ನಿವೃತ್ತ ಸರ್ಕಾರಿ ನೌಕರರೊಬ್ಬರು ‘ಡಿಜಿಟಲ್ ಅರೆಸ್ಟ್’ ಗೆ ಒಳಗಾಗಿ 37 ಲಕ್ಷ ಹಣ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವ್ಯಾಪ್ತಿಯಲ್ಲಿ ವರದಿಯಾಗಿದೆ.
ದೆಹಲಿಯಿಂದ ಸಿಬಿಐ ಅಧಿಕಾರಿ ಸುನಿಲ್ ಗೌತಮ್ ಎಂಬ ಹೆಸರಿನಲ್ಲಿ 8310681568 ಸಂಖ್ಯೆಯಿಂದ ವಾಟ್ಸಪ್ ವಿಡಿಯೋ ಕರೆ ಮಾಡಿ, ಯಾವುದೇ ಕಾರಣಕ್ಕೂ ಕಾಲ್ ಮಾಡದಂತೆ ಸಿಬಿಐ ಐಡಿ ಕಾರ್ಡ್ ತೋರಿಸಿ, ನಿಮ್ಮ ಹೆಸರಿನಲ್ಲಿರುವ ಆಧಾರ್ ಕಾರ್ಡನ್ನು ಉಪಯೋಗಿಸಿ ಮನಿ ಲಾಂಡರಿಂಗ್ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.
ಈ ಕೇಸ್ ಕೋರ್ಟ್ ನಲ್ಲಿದೆ, ಹೀಗಾಗಿ ನಿಮ್ಮ ಖಾತೆಯಲ್ಲಿರುವ ಎಲ್ಲ ಹಣವನ್ನು ಆರ್.ಬಿ.ಐ ನಿಂದ ಪರಿಶೀಲನೆ ಮಾಡಿಸಿ ನಿಮ್ಮ ಹಣವನ್ನು ನಿಮಗೆ ಮರಳಿ ನೀಡುವುದಾಗಿ ಹೇಳಿದ್ದರಿಂದ ಸಿಬಿಐ ಅಧಿಕಾರಿ ಎಂದು ನಂಬಿ ನಿವೃತ್ತ ನೌಕರ ಹಂತ ಹಂತವಾಗಿ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣದ ಜೊತೆಗೆ ತಮ್ಮ ಪತ್ನಿಯ ಖಾತೆಯಲ್ಲಿದ್ದ ಒಟ್ಟು 37 ಲಕ್ಷ ಹಣವನ್ನು ವರ್ಗಾಯಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಹಣ ಕೊಟ್ಟವರಿಗೆ ಮಾತ್ರ ಆದ್ಯತೆ; ಬಡವರ ಗೋಳಿಗೆ ಕಿವಿಗೊಡದ ತಾಲೂಕು ಆಡಳಿತ
ಅಲ್ಲದೆ, ಈ ವಿಷಯವನ್ನು ಯಾರಿಗೂ ಹೇಳದೆ ಆರು ತಿಂಗಳು ಕಳೆದರೂ ಹಣ ವಾಪಸ್ ಬರದೆ ಇದ್ದುದರಿಂದ ವಂಚನೆಗೆ ಒಳಗಾಗಿರುವುದು ತಿಳಿದು ಶೃಂಗೇರಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ಇತ್ತೀಚೆಗೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದು ವೇಳೆ ಯಾರಾದರೂ ಸೈಬರ್ ಕ್ರೈಂಗೆ ಒಳಗಾದರೆ ಅಂತಹವರು ಸಹಾಯವಾಣಿ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಬೇಕೆಂದು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ತಿಳಿಸಿದ್ದಾರೆ.