ಅನಧಿಕೃತ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಾರ್ವಜನಿಕ ಹಿತರಕ್ಷಣಾ ವೇದಿಕೆಯಿಂದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರೀಯಾ ಅವರಿಗೆ ಮನವಿ ಸಲ್ಲಿಸಿದರು.
“ನಗರದ ಹೃದಯಭಾಗದ ದೀಪಾ ನರ್ಸಿಂಗ್ ಮುಂಭಾಗದ ಬೈಪಾಸ್ ರಸ್ತೆಯ ವಾಣಿಜ್ಯ ಸಂಕೀರ್ಣದಲ್ಲಿ ಕಳೆದ ಎರಡು ತಿಂಗಳಿನಿಂದ ನರ್ಸರಿಯಿಂದ 8ನೇ ತರಗತಿವರೆಗೆ ಅನಧಿಕೃತ ಶಾಲೆಯನ್ನು ತೆರೆಯಲಾಗಿದೆ. ದಾಖಲಾತಿ ಕೋರಿ ಸಾರ್ವಜನಿಕ, ಬಹಿರಂಗ ಹಾಗೂ ಕಾನೂನು ಬಾಹಿರವಾಗಿ ಅನೇಕ ತಿಂಗಳಿಂದ ಶಾಲೆಯನ್ನು ನಡೆಸಲಾಗುತ್ತಿದೆ. ಅಲ್ಲದೆ ಈ ಹೆಸರಿನಲ್ಲೇ ನೂತನ ನ್ಯಾಯಾಲಯದ ಕಟ್ಟಡದ ಬಳಿ ಮತ್ತೊಂದು ಶಾಲೆಯನ್ನು ತೆರೆಯಲಾಗಿದೆ” ಎಂದು ಸಾರ್ವಜನಿಕ ಹಿತರಕ್ಷಣಾ ವೇದಿಕೆ ವಿನೋದ್ ಬೊಗಸೆ ತಿಳಿಸಿದರು.
ಈ ಸಂಬಂಧ ಬೈಪಾಸ್‌ನ ವಾಣಿಜ್ಯ ಸಂಕೀರ್ಣದಲ್ಲಿ ಅನಧಿಕೃತ ಶಾಲೆಗೆ ದಾಖಲಾಗಿರುವ ಮಕ್ಕಳ ಭವಿಷ್ಯವನ್ನು ಹಾಳುಮಾಡುವ ಹುನ್ನಾರದಿಂದ ಸಾರ್ವಜನಿಕ ವಲಯದಲ್ಲಿ ಒಳಪಟ್ಟಿದ್ದನ್ನು ಗಮನಿಸಿ ಸಾರ್ವಜನಿಕ ಹಿತರಕ್ಷಣಾ ವೇದಿಕೆ ಸ್ಥಳಕ್ಕೆ ತೆರಳಿ ಪರೀಕ್ಷಿಸಿದ್ದು, ಕೂಡಲೇ ಅನಧಿಕೃತ ಶಾಲೆಯ ಕಡಿವಾಣಕ್ಕೆ ಉಸ್ತುವಾರಿ ಕಾರ್ಯದರ್ಶಿಗಳು ಮುಂದಾಗಬೇಕು ಎಂದು ಸಾರ್ವಜನಿಕ ಹಿತರಕ್ಷಣಾ ವೇದಿಕೆಯಿಂದ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕಾಶ್ಮೀರದ ಪಹಲ್ಗಾಮ್ ದಾಳಿ ಖಂಡಿಸಿ ರೈತ ಸಂಘ ಪ್ರತಿಭಟನೆ
ಈ ವೇಳೆ ಸಮಿತಿಯ ಉಪಾಧ್ಯಕ್ಷ ಕೋಟೆ ಸೋಮಣ್ಣ, ಕಾರ್ಯದರ್ಶಿ ಎಸ್‌ಡಿಎಂ ಮಂಜು, ಸದಸ್ಯರಾದ ಸಿ ಹೆಚ್ ಶ್ರೀನಿವಾಸ್, ರಾಜೇಶ್, ರಿಜ್ವಾನ್, ಶ್ರೀಧರ್, ಪಾಪಣ್ಣ, ಶರತ್ ಸೇರಿದಂತೆ ಇತರರು ಇದ್ದರು.
