರು ಏನೂ ಪ್ರಯೋಜನವಾಗಿಲ್ಲ” ಎಂದು ಅಳಲು ತೋಡಿಕೊಂಡರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು: ಪ್ರೀತಿಸಿದವನ ಜೊತೆ ಮಗಳ ಮದುವೆ ಮಾಡಿಸಿದ್ದಕ್ಕೆ ತಂದೆ-ತಾಯಿಯನ್ನು ಬಹಿಷ್ಕರಿಸಿದ ಸಂಬಂಧಿಕರು?
ಸಂಬಂಧಪಟ್ಟ ಅಧಿಕಾರಿಗಳು ಇನ್ನು ಮುಂದಾದರೂ ಸಮಸ್ಯೆಯ ಕುರಿತು ಗಮನ ಹರಿಸುವರೇ.. ಕಲುಷಿತ ಮಣ್ಣು ನದಿ ಸೇರದಂತೆ ಕ್ರಮವಹಿಸುವರೇ.. ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರೊಂದಿಗೆ ಕೈಜೋಡಿಸುವರೇ ಎಂದು ಕಾದು ನೋಡಬೇಕಿದೆ.
