ಅರಣ್ಯ ಕಾಯ್ದೆ ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿ ತಿರಸ್ಕಾರ ಮಾಡಿದ್ದರೂ ಕೂಡಾ ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ. ಇದರಿಂದ ಮಲೆನಾಡಿನ ಜನ ಆತಂಕದಿಂದ ಬದುಕುವಂತಾಗಿದೆ.
ಅರಣ್ಯ ಒತ್ತುವರಿ ಮಾಡಿದವರೆಂದು ಮಲೆನಾಡಿನ ರೈತರು ಕೃಷಿ ಮಾಡಿಕೊಂಡ ಭೂಮಿಯಿಂದ ತೆರವುಗೊಳಿಸಲು ಅರಣ್ಯ ಇಲಾಖೆ ತಯಾರಿ ನಡೆಸಿದ್ದಾರೆ. ಈ ಒತ್ತುವರಿ ತೆರವು ಹಾಗೂ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಮಲೆನಾಡಿನ ಜನತೆ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದೆ.

ಜಿಲ್ಲೆಯ ಎಲ್ಲ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಾರು ಜನ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಸೂರಿಗಾಗಿ ಹಾಗೂ ಈಗಾಗಲೇ ಸರ್ಕಾರಿ ಭೂಮಿಯಲ್ಲಿ ಮನೆ, ಗುಡಿಸಲು ನಿರ್ಮಿಸಿಕೊಂಡಿದ್ದಾರೆ. ನಿವೇಶನ ಹಕ್ಕುಪತ್ರಕ್ಕಾಗಿ, ಎಷ್ಟೋ ಬಾರಿ ಅರ್ಜಿ ಸಲ್ಲಿಸಿದ್ದಾರೆ. ಕಂದಾಯ ಭೂಮಿಯನ್ನು ಸೆಕ್ಷನ್ 4 ಎಂದು ಘೋಷಿಸಿ ಮೀಸಲು ಅರಣ್ಯ ಎಂದು ಮಾಡಲಾಗಿದೆ.
ಮಲೆನಾಡಿನಲ್ಲಿ ಸೆಕ್ಷನ್ 4 ಅಂದ್ರೆ ಏನು?
ಯಾವುದೇ ಸರ್ಕಾರಿ ಭೂಮಿಯನ್ನು ರಾಜ್ಯ ಸರ್ಕಾರಗಳು ಮೀಸಲು ಅರಣ್ಯ ಮಾಡಲು ಉದ್ಯೋಷಣೆ ಹೊರಡಿಸುವುದೇ ಸೆಕ್ಷನ್ 4 ಆಗಿದೆ. 2011ರಿಂದ ಮಲೆನಾಡಿನ ಬಹುತೇಕ ಕಂದಾಯ ಭೂಮಿಯನ್ನು ಸರ್ಕಾರ ಸೆಕ್ಷನ್ 4 ಎಂದು ಘೋಷಿಸಿದೆ. ಪ್ರತಿ ಗ್ರಾಮದಲ್ಲೂ ನೂರಾರು ಎಕರೆ ಕಂದಾಯ ಭೂಮಿ ಸೆಕ್ಷನ್ 4 ಎಂದು ಘೋಷಿಸಿ ಗಡಿ ನಿರ್ಮಿಸಿದ್ದಾರೆ.

ಅರಣ್ಯ ಇಲಾಖೆ ಕನಿಷ್ಠ ಗ್ರಾಮಗಳ ಜನರನ್ನೂ ಕೇಳದೆ ಬಡವರ ನಿವೇಶನ, ರೈತರ ಕೃಷಿ ಭೂಮಿ, ಕೆರೆ, ಬಾವಿ, ರಸ್ತೆ ರೈತರ ಹಿಡುವಳಿಯನ್ನೂ ಬಿಡದೆ ಸೆಕ್ಷನ್ 4 ಎಂದು ಘೋಷಣೆ ಹೊರಡಿಸಿದೆ. ಮಲೆನಾಡಿನ ಜನತೆ ಸತ್ತರೂ ಸಮಾಧಿ ಮಾಡಲು ಅರಣ್ಯ ಇಲಾಖೆ ಒಪ್ಪಿಗೆ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೀಸಲು ಅರಣ್ಯ ಮಾಡಿದರೆ ಜನರಿಗೆ ಆಗುವ ತೊಂದರೆಗಳೇನು? ಮೀಸಲು ಅರಣ್ಯ ಎಂದು ಘೋಷಿಸಿದರೆ ಅಂತಹ ಭೂಮಿಯಲ್ಲಿ ಮಾನವ ಹಸ್ತಕ್ಷೇಪವನ್ನು ಸಂಪೂರ್ಣ ನಿಷೇದಿಸಿ, ನಿರ್ಬಂಧ ವಿಧಿಸಲಾಗುತ್ತದೆ. ಯಾವೂದೇ ಹೊಸ ಮಂಜೂರಾತಿ ಮಾಡಲಾಗುವುದಿಲ್ಲ, ರಸ್ತೆ ನಿರ್ಮಿಸುವಂತಿಲ್ಲ, ಸೊಪ್ಪು, ಸೆದೆ ಸೇರಿದಂತೆ ಸಂಪೂರ್ಣ ಅರಣ್ಯ ಉತ್ಪನ್ನಗಳನ್ನು ಉಪಯೋಗಿಸುವಂತಿಲ್ಲ. ಬೆಂಕಿ ಬಳಸುವಂತಿಲ್ಲ, ಹೊಸ ಕಟ್ಟಡ ನಿರ್ಮಿಸುವಂತಿಲ್ಲ, ವಿದ್ಯುತ್ ತಂತಿ ಎಳೆಯುವ ಹಾಗಿಲ್ಲ ಅಂತಹ ಜಾಗದಲ್ಲಿ ಹರಿಯುವ ನದಿಗಳಲ್ಲಿ ಮೀನು ಹಿಡಿಯುವುದೂ ಕೂಡಾ ಅಪರಾಧವಾಗುತ್ತದೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ತೋಟದಲ್ಲಿ ಪ್ರತ್ಯಕ್ಷವಾದ ಆನೆ ಗುಂಪು: ಜೀವ ಭಯದಿಂದ ಓಡಿದ ಕಾರ್ಮಿಕರು
ಕುದುರೆ ಮುಖ ರಾಷ್ಟ್ರೀಯ ಉದ್ಯಾನದ ಹೆಸರಲ್ಲಿ ಜನರ ಎತ್ತಂಗಡಿಯಾಗುತ್ತಿದೆ. ಒತ್ತುವರಿ ಖುಲ್ಲಾ ಹೆಸರಲ್ಲಿ ಸಾವಿರಾರು ರೈತರ ಹೆಸರು ಪಟ್ಟಿ ಮಾಡಿಕೊಂಡು ಅರಣ್ಯ ಇಲಾಖೆ ಕೋರ್ಟ್ ಆದೇಶದ ಹೆಸರಲ್ಲಿ ನಾವು ನೆಟ್ಟು ಬೆಳೆಸಿದ ಗಿಡ ಮರಗಳನ್ನು ಕಡಿಯಲು ತಯಾರಿ ನಡೆಸಿದೆ. ಕೇಂದ್ರ ಸರ್ಕಾರ ಜಗತ್ತಿನ ಪರಿಸರ ಸಮತೋಲನಕ್ಕೆ, ಪರಿಸರ ಉಳಿವಿಗಾಗಿ ಪರಿಸರ ಸೂಕ್ಷ್ಮ ವಲಯ, ಬಫರ್ ಜೋನ್ ಹೆಸರಲ್ಲಿ ಇಡೀ ಮಲೆನಾಡನ್ನೇ ಖಾಲಿ ಮಾಡಿಸುವ ಕಸ್ತೂರಿ ರಂಗನ್ ವರದಿ ಜಾರಿಗೆ ಅಧಿಸೂಚನೆ ಹೊರಡಿಸಿದೆ.