ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದ್ದು, ಅಪಘಾತಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣವೆಂದು ಆರೋಪಿಸಿ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಮೃತದೇಹವಿಟ್ಟು ಪ್ರತಿಭಟನೆ ನಡೆಸಲಾಗಿದೆ.
ಚಿಕ್ಕಮಗಳೂರಿನಿಂದ ಮೈಸೂರಿಗೆ ಹೋಗಿದ್ದ ಕೆಎಸ್ಆರ್‌ಟಿಸಿ ಬಸ್ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಕೆಟ್ಟುನಿಂತಿತ್ತು. ಬೆಳಿಗ್ಗೆ 9ಕ್ಕೆ ಬಸ್ ಕೆಟ್ಟುಹೋಗಿತ್ತು. ಆದರೆ, ಮೆಕ್ಯಾನಿಕ್ ರಾತ್ರಿ 9ಕ್ಕೆ ಹೋಗಿದ್ದರು. ಚಾಲಕ ಹಾಗೂ ನಿರ್ವಾಹಕ ಬಸ್ ದುರಸ್ತಿಯಾಗುವುದನ್ನು ಕಾಯುತ್ತಿದ್ದರು. ಇದೇ ವೇಳೆ ಡ್ರೈವರ್‌ಗೆ ಬಸ್‌ನ ಕಿಟಕಿಯಿಂದ ರಾತ್ರಿ ಊಟ ನೀಡಲು ನಿರ್ವಾಹಕ ಶ್ರೀನಾಥ್(40) ಹೋಗುತ್ತಿದ್ದರು. ಇದೇ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು, ನಿರ್ವಾಹಕ ಶ್ರೀನಾಥ್ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಈ ಘಟನೆಯನ್ನು ಖಂಡಿಸಿ ಕಂಡೆಕ್ಟರ್ ಶ್ರೀನಾಥ್ ಅವರ ಮೃತದೇಹವನ್ನು ಚಿಕ್ಕಮಗಳೂರು ಡಿಪೋದಲ್ಲಿಟ್ಟು ದಲಿತ ಸಂಘಟನೆಗಳಿಂದ ಬುಧವಾರ ಪ್ರತಿಭಟನೆ ನಡೆಸಿದ್ದು, ಕಂಡಕ್ಟರ್ ಸಾವಿಗೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಸ್ಥಳೀಯ ಡಿಪೋ ಅಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದು, ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರ ವಹಿಸುವುದಾಗಿ ಭರವಸೆ ನೀಡಿದರು. ಆದರೂ ಪಟ್ಟು ಬಿಡದ ಚಾಲಕ ನಿರ್ವಾಹಕರು ಚಿಕ್ಕಮಗಳೂರು ಡಿಪೋ ಮ್ಯಾನೇಜರನ್ನು ಕೂಡಲೇ ಅಮಾನತುಗೊಳಿಸುವಂತೆ ಆಗ್ರಹಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಪೋ ಮ್ಯಾನೇಜರ್ ಬೇಬಿ ಬಾಯಿ ಎಂಬುವವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.
ಹೆಸರು ಹೇಳಲಿಚ್ಛಿಸದ ಕೆಎಸ್‌ಆರ್‌ಟಿಸಿ ನಿರ್ವಾಹಕ ಕಂ ಚಾಲಕ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹೊಳೆನರಸೀಪುರದ ದಾರಿ ಮಧ್ಯದಲ್ಲಿ ಬೆಳಿಗ್ಗೆ 9ಕ್ಕೆ ಗಾಡಿ ಕೆಟ್ಟು ನಿಂತಿದೆ. ಆದರೆ, ರಾತ್ರಿ 9ಗಂಟೆಯಾದರೂ ಬಸ್ ದುರಸ್ತಿಗೆ ಯಾವುದೇ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.
“ಹತ್ತಿರದಲ್ಲಿಯೇ ಇದ್ದ ಹೊಳೆನರಸೀಪುರದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಇರಲಿಲ್ಲವೇ?, ಬೆಳಿಗ್ಗೆ ಕೆಟ್ಟುನಿಂತ ಗಾಡಿಯನ್ನು ರಾತ್ರಿಯಾದರೂ ಪರಿಶೀಲಿಸಿಲ್ಲ ಎನ್ನುವುದಾದರೆ ಕೆಎಸ್‌ಆರ್‌ಟಿಸಿ ಕಾರ್ಮಿಕರನ್ನು ಸರ್ಕಾರ ಹಾಗೂ ಮೇಲಧಿಕಾರಿಗಳು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ. ಚಿಕ್ಕಮಗಳೂರು ವಿಭಾಗದ ಗಾಡಿ ಕೆಟ್ಟುನಿಂತರೆ ಸ್ಥಳೀಯ ಡಿಪೋ ಅಧಿಕಾರಿಗಳು ಗಾಡಿ ದುರಸ್ತಿ ಕೈಗೊಳ್ಳಬಾರದೆಂಬ ನಿಯಮಗಳಿವೆಯ” ಎಂದು ಪ್ರಶ್ನಿಸಿದ್ದಾರೆ.
“ಯಾವುದೇ ವಿಭಾಗದ ಗಾಡಿಗಳು ಮಾರ್ಗ ಮಧ್ಯೆ ಕೆಟ್ಟು ನಿಂತರೆ, ಹತ್ತಿರದ ಡಿಪೋಗೆ ತಿಳಿಸುವುದು ಸಹಜ. ಅಂತೆಯೇ ಚಾಲಕ ಮತ್ತು ನಿರ್ವಾಹಕರು ಹೊಳೆನರಸಿಪುರ ಡಿಪೋಗೆ ಮಾಹಿತಿ ನೀಡಿದರೂ ಕೂಡ ಡಿಪೋ ಮ್ಯಾನೇಜರ್, ಚಾರ್ಜ್ ಮ್ಯಾನ್ ಹಾಗೂ ಸ್ಥಳೀಯ ಆಧಿಕಾರಿಗಳು ಹೇಗೆ ಸ್ಪಂದಿಸಿದ್ದಾರೆ ಎಂಬುದು ನಿರ್ವಾಹಕನ ಸಾವಿನಿಂದ ತಿಳಿಯುತ್ತದೆ” ಎಂದು ಅವಲತ್ತುಕೊಂಡರು.
“ಬೆಳಿಗ್ಗೆ ಕೆಟ್ಟು ನಿಂತ ಗಾಡಿಯನ್ನು ರಾತ್ರಿಯಾದರೂ ತೆಗೆದುಕೊಂಡು ಹೋಗದವರು, ನಿರ್ವಾಹಕನಿಗೆ ಅಪಘಾತವಾದ ಬೆನ್ನಲ್ಲೇ ಗಾಡಿಯನ್ನು ಅಲ್ಲಿಂದ ತೆರವುಗೊಳಿಸಿದ್ದು, ಹೊಳೆನರಸೀಪುರ ಡಿಪೋಗೆ ತೆಗೆದುಕೊಂಡು ಹೋಗಿದ್ದಾರೆ. ಅಪಘಾತಕ್ಕೀಡಾದ ನಿರ್ವಾಹಕ ಶ್ರೀನಾಥ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಕೆಎಸ್‌ಆರ್‌ಟಿಸಿ ಕಾರ್ಮಿಕರ ಸ್ಥಿತಿ ಮೇಲಧಿಕಾರಿಗಳಿಗೆ ಅರ್ಥವಾಗಬೇಕಾದರೆ ಅಮಾಯಕರಿಗೆ ಸಾವು ನೋವುಗಳು ಸಂಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ವಿಕ್ರಂ ಗೌಡ ಎನ್’ಕೌಂಟರ್ ; ಸೂಕ್ತ ತನಿಖೆಗೆ ಆಗ್ರಹಿಸಿ ದಸಂಸ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ
“ಚಾಲಕ ನಿರ್ವಾಕರ ತಪ್ಪುಗಳಾದಲ್ಲಿ ಹೆಜ್ಜೆಹೆಜ್ಜೆಗೂ ನೋಟಿಸ್ ಕೊಡುವ ಅಧಿಕಾರಿಗಳು ಕಾರ್ಮಿಕರ ಸಂಕಷ್ಟಗಳಲ್ಲಿ ಎಲ್ಲಿಗೆ ಹೋಗಿರುತ್ತಾರೆ? ನಾವುಗಳು ತಮ್ಮ ಕುಟುಂಬಗಳನ್ನು ಬಿಟ್ಟು ಸಾರ್ವಜನಿಕರ ಸೇವೆಯಲ್ಲಿ ತೊಡಗಿಕೊಂಡಿರುತ್ತೇವೆ. ಆದರೆ ಅಧಿಕಾರಿಗಳು ನಮ್ಮೊಟ್ಟಿಗೆ ತುಂಬಾ ಹೀನಾಯವಾಗಿ ನಡೆದುಕೊಳ್ಳುತ್ತಾರೆ. ನಿಜವಾಗಿಯೂ ಅದೊಂದು ನರಕವೆಂಬಂತೆ ಭಾಸವಾಗುತ್ತೆ. ಇದರ ಜತೆಗೆ ನಮ್ಮ ಕುಟುಂಬಗಳಲ್ಲಿ ನಮಗೆ ಸ್ಪಂದಿಸದ ಜೀವಗಳಿಲ್ಲವೆಂದರೆ ನಿಜಕ್ಕೂ ಈ ಜೀವನವೇ ಬೇಡವೆಂಬ ಜಿಗುಪ್ಸೆ ಉಂಟಾಗುತ್ತದೆ. ನಮ್ಮ ಸಂಗಾತಿಗಳು ನಮಗೆ ಬೆನ್ನೆಲುಬಾಗಿ ನಿಲ್ಲುವ ಕಾರಣ ಕೆಲಸದ ಪಾಡಿಗೆ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ” ಎಂದು ಮನದಾಳದ ಮಾತುಗಳನ್ನಾಡಿದರು.
