ಹಣಕಾಸಿನ ವಿಚಾರಕ್ಕೆ ವೃದ್ಧ ದಂಪತಿಯ ಹತ್ಯೆ ನಡೆದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೊಳಗಾಮೆ ಗ್ರಾಮದಲ್ಲಿ ನಡೆದಿದೆ.
ವೃದ್ಧ ದಂಪತಿಯನ್ನು ಮೊಮ್ಮಗನೇ ಹತ್ಯೆ ಮಾಡಿದ್ದು, ಮೃತರು ಮೂಲತಃ ಗುಬ್ಬಿಯವರಾದ ಬಸಪ್ಪ(65) ಅವರ ಪತ್ನಿ ಲಲಿತಮ್ಮ(58) ಎಂದು ತಿಳಿದುಬಂದಿದೆ. ಹತ್ಯೆ ಮಾಡಿದ ಆರೋಪಿ ಮೊಮ್ಮಗ ನಿಶಾಂತ್ ಪರಾರಿಯಾಗಿದ್ದಾನೆ. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಚಿಕ್ಕಮಗಳೂರು ತಾಲೂಕು ಮಲ್ಲಂದೂರು ಕೊಳಗಾಮೆ ಗ್ರಾಮದ ಕಾಫಿತೋಟದಲ್ಲಿ ಕಳೆದ 25 ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದ ಈ ವೃದ್ಧ ದಂಪತಿ ಕೊಳಗಾಮೆ ಗ್ರಾಮದಲ್ಲಿ ವಾಸವಾಗಿದ್ದರು. ಬುಧವಾರ ರಾತ್ರಿ ಬಸಪ್ಪನ ಅಣ್ಣನ ಮಗಳ ಮಗನಾದ ನಿಶಾಂತ್ ಬಸಪ್ಪನ ಮನೆಗೆ ಬಂದಿದ್ದು, ನಿಶಾಂತ್ ಹಣಕಾಸಿನ ವಿಚಾರಕ್ಕೆ ಬಸಪ್ಪ ಹಾಗೂ ಲಲಿತಮ್ಮ ದಂಪತಿಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ದಂಪತಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಾಲಕಿಗೆ ಲೈಂಗಿಕ ದೌರ್ಜನ್ಯ : ಆರೋಪಿಗೆ 35 ವರ್ಷ ಜೈಲು ಶಿಕ್ಷೆ
ಮೊಮ್ಮಗ ನಿಶಾಂತ್ ಬೆಂಗಳೂರಿನಲ್ಲಿದ್ದು, ಆಗಾಗ್ಗೆ ಬಸಪ್ಪ, ಲಲಿತಮ್ಮ ಅವರ ಮನೆಗೆ ಬಂದು ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗುತ್ತಿದೆ.
ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳಕ್ಕೆ ಮಲ್ಲಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
